ರಸ್ತೆ ಸುರಕ್ಷತೆ, ತುರ್ತು ಚಿಕಿತ್ಸೆಗೆ ಸಂಸದರ ಕಟ್ಟುನಿಟ್ಟಿನ ಸೂಚನೆ

KannadaprabhaNewsNetwork |  
Published : Jan 22, 2026, 02:00 AM IST
ಕ್ಯಾಪ್ಷನ21ಕೆಡಿವಿಜಿ37 ದಾವಣಗೆರೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಎಸ್‌ಪಿ ಉಮಾ ಪ್ರಶಾಂತ್‌ ಇತರರು ಇದ್ದರು.  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿನ ಮರಣ ಪ್ರಮಾಣವನ್ನು ತಗ್ಗಿಸಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮತ್ತು ಅಪಘಾತವಾದಾಗ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ವೈದ್ಯಕೀಯ ಸೌಲಭ್ಯವಿರುವ ಸುಸಜ್ಜಿತ ಅಸ್ಪತ್ರೆಗಳನ್ನು ಗುರುತಿಸಿ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸುವ ಕೆಲಸವಾಗಬೇಕೆಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

- ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ - - -

ಕನ್ನಡಪ್ರಭ ವಾರ್ತೆ ​ದಾವಣಗೆರೆ

ಜಿಲ್ಲೆಯಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿನ ಮರಣ ಪ್ರಮಾಣವನ್ನು ತಗ್ಗಿಸಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮತ್ತು ಅಪಘಾತವಾದಾಗ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ವೈದ್ಯಕೀಯ ಸೌಲಭ್ಯವಿರುವ ಸುಸಜ್ಜಿತ ಅಸ್ಪತ್ರೆಗಳನ್ನು ಗುರುತಿಸಿ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸುವ ಕೆಲಸವಾಗಬೇಕೆಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಅಪಘಾತವಾದಾಗ ​ಗೋಲ್ಡನ್ ಹವರ್ ಚಿಕಿತ್ಸೆಗೆ ಆದ್ಯತೆ ನೀಡಬೇಕು. ಅಪಘಾತ ಸಂಭವಿಸಿದ ಮೊದಲ 1 ಗಂಟೆ ಅತ್ಯಂತ ನಿರ್ಣಾಯಕ, ಗಾಯಾಳುಗಳನ್ನು ಕೂಡಲೇ ಹತ್ತಿರದ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್ ಚಾಲಕರು ಮತ್ತು ಪೊಲೀಸರ ನಡುವೆ ಅತ್ಯಂತ ವೇಗದ ಸಮನ್ವಯ ಇರಬೇಕು ಎಂದರು.

​ಹೆದ್ದಾರಿ ಟ್ರಾಮಾ ಸೆಂಟರ್:

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಈಡಾದವರಿಗೆ ತಕ್ಷಣದ ಚಿಕಿತ್ಸೆ ನೀಡಲು ಹತ್ತಿರದ ಆಸ್ಪತ್ರೆಗಳನ್ನು ಗುರುತಿಸಿ, ತುರ್ತು ಘಟಕಗಳು ಸದಾ ಸನ್ನದ್ಧವಾಗಿ ಇರುವಂತೆ ನೋಡಿಕೊಳ್ಳಬೇಕು. ನಗದುರಹಿತ ಉಚಿತ ಚಿಕಿತ್ಸಾ ಸೌಲಭ್ಯ ಬಳಸಬೆಕು. ಅಪಘಾತವಾದಾಗ ಗಾಯಾಳು ಸಾಗಿಸುವ ಆ್ಯಂಬುಲೆನ್ಸ್‌ ನೇರವಾಗಿ ಸಮೀಪದ ಸುಸಜ್ಜಿತ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. 15 ದಿನಗಳ ಒಳಗಾಗಿ ಬೀದಿದೀಪಗಳ ದುರಸ್ತಿ ಮತ್ತು ಅಳವಡಿಕೆ ಕಾರ್ಯ ಪೂರ್ಣಗೊಳ್ಳಬೇಕು ಸೂಚಿಸಿದರು.

ಸಂಸದರು ಟೋಲ್ ವಲಯದಲ್ಲಿ ಆ್ಯಂಬುಲೆನ್ಸ್ ಮತ್ತು ತುರ್ತು ಸೇವೆ ವ್ಯವಸ್ಥೆ ಬಗ್ಗೆ ಮಾಹಿತಿ ಕೇಳಿದಾಗ, ಎನ್.ಎಚ್.ಎ.ಐ. ಅಧಿಕಾರಿಗಳು ಸಮರ್ಪಕ ಅಂಕಿ ಅಂಶಗಳಿಲ್ಲದೇ ಮಾಹಿತಿ ನೀಡಿದರು. ಆಗ ಸಂಸದರು ಅಪಘಾತಗಳ ಸಂದರ್ಭ ಎಷ್ಟು ಜನರ ಪ್ರಾಣ ಉಳಿಸಲಾಗಿದೆ. ಯಾವ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂಬ ಬಗ್ಗೆ ಲಿಖಿತ ವರದಿ ನೀಡಲು ಸೂಚಿಸಿದರು. ಕುಂದುವಾಡ ಕೆಳ ಸೇತುವೆ ನಿರ್ಮಾಣ, ಸೇವಾ ರಸ್ತೆ ಸೇರಿದಂತೆ ರಸ್ತೆಯಲ್ಲಿನ ಮಳೆಯ ನೀರು ಹೋಗಲು ನಿರ್ಮಾಣ ಮಾಡಿದ ಚರಂಡಿಯ ಅವೈಜ್ಞಾನಿಕತೆ ಬಗ್ಗೆ ಪ್ರಶ್ನಿಸಿ ಸರಿಪಡಿಸಲು ಸೂಚನೆ ನೀಡಿದರು. ಬಾಡಾ ಕ್ರಾಸ್ ಮತ್ತು ಎಸ್.ಎಸ್.ಆಸ್ಪತ್ರೆ ಬಳಿಯ ಅಂಡರ್‌ಪಾಸ್ ಪಾಸ್ ವಿಸ್ತರಣೆಗೆ ರೂಪಿಸಲಾದ ಕ್ರಿಯಾ ಯೋಜನೆಯನ್ನು ಮಂಡಿಸಲು ತಿಳಿಸಿದರು.

ರಸ್ತೆ ಉಬ್ಬುಗಳು, ಸೂಚನಾ ಫಲಕಗಳು ಮತ್ತು ಬೀದಿ ದೀಪಗಳ ವ್ಯವಸ್ಥೆ ಮಾಡಬೇಕು. ಪ್ರಮುಖ ರಸ್ತೆಗಳಲ್ಲಿ ಮತ್ತು ಅಂಡರ್‌ಪಾಸ್‌ಗಳಲ್ಲಿ ಫುಟ್‌ಪಾತ್ ಅತಿಕ್ರಮಣ ಮುಲಾಜಿಲ್ಲದೆ ತೆರವುಗೊಳಿಸಬೇಕು. ಪರಿಸರ ಸ್ನೇಹಿ ಸಂಚಾರಕ್ಕೆ ಒತ್ತು ನೀಡಲು ನಗರ ಪ್ರದೇಶಗಳಲ್ಲಿ ಸೈಕ್ಲಿಂಗ್ ಪ್ರೋತ್ಸಾಹಿಸುವಂತೆ ಮತ್ತು ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸುವಂತೆ ತಿಳಿಸಿದರು.

​ಪ್ರೀಪೇಯ್ಡ್ ಆಟೋ ನಿಲ್ದಾಣಗಳು:

ನಗರದಲ್ಲಿ ಪ್ರೀಪೇಯ್ಡ್ ಆಟೋ ರಿಕ್ಷಾ ವ್ಯವಸ್ಥೆ ಯಶಸ್ವಿಯಾಗುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಇನ್ನು ನಾಲ್ಕು ಕಡೆಗಳಲ್ಲಿ ಇಂತಹ ನಿಲ್ದಾಣಗಳನ್ನು ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.​ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ದಾವಣಗೆರೆಗೆ 50 ರಿಂದ 100 ಹೊಸ ಎಲೆಕ್ಟ್ರಿಕಲ್ ಬಸ್‌ಗಳು ಬರಲಿದ್ದು, ಇವುಗಳನ್ನು ನಗರ ಮತ್ತು ಹರಿಹರದ ನಡುವಿನ ಸಂಚಾರಕ್ಕೆ ಬಳಸಲಾಗುವುದು. ಆಟೋ ರಿಕ್ಷಾಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರ ತುಂಬುವ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಹೇಳಿದರು.

ಸ್ವಚ್ಛತೆ-ಸಿಸಿಟಿವಿ:

ದಾವಣಗೆರೆ ನಗರ ಪ್ರವೇಶ ದ್ವಾರಗಳಲ್ಲಿ ಕಸ ಸುರಿಯುವವರನ್ನು ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮೆರಾಗಳ ಅಳವಡಿಸುವಂತೆ ಮತ್ತು ನಗರದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಯಿತು. ಹಲವಾರು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು.

- - -

(ಬಾಕ್ಸ್‌)

* ​ಸಂಚಾರಿ ನಿಯಮ ಉಲ್ಲಂಘನೆ- ದಂಡ ಸಂಗ್ರಹ: ​

ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ​ಹೆಲ್ಮೆಟ್ ರಹಿತ ಚಾಲನೆಗೆ 2025ರಲ್ಲಿ ದಾಖಲೆಯ 73,247 ಪ್ರಕರಣಗಳು ದಾಖಲಾಗಿದ್ದು, ₹2.92 ಕೋಟಿಗೂ ಅಧಿಕ ದಂಡ ಸಂಗ್ರಹಿಸಲಾಗಿದೆ. ​ಮದ್ಯಪಾನ ಮಾಡಿ ಚಾಲನೆ ಮಾಡಿದ ಪ್ರಕರಣಗಳು 2023ರಲ್ಲಿ 31 ಇದ್ದರೆ, 2025ರಲ್ಲಿ 1,104ಕ್ಕೆ ಏರಿಕೆ ಕಳವಳಕಾರಿ ಸಂಗತಿ. ​ಸೀಟ್ ಬೆಲ್ಟ್ ಧರಿಸದಿರುವುದು 2025ರಲ್ಲಿ 4,285 ಪ್ರಕರಣಗಳು ದಾಖಲಾಗಿವೆ. ​ಅತಿ ವೇಗದ ಚಾಲನೆ 2025ರಲ್ಲಿ 953 ಪ್ರಕರಣಗಳು ದಾಖಲಾಗಿದ್ದು, ₹7.22 ಲಕ್ಷ ದಂಡ ವಿಧಿಸಲಾಗಿದೆ. 2025 ರಲ್ಲಿ ಒಟ್ಟು 1,33,213 ಪ್ರಕರಣಗಳನ್ನು ದಾಖಲಿಸಿ ₹6.37 ಕೋಟಿ ದಂಡ ಸಂಗ್ರಹಿಸಲಾಗಿದೆ.

ಅಪಘಾತ ವಲಯಗಳು:

​ಜಿಲ್ಲೆಯಲ್ಲಿ ಅಪಘಾತಗಳು ಹೆಚ್ಚು ಸಂಭವಿಸುವ ''''ಬ್ಲಾಕ್ ಸ್ಪಾಟ್''''ಗಳನ್ನು ಗುರುತಿಸಲಾಗಿದೆ, ​ಒಟ್ಟು ಗುರುತಿಸಲಾದ ಬ್ಲಾಕ್ ಸ್ಪಾಟ್‌ಗಳು 32, ​ಸರಿಪಡಿಸಲಾದ ಸ್ಥಳಗಳು 13, ​ಇನ್ನೂ ಅಪಾಯಕಾರಿ ಆಗಿರುವ ಸ್ಥಳಗಳು 19 ಎಂದು ಗುರುತಿಸಿದ್ದು ​2026 ರಲ್ಲಿ ಹೊಸದಾಗಿ 8 ಸ್ಥಳಗಳನ್ನು ಗುರುತಿಸಲಾಗಿದೆ. - - -

(ಟಾಪ್‌ ಕೋಟ್‌)

​ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ರಸ್ತೆ ನಿಯಮಗಳನ್ನು ಪಾಲಿಸಿ, ಸುಗಮ ಮತ್ತು ಸುರಕ್ಷಿತ ಪ್ರಯಾಣಕ್ಕೆ ಸಹಕರಿಸಬೇಕು.

- ಉಮಾ ಪ್ರಶಾಂತ, ಜಿಲ್ಲಾ ಎಸ್‌ಪಿ.

- - -

-21ಕೆಡಿವಿಜಿ37: ದಾವಣಗೆರೆಯಲ್ಲಿ ಸಂಸದೆ ಡಾ.ಪ್ರಭಾ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಎಸ್‌ಪಿ ಉಮಾ ಪ್ರಶಾಂತ್‌ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ: ಸಾಗ್ಯ ಕೆಂಪಯ್ಯ
ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಧರ್ಮಸ್ಥಳ ಸಂಸ್ಥೆ ಸಹಕಾರಿ: ಸಿ.ಎಸ್.ಪುಟ್ಟರಾಜು