ಕಾರಟಗಿ:
ಪರಿಸರ ಸ್ವಚ್ಛತೆ ಕೇವಲ ಪೌರ ಕಾರ್ಮಿಕರಿಗೆ ಮಾತ್ರ ಸೀಮಿತವಾದುದದಲ್ಲ. ಸ್ವಚ್ಛ ಭಾರತಕ್ಕೆ ಎಲ್ಲರೂ ಕೈಜೋಡಿಸಬೇಕು. ಜತೆಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಮತ್ತು ಪಾಲ್ಗೊಳ್ಳುವ ಕೆಲಸ ಮಾಡಿದರೆ ಮಾತ್ರ ಸ್ವಚ್ಛತೆ ಕಾರ್ಯ ಅಭಿಯಾನ ಯಶಸ್ವಿಯಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ ಹೇಳಿದರು.ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಪುರಸಭೆ ಕಾರ್ಯಾಲಯ ಸಹಯೋಗದಲ್ಲಿ ಇಲ್ಲಿನ ಸಿ. ಮಲ್ಲಿಕಾರ್ಜುನ ನಾಗಪ್ಪ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಸ್ವಚ್ಛತಾ ಹೀ ಸೇವೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪ್ರತಿಯೊಬ್ಬರಲ್ಲಿ ಸ್ವಚ್ಛ ಪರಿಸರ ಬೆಳೆಸಲು ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅರಿವು ಮೂಡಿಸುವ ಉದ್ದೇಶದಿಂದ ಸ್ವಚ್ಛತಾ ಹೀ ಸೇವೆ ಅಭಿಯಾನದಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರು ಆರೋಗ್ಯದಿಂದ ಬದುಕು ನಿರ್ವಹಿಸಲು ಸ್ವಚ್ಛತೆ ಬೇಕು. ಹೀಗಾಗಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದರು.ವೇಗವಾಗಿ ಬೆಳೆಯುತ್ತಿರುವ ಪಟ್ಟಣದಲ್ಲಿ, ಮುಖ್ಯವಾಗಿ ಹೊಸ ಬಡಾವಣೆಗಳಲ್ಲಿ ಸಸಿಗಳನ್ನು ಬೆಳೆಸಬೇಕು. ಇದರಿಂದ ಶುದ್ಧ ವಾತಾವರಣ ಸಿಗುತ್ತದೆ. ಇದಕ್ಕೆ ಸಮೂದಾಯದ ಸಹಕಾರವೂ ಅಗತ್ಯವಾಗಿದೆ ಎಂದ ಅವರು, ಸ್ವಚ್ಛ ಪರಿಸರಕ್ಕೆ ಆದ್ಯತೆ ನೀಡಿ ಮರ-ಗಿಡ ಬೆಳೆಸಿ-ಪಾಲನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸುರ ಮಾತನಾಡಿ, ನಿಮ್ಮ ಮನೆ ಮತ್ತು ಸುತ್ತಲಿನ ಪ್ರದೇಶದ ಸ್ವಚ್ಛವಾಗಿಟ್ಟುಕೊಳ್ಳಿ. ಸ್ವಚ್ಛ ಮಾಡುವ ಕೆಲಸ ಪುರಸಭೆಯದ್ದೆ ಎಂದು ಭಾವಿಸಬೇಡಿ. ಇದು ನಿಮ್ಮ ಕೆಲಸವೂ ಸಹ. ವೈಯಕ್ತಿಕ ಸ್ವಚ್ಛತೆ ಜತೆಗೆ ಪರಿಸರದ ಕಾಳಜಿ ಮೈಗೂಡಿಸಿಕೊಂಡಾಗ ಉತ್ತಮ ಆರೋಗ್ಯದ ಜತೆಗೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಸುಂದರ ಪರಿಸರ ನಿರ್ಮಿಸುವುದು ನಮ್ಮ ಕರ್ತವ್ಯ ಆಗುವ ಜತೆಗೆ ನಿತ್ಯ, ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸಿ ಮುಂದಿನ ಪೀಳಿಗೆಗೆ ಪರಿಸರ ಕಾಳಜಿ ಪಸರಿಸಬೇಕು ಎಂದರು.ಈ ವೇಳೆ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಅವಾಸ್ ಯೋಜನೆ ೨.೦ ಅಡಿ ಅಂಗೀಕಾರ ಆಂದೋಲನದಲ್ಲಿ ರಸ ಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆ ನಡೆಸಲಾಯಿತು. ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸುರ ದಂಪತಿಯನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯ ಶ್ರೀನಿವಾಸ, ಅಧಿಕಾರಿಗಳಾದ ಅಕ್ಷತಾ, ಮಲ್ಲಮ್ಮ, ತಾಜುದ್ದೀನ್, ರಮೇಶ ಕೆಂಗೇರಿ, ರಾಜಶೇಖರ ಆನೆಹೋಸುರ, ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.