ರಸ್ತೆ ಅಗಲೀಕರಣದಿಂದ ಪಟ್ಟಣದ ಆಸ್ತಿ ಬೆಲೆ 4 ಪಟ್ಟು ಹೆಚ್ಚು: ಎಂ.ಶ್ರೀನಿವಾಸ್

KannadaprabhaNewsNetwork |  
Published : Sep 04, 2025, 01:00 AM IST
ನರಸಿಂಹರಾಜಪುರ ಪಟ್ಟಣದ ರಸ್ತೆ ಅಗಲೀಕರಣದ ಖಾತೆದಾರರ ಸನಮಾಲೋಚನಾ ಸಭೆಯಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಮಾತನಾಡಿದರು.ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮತ್ತಿತರರು ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ರಸ್ತೆ ಅಗಲೀಕರಣದಿಂದ ಪಟ್ಟಣದಲ್ಲಿ ಆಸ್ತಿ ಬೆಲೆ 4 ಪಟ್ಟು ಹೆಚ್ಚಾಗಲಿರುವ ಹಿನ್ನಲೆಯಲ್ಲಿ ಎಲ್ಲಾ ಖಾತೆದಾರರು ಸಹಕಾರ ನೀಡಬೇಕು ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಮನವಿ ಮಾಡಿದರು.

- ರಸ್ತೆ ಅಗಲೀಕರಣಕ್ಕೆ ಎಲ್ಲಾ ಖಾತೆದಾರರು ಸಹಕಾರ ನೀಡಬೇಕು। ರಸ್ತೆ ಅಗಲೀಕರಣದ ಖಾತೆದಾರರ ಸಮಾಲೋಚನಾ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ರಸ್ತೆ ಅಗಲೀಕರಣದಿಂದ ಪಟ್ಟಣದಲ್ಲಿ ಆಸ್ತಿ ಬೆಲೆ 4 ಪಟ್ಟು ಹೆಚ್ಚಾಗಲಿರುವ ಹಿನ್ನಲೆಯಲ್ಲಿ ಎಲ್ಲಾ ಖಾತೆದಾರರು ಸಹಕಾರ ನೀಡಬೇಕು ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಮನವಿ ಮಾಡಿದರು.ಬುಧವಾರ ಪಟ್ಟಣದ ಕೋಟೆ ಆಂಜನೇಯಸ್ವಾಮಿ ಸಭಾ ಭವನದಲ್ಲಿ ರಸ್ತೆ ಅಗಲೀಕರಣ ಸಂಬಂಧ ಖಾತೆದಾರರ ಸಮಾಲೋಚನ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದಲ್ಲಿ 115 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ರಸ್ತೆ ನಂತರ ಅಗಲೀಕರಣವೇ ಆಗಿಲ್ಲ. ಈಗಿರುವ ರಸ್ತೆ ಕಿರಿದಾಗಿದ್ದು ಓಡಾಡಲು ಹಾಗೂ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ರಸ್ತೆ ಅಗಲೀಕರಣ ಅನಿವಾರ್ಯತೆ ಮನಗಂಡು ಕೆಲಸ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ನೇಹ ಉಪಯೋಗಿಸಿಕೊಂಡು ರಸ್ತೆ ಅಗಲೀಕರಣಕ್ಕೆ ₹60 ಕೋಟಿ ಮಂಜೂರು ಮಾಡಿಸಿದ್ದೇನೆ. ರಸ್ತೆ ಅಗಲೀಕರಣ ಹಾಗೂ ಪರಿಹಾರ ನೀಡಲು ಹಣ ಕಡಿಮೆಯಾದರೆ ಇನ್ನಷ್ಟು ಹಣ ನೀಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಅನೇಕ ಕಡೆ ಪರಿಹಾರ ನೀಡದೆ ರಸ್ತೆ ಅಗಲೀಕರಣ ಮಾಡಿದ್ದಾರೆ. ಆದರೆ, ಪರಿಹಾರ ನೀಡಿ ರಸ್ತೆ ಅಗಲೀಕರಣ ಮಾಡಬೇಕು ಎಂಬ ಉದ್ದೇಶದಿಂದ ಇಷ್ಟು ಹಣ ಮಂಜೂರು ಮಾಡಿಸಿದ್ದೇನೆ ಎಂದರು.ಮುಂದಿನ 1 ವರ್ಷದ ಒಳಗೆ ರಸ್ತೆ ಅಗಲೀಕರಣ ಕಾಮಗಾರಿ ಆಗಬೇಕಾಗಿದೆ. ಕಾನೂನು ಬದ್ಧವಾಗಿ ಜಿಲ್ಲಾಡಳಿತ ಪರಿಹಾರ ನೀಡಲಿದೆ. ನರಸಿಂಹರಾಜಪುರದಲ್ಲೇ ಹುಟ್ಟಿರುವ ನಾನು ಈ ಊರನ್ನು ಅಭಿವೃದ್ಧಿ ಮಾಡಬೇಕೆಂಬ ಕನಸಿದೆ. ಈಗಾಗಲೇ ಹೊನ್ನೇಕೊಡಿಗೆ- ನರಸಿಂಹರಾಜಪುರ ಸಂಪರ್ಕ ಸೇತುವೆಗೆ ಮುಖ್ಯಮಂತ್ರಿ ₹30 ಕೋಟಿ ನೀಡಿದ್ದಾರೆ. ಸೇತುವೆಯಿಂದ ಪಟ್ಟಣಕ್ಕೆ ಬರುವ ರಸ್ತೆ ಕಾಮಗಾರಿಗೆ ₹5 ಕೋಟಿ, ಹೊಸ ಸೇತುವೆ ಸಮೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 3 ಎಕರೆ ಜಾಗ ಮಂಜೂರಾಗಿದೆ. ಅಲ್ಲಿ ರೆಸಾರ್ಟ್, ವಾಟರ್ ಪಾರ್ಕ್ ಮಾಡಲಾಗುವುದು ಎಂದು ಮಾಹಿತಿ ನಡಿದರು.

ಸಮೀಪದ ಭದ್ರಾ ನದಿಯಲ್ಲಿ ಸಣ್ಣ ಡ್ಯಾಂ ಕಟ್ಟಿ ಬೋಟಿಂಗ್ ವ್ಯವಸ್ಥೆ ಮಾಡುವುದರಿಂದ ಪಟ್ಟಣದಲ್ಲಿ ಪ್ರವಾಸೋದ್ಯಮ ಬೆಳೆಯಲಿದೆ. ರಸ್ತೆ ಅಗಲೀಕರಣಕ್ಕೆ ಎಲ್ಲಾ ಖಾತೆದಾರರು ಸಹಕರಿಸಿ ಪಟ್ಟಣದ ಅಭಿವೃದ್ಧಿಗೆ ಅವಕಾಶ ಕೊಡಬೇಕು ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ₹60 ಕೋಟಿ ಮಂಜೂರಾತಿಗೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅವರ ಪರಿ ಶ್ರಮ ಕಾರಣ. ಪರಿಹಾರ ನೀಡಿದ ನಂತರವೇ ರಸ್ತೆ ಅಗಲೀಕರಣ ವಾಗಬೇಕು ಎಂಬ ಆಶಯವಿತ್ತು. ಇಲ್ಲದಿದ್ದರೆ 2 ವರ್ಷದ ಹಿಂದೆಯೇ ರಸ್ತೆ ಅಗಲೀಕರಣ ಮಾಡುತ್ತಿದ್ದೆವು. ಸರ್ಕಾರದ ಹಣ ಗ್ಯಾರಂಟಿ ಯೋಜನೆಗೆ ಹೆಚ್ಚಾಗಿ ಹೋಗುತ್ತಿರುವುದರಿಂದ ಅನುದಾನ ಕಡಿಮೆ ಬರುತ್ತಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಎಂ.ಶ್ರೀನಿವಾಸ್ ಅವರ ಸ್ನೇಹದಿಂದ ಈ ಹಣ ಬಂದಿದೆ. ರಸ್ತೆ ಅಗಲೀಕರಣದ ಸಮಯದಲ್ಲಿ ಖಾತೆದಾರರಿಗೆ ಗರಿಷ್ಠ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಭದ್ರಾ ಡ್ಯಾಂ ಕಟ್ಟಲು ನರಸಿಂಹರಾಜಪುರ ಜನತೆ ತ್ಯಾಗ ಮಾಡಿದ್ದಾರೆ. ಅದನ್ನು ಯಾರೂ ಮರೆಯಬಾರದು. ಕಡಹಿನಬೈಲು ಏತ ನೀರಾವರಿ ಯೋಜನೆಗೆ ಎಂ.ಶ್ರೀನಿವಾಸ್, ಶಾಸಕ ಟಿ.ರಾಜೇಗೌಡ ಹೆಚ್ಚುವರಿಯಾಗಿ ₹15 ಕೋಟಿ ಮಂಜೂರು ಮಾಡಿಸಿದ್ದಾರೆ. ನರಸಿಂಹರಾಜಪುರ ತಾಲೂಕಿನ ಅಭಿವೃದ್ಧಿಗೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹಾಗೂ ಶಾಸಕ ಟಿ.ಡಿ.ರಾಜೇಗೌಡ ಜೋಡೆತ್ತಿನಂತೆ ಕೆಲಸ ಮಾಡುತ್ತಿದ್ದಾರೆ. ರಸ್ತೆ ಅಗಲೀಕರಣಕ್ಕೆ ಭೂಮಿ, ಮನೆ ಕಳೆದುಕೊಂಡವರಿಗೆ ಅನ್ಯಾಯವಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ರಸ್ತೆ ಅಗಲೀಕರಣ ವಿಸ್ತೀರ್ಣ ಕಡಿಮೆ ಮಾಡಬೇಕು. ಕೆಲವರು ಆರ್ಥಿಕವಾಗಿ ಹಿಂದುಳಿದಿದ್ದು ಹೊಸ ಮನೆ ಕಟ್ಟಲು ಹಣ ಜಾಸ್ತಿ ಬೇಕಾಗುತ್ತದೆ. ಆದ್ದರಿಂದ ಪರಿಹಾರ ಜಾಸ್ತಿ ನೀಡಬೇಕು. ಅಲ್ಲದೆ ಕೆಲವರ ಮನೆಗಳು ಮಣ್ಣಿನ ಗೋಡೆಯದು. ಅಗಲೀಕರಣದ ವೇಳೆ ಗೋಡೆ ಬೀಳುವ ಸಾಧ್ಯತೆ ಇದೆ. ರಸ್ತೆ ಮದ್ಯೆ ಡಿವೈಡರ್ ಬೇಡ. ರಸ್ತೆ ಅಗಲೀಕಣಕ್ಕೆ ಸಹಕಾರ ನೀಡುತ್ತೇವೆ ಎಂದು ರಸ್ತೆ ಅಗಲೀಕರಣ ವ್ಯಾಪ್ತಿಗೆ ಬರುವ ಮನೆ ಮಾಲೀಕರು ತಮ್ಮ ಅನಿಸಿಕೆ ಹಂಚಿಕೊಂಡರು.ಸಭೆಯಲ್ಲಿ ಪಪಂ ಅಧ್ಯಕ್ಷೆ ಜುಬೇದ,ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಉಪಾಧ್ಯಕ್ಷೆ ಉಮಾ, ತರೀಕೆರೆ ಉಪ ವಿಭಾಗಾಧಿಕಾರಿ ನಟೇಶ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಶ್ರೀಧರ್, ತಹಸೀಲ್ದಾರ್ ನೂರಲ್ ಹುದಾ, ಪಿ.ಆರ್.ಸದಾಶಿವ, ಬಿ.ಎಸ್.ಆಶೀಶ್ ಕುಮಾರ್, ಎಚ್.ಬಿ.ರಘುವೀರ್, ವಿಜಯಲಕ್ಷ್ಮಿ, ಆರ್.ರಾಜಶೇಖರ್,ಲಕ್ಷ್ಮಣ ಶೆಟ್ಟಿ, ಮುನಾವರ್ ಪಾಷಾ, ಸುರೈಯಾಭಾನು,ಕುಮಾರಸ್ವಾಮಿ, ಮುಕುಂದ,ಸೋಜಾ,ವಸೀಂ, ರೇಖಾ ಮಂಜುನಾಥ್, ರೀನಾ ಮೋಹನ್ ಮತ್ತಿತರರು ಇದ್ದರು. -- ಬಾಕ್ಸ್ --ಬಸ್ಸು ನಿಲ್ದಾಣದಿಂದ ಪ್ರವಾಸಿ ಮಂದಿರ ಸರ್ಕಲ್ ವರೆಗೆ ಹಾಗೂ ಪಟ್ಟಣ ಪಂಚಾಯಿತಿ ಮುಂಭಾಗದಿಂದ ಸುಂಕದಕಟ್ಟೆವರೆಗೆ ರಸ್ತೆ ಅಗಲೀಕರಣ ಮಾಡಲಾಗುತ್ತದೆ. ರಸ್ತೆ ಮದ್ಯದಿಂದ ಎರಡೂ ಬದಿಯಲ್ಲಿ ಫುಟ್ ಪಾತ್, ಡ್ರೈನೇಜ್ ಸೇರಿ 27 ಅಡಿಯಂತೆ ಒಟ್ಟು 54 ಅಡಿ ರಸ್ತೆ ಅಗಲೀಕರಣ ವಾಗಲಿದೆ. ಪ್ರತಿ ಖಾತೆದಾರರ ಮನೆ, ನಿವೇಶನದ ಮೌಲ್ಯ ಮಾಪನ ಮಾಡಿ ಅವರಿಗೆ ಬರಬೇಕಾದ ಪರಿಹಾರದ ಮೊತ್ತದ ಬಗ್ಗೆ ಮಾಲೀಕರಿಗೆ ಮಾಹಿತಿ ಕಳಿಸುತ್ತೇವೆ.ಶ್ರೀಧರ್‌

ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

-- ಬಾಕ್ಸ್ --ಶಾಶ್ವತ ಕುಡಿವ ನೀರಿಗೆ ₹23 ಕೋಟಿ

ಮುತ್ತಿನಕೊಪ್ಪದ ತುಂಗಾನದಿಯಿಂದ ನರಸಿಂಹರಾಜಪುರಕ್ಕೆ ಕುಡಿಯುವ ನೀರು ತರುವ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ₹23 ಕೋಟಿ ಮಂಜೂರಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಸಭೆಗೆ ತಿಳಿಸಿದರು.

PREV

Recommended Stories

.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ
ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ