ವಸಂತಕುಮಾರ್ ಕತಗಾಲ
ಕಾರವಾರ: ಸಾಮಾಜಿಕ ಜಾಲತಾಣಗಳಲ್ಲಿ ಯುವ ಜನತೆಯಿಂದ ಸೇವ್ ಶರಾವತಿ ಅಭಿಯಾನ ವ್ಯಾಪಕವಾಗಿ ನಡೆಯುತ್ತಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಡುವುದಾಗಿ ಸರ್ಕಾರ ಅಧಿಕೃತವಾಗಿ ಪ್ರಕಟಿಸುವ ತನಕ ಹೋರಾಟ ಮುಂದುವರಿಯುವುದಾಗಿ ತಿಳಿಸಲಾಗಿದೆ. ಇದುವರೆಗೆ ಯೋಜನೆಗಳು ಬಂದಾಗ ಕೇವಲ ಪರಿಸರವಾದಿಗಳು ಹಾಗೂ ಸ್ಥಳೀಯ ಜನತೆ ಮಾತ್ರ ಹೋರಾಟಕ್ಕೆ ಇಳಿಯುತ್ತಿದ್ದರು. ಯೋಜನೆಯ ವಿರುದ್ಧ ಸೆಣಸುತ್ತಿದ್ದರು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಮೊದಲ ಬಾರಿಗೆ ಯುವ ಸಮೂಹ ಅತಿ ದೊಡ್ಡ ಸಂಖ್ಯೆಯಲ್ಲಿ ನಿಂತಿದೆ.ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್, ಫೇಸ್‌ಬುಕ್, ಎಕ್ಸ್ ಗಳಲ್ಲಿ ಸೇವ್ ಶರಾವತಿ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಯೋಜನೆ ವಿರೋಧಿಸಿ ಪೋಸ್ಟ್ ಮಾಡಲಾಗುತ್ತಿದೆ. ರೀಲ್ಸ್ ಗಳನ್ನು ಮಾಡಲಾಗುತ್ತಿದೆ. ಉತ್ತರ ಕನ್ನಡ, ಶಿವಮೊಗ್ಗ ಎರಡೂ ಜಿಲ್ಲೆಗಳ ಯುವಕ, ಯುವತಿಯರಲ್ಲದೇ ಬೇರೆ ಬೇರೆ ಜಿಲ್ಲೆಗಳು, ಬೆಂಗಳೂರಿನ ಪರಿಸರಪ್ರಿಯರೂ ಇದಕ್ಕೆ ದೊಡ್ಡ ಸಂಖ್ಯೆಯಲ್ಲಿ ಕೈಜೋಡಿಸಿದ್ದಾರೆ.
ಶರಾವತಿ ನದಿಯ ಮಹತ್ವ ವಿವರಿಸುವ ಹಾಗೂ ಯೋಜನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ನೈಜ ಚಿತ್ರಣದ ಜೊತೆಗೆ ಎಐ ವಿಡಿಯೋ, ಫೋಟೋಗಳನ್ನೂ ಬಳಸಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ.ಯೋಜನೆ ವಿರೋಧಿಸಿ ಯುವ ಜನತೆ ಬೆಂಗಳೂರಿನಲ್ಲಿ ಬೈಕ್ ರ್‍ಯಾಲಿ ನಡೆಸಿದ್ದಾರೆ. ಹೊನ್ನಾವರದಿಂದ ಬೈಕ್ ರ್‍ಯಾಲಿ ನಡೆದಿದೆ. ಬೇರೆ ಬೇರೆ ಉದ್ಯೋಗಳಲ್ಲಿ ಜಿಲ್ಲೆಯ ಹೊರಗಡೆಯಲ್ಲಿ ನೆಲೆಸಿರುವ ಯುವ ಜನತೆ ಸಾಮಾಜಿಕ ಜಾಲತಾಣದ ಮೂಲಕ ಯೋಜನೆ ವಿರುದ್ಧ ಮುಗಿಬಿದ್ದಿರುವುದು ಯೋಜನಾ ವಿರೋಧಿ ಹೋರಾಟಕ್ಕೆ ಭಾರೀ ಬಲ ಬಂದಂತಾಗಿದೆ.
ಜಿಲ್ಲೆಯ ಸಾಹಿತಿಗಳು, ಕಲಾವಿದರು, ಗಣ್ಯರನ್ನು ಮಾತನಾಡಿಸಿ ಯೋಜನೆಯ ವಿರುದ್ಧದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಜೊತೆಗೆ ಶರಾವತಿ ನದಿಯ ವಿಶೇಷತೆ, ಅಭಯಾರಣ್ಯದಲ್ಲಿ ಏನೆಲ್ಲ ಜೀವ ವೈವಿಧ್ಯತೆ ಇದೆ ಎಂಬ ಬಗ್ಗೆ ಚಿತ್ರಣ ನೀಡುತ್ತಿದ್ದಾರೆ.ಸಾರ್ವಜನಿಕ ಆಲಿಕೆ ಸಭೆಯ ಬಗ್ಗೆ ನಿರಂತರವಾಗಿ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಿದ್ದಲ್ಲೇ, ಸಾಕಷ್ಟು ಯುವ ಜನತೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಕೆಲವರು ಮಾತನಾಡಿ ಯೋಜನೆಯನ್ನು ಸಾರಾಸಗಟಾಗಿ ವಿರೋಧಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರ ಅಧಿಕೃತವಾಗಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಡುವ ತನಕ ಸೋಶಿಯಲ್ ಮೀಡಿಯಾಗಳಲ್ಲಿ ಹೋರಾಟ ನಡೆಯಲಿದೆ ಎಂದು ತಿಳಿಸಲಾಗುತ್ತಿದೆ.ಬೀದಿಗಿಳಿದು ಹೋರಾಡುತ್ತಿರುವವರ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ನಿರಂತರ ಸಮರ ಯೋಜನೆ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರ ಹಾಗೂ ಕೆಪಿಸಿಗೆ ನುಂಗಲಾರದ ತುತ್ತಾಗಿದೆ.