ಬಳ್ಳಾರಿಯಲ್ಲಿ ಚುರುಕು ಪಡೆದುಕೊಂಡ ರಸ್ತೆ ವಿಸ್ತರಣೆ ಕಾಮಗಾರಿ

KannadaprabhaNewsNetwork |  
Published : Jul 18, 2024, 01:33 AM IST
ಬಳ್ಳಾರಿಯ ಗಡಗಿಚನ್ನಪ್ಪ ವೃತ್ತದಿಂದ ಸಂಗಮ್ ವೃತ್ತದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದೆ.  | Kannada Prabha

ಸಾರಾಂಶ

ಬಳ್ಳಾರಿ ನಗರದ ಗಡಗಿ ಚನ್ನಪ್ಪ ವೃತ್ತದಿಂದ ಸಂಗಮ್ ವೃತ್ತದ ವರೆಗೆ ಕೈಗೊಂಡಿರುವ ರಸ್ತೆ (ಡಾ. ರಾಜ್‌ಕುಮಾರ್ ರಸ್ತೆ) ಕಾಮಗಾರಿ ಕಾರ್ಯ ವೇಗ ಪಡೆದುಕೊಂಡಿದೆ. ಆ. 15ರಂದು ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಮೂಡಿದೆ.

ಬಳ್ಳಾರಿ: ನಗರದ ಗಡಗಿ ಚನ್ನಪ್ಪ ವೃತ್ತದಿಂದ ಸಂಗಮ್ ವೃತ್ತದ ವರೆಗೆ ಕೈಗೊಂಡಿರುವ ರಸ್ತೆ (ಡಾ. ರಾಜ್‌ಕುಮಾರ್ ರಸ್ತೆ) ಕಾಮಗಾರಿ ಕಾರ್ಯ ವೇಗ ಪಡೆದುಕೊಂಡಿದ್ದು, ಆ. 15ರ ಸ್ವಾತಂತ್ರ್ಯ ದಿನಾಚರಣೆ ದಿನದಂದು ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಮೂಡಿದೆ.

21 ಮೀಟರ್ ಅಗಲ, 470 ಮೀಟರ್‌ ಉದ್ದದ ರಸ್ತೆ ಅಗಲೀಕರಣಕ್ಕಾಗಿ ಈಗಾಗಲೇ ರಸ್ತೆ ಅಕ್ಕಪಕ್ಕದ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಪಾದಚಾರಿ ರಸ್ತೆ, ಎರಡು ಬದಿಗಳಲ್ಲಿ ಚರಂಡಿ ಕಾಮಗಾರಿ, ಕುಡಿಯುವ ನೀರು, ಒಳಚರಂಡಿ, ಕೇಬಲ್ ಅಳವಡಿಕೆ ಕಾರ್ಯಗಳು ಭರದಿಂದ ನಡೆದಿವೆ. ಕಾಮಗಾರಿಗೆ ಜಿಲ್ಲಾ ಖನಿಜ ನಿಧಿಯಿಂದ ಸುಮಾರು ₹5 ಕೋಟಿಗಳಷ್ಟು ಅನುದಾನ ಬಳಕೆ ಮಾಡಲಾಗುತ್ತಿದೆ. ಆಂಧ್ರಪ್ರದೇಶದ ಅನಂತಪುರ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ರಸ್ತೆ ನಿರ್ಮಾಣದಿಂದ ವಾಹನದಟ್ಟಣೆ ಸಮಸ್ಯೆ ನೀಗಲಿದೆ.

ಸಾರ್ವಜನಿಕರು ನಿರಾಳ: ತೀರಾ ಇಕ್ಕಟ್ಟಾಗಿದ್ದ ಈ ರಸ್ತೆಯಲ್ಲಿ ಬಿಡಿಎಎ ಫುಟ್ಬಾಲ್ ಮೈದಾನ, ಬಿಡಿಎಎ ಸಭಾಂಗಣ, ರಾಘವ ಕಲಾ ಮಂದಿರ, ಗಾಂಧಿನಗರ ಪೊಲೀಸ್ ಠಾಣೆ ಸೇರಿದಂತೆ ಶಾಲಾ-ಕಾಲೇಜುಗಳು, ಹತ್ತಾರು ವಾಣಿಜ್ಯ ಕಟ್ಟಡಗಳಿವೆ. ಗಡಗಿ ಚನ್ನಪ್ಪ ವೃತ್ತದಿಂದ ಅನಂತಪುರ ರಸ್ತೆಯಲ್ಲಿ ಬರುವ ಸುಮಾರು ಐದಾರು ಕಿಲೋಮೀಟರ್‌ ವರೆಗಿನ ಅನೇಕ ಬಡಾವಣೆಗಳ ನಿವಾಸಿಗಳು ಈ ರಸ್ತೆಯನ್ನೇ ಹೆಚ್ಚು ಅವಲಂಬಿಸಿದ್ದಾರೆ. ಹೀಗಾಗಿ ಈ ರಸ್ತೆ ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಿಂದಲೇ ಸಂಚರಿಸುವುದರಿಂದ ಸಂಚಾರ ದಟ್ಟಣೆ ನಿರ್ವಹಿಸುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ ಅನಂತಪುರ ರಸ್ತೆಯನ್ನು ಅಗಲೀಕರಣಗೊಳಿಸಬೇಕು ಎಂಬ ಕೂಗು ಅನೇಕ ವರ್ಷಗಳಿಂದ ಕೇಳಿ ಬಂದಿತ್ತು. ಜನಾಶಯದಂತೆ 470 ಮೀಟರ್‌ ಉದ್ದದ ರಸ್ತೆ ಕಾಮಗಾರಿ ಶುರು ಮಾಡಲಾಗಿದ್ದು, ಹೆಚ್ಚು ವಿಸ್ತಾರದ ರಸ್ತೆ ನಿರ್ಮಾಣದಿಂದ ಸುಗಮ ಸಂಚಾರಕ್ಕೆ ಆಸ್ಪದವಾಗುತ್ತದೆಯಲ್ಲದೆ, ಈ ರಸ್ತೆಯ ಅಂದವೂ ಹೆಚ್ಚಲಿದೆ.

ವ್ಯಾಪಾರವಿಲ್ಲದೆ ಬಣಬಣ: ಗಡಗಿ ಚನ್ನಪ್ಪ ವೃತ್ತದಿಂದ ಸಂಗಮ್ ವೃತ್ತದ ವರೆಗಿನ ರಸ್ತೆ ನಿರ್ಮಾಣ ಕಾರ್ಯದಿಂದಾಗಿ ಈ ರಸ್ತೆಯಲ್ಲಿ ಬರುವ ಅಂಗಡಿ, ಹೋಟೆಲ್‌ಗಳು, ಮೆಡಿಕಲ್ ಸ್ಟೋರ್‌ಗಳು ಇತರ ವಾಣಿಜ್ಯ ಚಟುವಟಿಕೆ ನಿಂತು ಹೋಗಿದೆ. ವ್ಯಾಪಾರವಿಲ್ಲದ ಕೆಲವು ಅಂಗಡಿ ಮುಂಗಟ್ಟುಗಳು ಬಣಗುಟ್ಟುತ್ತಿವೆ. ಈ ರಸ್ತೆಯಲ್ಲಿ ಬರುವ ನಗರದ ಪ್ರತಿಷ್ಠಿತ ಹೋಯ್ಸಳ, ಅನುಗ್ರಹ ಹೋಟೆಲ್‌ಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ಉಳಿದಂತೆ ಬೇಕರಿಗಳು, ಮೆಡಿಕಲ್ ಸ್ಟೋರ್‌ಗಳು, ಸಣ್ಣಪುಟ್ಟ ಅಂಗಡಿಗಳಿಗೆ ವ್ಯಾಪಾರವಿಲ್ಲದಾಗಿದೆ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಈ ರಸ್ತೆಯ ತೆರವು ಕಾರ್ಯಾಚರಣೆ ನಡೆಸಿದಾಗ, ವ್ಯಾಪಾರಸ್ಥರು ಪರದಾಡಿದ್ದರು.

ಬಳ್ಳಾರಿಗೆ ಒಳ್ಳೇದಾದ್ರೆ ನಾವು ಬೆಂಬಲಿಸಬೇಕಲ್ವೇ?: ಅನಂತಪುರ ರಸ್ತೆಯ ನಿರ್ಮಾಣ ಕಾರ್ಯದಿಂದ ವ್ಯಾಪಾರ ವಹಿವಾಟಿಗೆ ಧಕ್ಕೆ ಬಂದಿದ್ದರೂ ಈ ಭಾಗದ ಹೋಟೆಲ್, ಅಂಗಡಿಗಳು, ಇತರ ವಾಣಿಜ್ಯ ಸಂಸ್ಥೆಗಳ ಮಾಲೀಕರು ಉತ್ತಮ ಗುಣಮಟ್ಟದ ರಸ್ತೆ ಆಗಲಿದೆ ಎಂಬ ನಿರಮ್ಮಳದಲ್ಲಿದ್ದಾರೆ.

ಈ ಕುರಿತು ''''ಕನ್ನಡಪ್ರಭ'''' ಜತೆ ಮಾತನಾಡಿದ ಈ ಭಾಗದ ವ್ಯಾಪಾರಿಗಳು, ರಸ್ತೆ ನಿರ್ಮಾಣ ಕಾರ್ಯದಿಂದ ವ್ಯಾಪಾರಕ್ಕೆ ಧಕ್ಕೆಯಾಗಿದೆ ನಿಜ. ಆದರೆ, ರಸ್ತೆ ಅಗಲೀಕರಣದಿಂದ ಸುಗಮ ಸಂಚಾರಕ್ಕೆ ಆಸ್ಪದವಾಗಲಿದೆ. ಇದರಿಂದ ನಮಗೂ, ಜನರಿಗೂ ಒಳ್ಳೆಯದಾಗಲಿದೆ. ಬರೀ ನಮ್ಮ ಸ್ವಾರ್ಥ ನೋಡಿಕೊಳ್ಳಬಾರದು. ಬಳ್ಳಾರಿಗೆ ಒಳ್ಳೆಯದಾಗುತ್ತದೆ ಎಂದರೆ ನಾವೆಲ್ಲರೂ ಬೆಂಬಲಿಸಬೇಕು ಅಲ್ವೇ ಎಂದು ಪ್ರಶ್ನಿಸುತ್ತಾರೆ.

ಮಾರ್ಗ ಬದಲು: ಗಡಗಿ ಚನ್ನಪ್ಪ ವೃತ್ತದಿಂದ ಸಂಗಮ್ ವೃತ್ತದ ವರೆಗಿನ ರಸ್ತೆ ನಿರ್ಮಾಣ ಕಾರ್ಯದಿಂದಾಗಿ ಈ ಭಾಗದಲ್ಲಿ ರಸ್ತೆ ಸಂಚಾರ ನಿರ್ಬಂಧಗೊಳಿಸಿ, ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ.

ಸಂಗಮ್ ವೃತ್ತದಿಂದ ಗಡಗಿ ಚನ್ನಪ್ಪ ವೃತ್ತದ ಕಡೆಗೆ ಸಂಚರಿಸಬೇಕಾದ ವಾಹನಗಳು ಪರ್ಯಾಯ ಮಾರ್ಗವಾಗಿ ಸಂಗಮ್ ವೃತ್ತದಿಂದ ಕೆಸಿ ರಸ್ತೆ, ಮೀನಾಕ್ಷಿ ವೃತ್ತ, ಹಳೆಯ ಮಹಾನಗರ ಪಾಲಿಕೆ ಮಾರ್ಗವಾಗಿ ಸಂಚರಿಸಬೇಕು.

ಗಡಗಿ ಚನ್ನಪ್ಪ ವೃತ್ತದಿಂದ ಸಂಗಮ್ ವೃತ್ತದ ಕಡೆಗೆ ಸಂಚರಿಸಲು ಪರ್ಯಾಯವಾಗಿ ಕೋರ್ಟ್ ರಸ್ತೆ, ಕಮ್ಮಾಭವನ, ಕೂಲ್ ಕಾರ್ನರ್ ರಸ್ತೆ ಮೂಲಕ ಸಂಚರಿಸುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಗಡಗಿ ಚನ್ನಪ್ಪ ವೃತ್ತದಿಂದ ಸಂಗಮ್ ಸರ್ಕಲ್ ವರೆಗೆ ರಸ್ತೆ ಅಗಲೀಕರಣ ಹಾಗೂ ರಸ್ತೆ ನಿರ್ಮಾಣ ಕಾರ್ಯ ಶ್ಲಾಘನೀಯ. ಆದರೆ, ಬಳ್ಳಾರಿಯಲ್ಲಿ ಸಾಕಷ್ಟು ರಸ್ತೆಗಳನ್ನು ಅಗಲೀಕರಣ ಮಾಡಬೇಕಾಗಿದೆ. ಪ್ರಮುಖವಾಗಿ ಒತ್ತುವರಿ ಮಾಡಿಕೊಂಡಿರುವ ರಸ್ತೆಗಳಿಗೆ ಮುಕ್ತಿ ಕೊಡಿಸಬೇಕು. ನಗರದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಳ್ಳಾರಿ ಜನರ ಹಿತದೃಷ್ಟಿಯಿಂದ ಎಲ್ಲ ಕಡೆ ರಸ್ತೆಗಳ ಸರ್ವೆ ಕಾರ್ಯ ನಡೆಸಲಿ ಎಂದು ಖಾಸಗಿ ಉದ್ಯೋಗಿಗಳಾದ ವೆಂಕಟೇಶ್‌ ಕುಮಾರ್ ಹಾಗೂ ವಿಶ್ವನಾಥ್ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ