ಕನ್ನಡಪ್ರಭ ವಾರ್ತೆ ಮಡಿಕೇರಿ
ರಸ್ತೆ ಅಪಘಾತ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಜನರಿಗೆ ರಸ್ತೆ ಸುರಕ್ಷತಾ ನಿಯಮ ಪಾಲಿಸುವಂತೆ ಪ್ರೇರೇಪಿಸುವ ಉದ್ದೇಶದಿಂದ ಮಡಿಕೇರಿಯಲ್ಲಿ ರಸ್ತೆ ಸುರಕ್ಷತಾ ಓಟ ನಡೆಯಿತು.ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮೈಂಡ್ ಎಂಡ್ ಮ್ಯಾಟರ್ ಹಾಗೂ ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿ ಸಹಯೋಗದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಮುದ್ದಂಡ ಹಾಕಿ ಉತ್ಸವ ಮೈದಾನವರೆಗೆ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಫಲಕಗಳನ್ನು ಹಿಡಿದು ಓಡುವ ಮೂಲಕ ಜಾಗೃತಿ ಮೂಡಿಸಲಾಯಿತು.
ಓಟದಲ್ಲಿ ಜಿಲ್ಲೆಯ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಯ ಸದಸ್ಯರು, ಇಲಾಖೆಯ ಅಧಿಕಾರಿ, ಸಿಬ್ಬಂದಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 140 ಹೆಚ್ಚು ಮಂದಿ ಪಾಲ್ಗೊಂಡು ಜಾಗೃತಿ ಮೂಡಿಸಿದರು.ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮೈಂಡ್ ಎಂಡ್ ಮ್ಯಾಟರ್ ಸಂಸ್ಥೆಯ ಟ್ರಸ್ಟಿ ಎಂ.ಎ.ದೀಪಿಕಾ ಮಾತನಾಡಿ, ರಸ್ತೆ ಸುರಕ್ಷತಾ ನಿಯಮಗಳನ್ನು ವಿವರಿಸಿದರು. ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಕಾರು ಚಲಾಯಿಸುವಾಗ ಸೀಟ್‌ಬೆಲ್ಟ್ ಧರಿಸದೆ ಇರುವುದು ಅಪಘಾತಗಳಿಗೆ ಮುಖ್ಯ ಕಾರಣ ಎಂದರು.
ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ಓಟ ಆಯೋಜನೆ ಮಾಡಿದ್ದು, ಓಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು, ಜೊತೆಗೆ ತಮ್ಮ ಸ್ನೇಹಿತರು, ಕುಟುಂಬಸ್ಥರಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಮಾತನಾಡಿ, ಸಂಚಾರ ನಿಯಮಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವಿನ ಕೊರತೆ ಮತ್ತು ನಿರ್ಲಕ್ಷ್ಯವೇ ಅವಘಡಗಳಿಗೆ ಕಾರಣ ಎಂದರು. ನಿಯಮವನ್ನು ನಿರ್ಲಕ್ಷ್ಯ ಮಾಡಿರುವುದರಿಂದ ಒಬ್ಬ ಬಾಲಕ ತನ್ನ ಪ್ರಾಣ ಕಳೆದುಕೊಂಡ ಘಟನೆಯನ್ನು ನೆನಪಿಸಿಕೊಂಡರು. ಪ್ರತಿಯೊಬ್ಬರು ವಾಹನ ಚಾಲಯಿಸುವಾಗ ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದರು.
ಸಂಚಾರಿ ಠಾಣಾ ಎಎಸ್‌ಐ ನಂದಾ, ಮೈಂಡ್ ಎಂಡ್ ಮ್ಯಾಟರ್ ಸಂಸ್ಥೆಯ ಟ್ರಸ್ಟಿ ಅಚ್ಚಯ್ಯ, ಪ್ರಮುಖರಾದ ಗಿರೀಶ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಓಟದಲ್ಲಿ ಭಾಗವಹಿಸಿದ ಎಲ್ಲರಿಗೂ ಬೆಣ್ಣೆಹಣ್ಣಿನ ಗಿಡಗಳು ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು.