ಮಡಿಕೇರಿ: ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಾಜಾಸೀಟು ರಸ್ತೆ ಅಭಿವೃದ್ಧಿ, ಸಂಪಾಜೆಯಿಂದ ಕುಶಾಲನಗರದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಡೆಯುವಲ್ಲಿ ಕೈಗೊಳ್ಳಲಾಗಿರುವ ಕ್ರಮಗಳು, ಕುಶಾಲನಗರದಿಂದ ಕೂಡಿಗೆ ಮಾರ್ಗದ ರಸ್ತೆ, ವಿರಾಜಪೇಟೆ-ಗೋಣಿಕೊಪ್ಪ ರಸ್ತೆ ಮತ್ತಿತರ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ನಗರದ ರಾಜಾಸೀಟು ರಸ್ತೆ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಿರ್ದೇಶನ ನೀಡಿದರು.
ಈ ಸಂದರ್ಭ ಮಾತನಾಡಿದ ನಗರಾಭಿವೃದ್ಧಿ ಯೋಜನಾ ಶಾಖೆಯ ಕಾರ್ಯಪಾಲಕ ಎಂಜಿನಿಯರ್ ಡಿ.ಶ್ರೀನಿವಾಸ್ ಅವರು ಕಾಂಕ್ರೀಟ್ ಸಂದರ್ಭದಲ್ಲಿ ರಾಜಾಸೀಟು ರಸ್ತೆಯನ್ನು ಸಂಪೂರ್ಣ ಮುಚ್ಚುವುದು ಒಳಿತು ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.ರಾಜಾಸೀಟು ರಸ್ತೆಯ 7.50 ಮೀ. ಅಗಲ ಮತ್ತು 720 ಮೀ. ಉದ್ದವನ್ನು ಸುಮಾರು 1.50 ಕೋಟಿ ರು. ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
‘ರಾಜಸೀಟು ರಸ್ತೆಯ 7.50 ಮೀ. ಅಗಲದಲ್ಲಿ 3.75 ಮೀ ಅರ್ಧ ರಸ್ತೆ ಕಾಮಗಾರಿ ಕೈಗೊಂಡು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿದ್ದಲ್ಲಿ ಮತ್ತೊಂದು ಅರ್ಧ ಭಾಗ ನಂತರ ಕೈಗೊಳ್ಳಬಹುದು. ಆದರೆ ರಸ್ತೆ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವುದು ಕಷ್ಟಸಾಧ್ಯವಾಗಲಿದೆ ಎಂದು ಶ್ರೀನಿವಾಸ್ ಅವರು ಅಭಿಪ್ರಾಯಪಟ್ಟರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಪೊಲೀಸ್ ಇಲಾಖೆಯಿಂದ ವಾಹನ ಸಂಚಾರ ಮಾರ್ಗ ಬದಲಾವಣೆ ಬಗ್ಗೆ ಅಗತ್ಯ ವರದಿ ನೀಡುವಂತೆ ಸಲಹೆ ಮಾಡಿದರು.
ಹೆದ್ದಾರಿ ವಿಭಾಗದ ಎಂಜಿನಿಯರ್ ಸಂಜೀವ್ ಕುಮಾರ್ ಅವರು ಈಗಾಗಲೇ ಹೆದ್ದಾರಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ 24.54 ಲಕ್ಷ ರು. ಬಿಡುಗಡೆಯಾಗಿದ್ದು, ಡಿಸೆಂಬರ್, ಅಂತ್ಯದೊಳಗೆ ಕ್ಯಾಟ್‌ಐಸ್, ಸೈನ್ ಬೋರ್ಡ್, ಜೀಬ್ರಾ ಕ್ರಾಸ್ ಸೇರಿದಂತೆ ಅಗತ್ಯ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಹಾಗೆಯೇ ಆನೆಕಾಡು ಸ್ಥಳದಲ್ಲಿ ವೇಗದ ಮಿತಿಯನ್ನು ಕಡಿಮೆಗೊಳಿಸಲು ಆರು ಸ್ಥಳಗಳಲ್ಲಿ ವೈಜ್ಞಾನಿಕ ಹಂಪ್ಸ್ಗಳನ್ನು ಅಳವಡಿಸಲಾಗಿದ್ದು, ರಸ್ತೆ ಸುರಕ್ಷತಾ ಫಲಕ ಅಳವಡಿಸಲಾಗಿದೆ. ಪೊಲೀಸ್ ಇಲಾಖೆ ಜೊತೆ ಜಂಟಿ ಸಮೀಕ್ಷೆ ನಡೆಸಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್ ಸಂಜೀವ್ ಕುಮಾರ್ ಅವರು ಮಾಹಿತಿ ನೀಡಿದರು. ಲೋಕೋಪೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಪ್ರಭು ಮಾಹಿತಿ ನೀಡಿದರು.