ಮಂದಗತಿಯಲ್ಲಿ ರಸ್ತೆ ಕಾಮಗಾರಿ, ವಾಹನ ಸವಾರರಿಗೆ ಧೂಳಿನ ಮಜ್ಜನ!

KannadaprabhaNewsNetwork | Published : Jan 24, 2025 12:46 AM

ಸಾರಾಂಶ

ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ರಸ್ತೆಯುದ್ದಕ್ಕೂ ತಗ್ಗು-ಗುಂಡಿಗಳು ಬಿದ್ದಿದ್ದು, ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ

ಮುಳಗುಂದ: ಗದಗ-ನಾಗಾವಿ ಕ್ರಾಸ್‌ನಿಂದ ಮುಳಗುಂದ ಪಟ್ಟಣದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟಾಗಿದೆ.

ರಸ್ತೆ ಅಭಿವೃದ್ಧಿಗಾಗಿ ಅಲ್ಲಲ್ಲಿ ಸಂಪೂರ್ಣ ರಸ್ತೆ ಅಗೆದು ಮಣ್ಣು, ಜಲ್ಲಿ ಕಲ್ಲು ಹಾಕಿ ರೂಲರ್‌ ಹೊಡೆಯಲಾಗಿದೆ. ಕಾಮಗಾರಿ ವೇಳೆಯಲ್ಲಿ ಮಾತ್ರ ನೀರು ಸಿಂಪಡಣೆ ಮಾಡುತ್ತಿದ್ದು, ಉಳಿದ ಸಮಯದಲ್ಲಿ ವಾಹನಗಳ ಸಂಚಾರ ದಟ್ಟನೆಯಿಂದ ಧೂಳು ನಿಯಂತ್ರಣವಾಗದೇ ಬೈಕ್‌ ಸವಾರರಿಗೆ ಧೂಳಿನ ಮಜ್ಜನವಾಗುತ್ತಿದೆ.

₹25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ: ಗದಗ ನಾಗಾವಿ ಕ್ರಾಸ್‌ನಿಂದ ಮುಳಗುಂದದ ವರೆಗೆ ಅಂದಾಜು ₹25 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದೆ. ಅಲ್ಲ ಅಲ್ಲಿ ತೆಗ್ಗುಗಳನ್ನು ತೆಗೆದು ಮಣ್ಣು ಹಾಕಿ ಮೆಟ್ಲಿಂಗ್‌ಗಾಗಿ ಹಾಕಿದ ಜಲ್ಲಿ ಕಲ್ಲುಗಳು ರಸ್ತೆಗೆ ಹರಡಿಕೊಂಡಿದ್ದರಿಂದ ಬೈಕ್‌ ಸವಾರರು ನಿಯಂತ್ರಣ ಸಿಗದೆ ಅಪಘಾತ ಸಂಭವಿಸಿ, ಗಂಭೀರ ಗಾಯಗಳಾದ ಘಟನೆಗಳು ಸಾಕಷ್ಟು ನಡೆದಿವೆ.

ಕ್ರಮಕ್ಕೆ ಆಗ್ರಹ: ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ರಸ್ತೆಯುದ್ದಕ್ಕೂ ತಗ್ಗು-ಗುಂಡಿಗಳು ಬಿದ್ದಿದ್ದು, ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಲೋಕೋಪಯೋಗಿ ಇಲಾಖೆ ತ್ವರಿತಗತಿಯಲ್ಲಿ ಕಾಮಗಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪರ್ಯಾಯ ಮಾರ್ಗ: ಈ ರಸ್ತೆ ದುರವಸ್ಥೆಯಿಂದಾಗಿ ಕೆಲವು ವಾಹನ ಸವಾರರು ಮುಳಗುಂದ -ಕುರ್ತಕೋಟಿ -ಹುಲಕೋಟಿ ಮಾರ್ಗವಾಗಿ ಗದಗ ನಗರಕ್ಕೆ ತೆರಳುತ್ತಾರೆ. ಇನ್ನು ಗದಗ ನಗರದಿಂದ ಲಕ್ಷ್ಮೇಶ್ವರ ಕಡೆ ತೆರಳುವ ಕೆಲವು ಖಾಸಗಿ ಬಸ್‌ಗಳು ನಾಗಾವಿಯಿಂದ ಶಿರಹಟ್ಟಿ -ಮಾಗಡಿ ಮಾರ್ಗವಾಗಿ ಲಕ್ಷ್ಮೇಶ್ವರ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ಅಭಿವೃದ್ಧಿ ಕಾಮಗಾರಿ ತ್ವರಿಗತಿಯಲ್ಲಿ ನಡೆಯಲು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮುಳಗುಂದ ಮಹಾಶಕ್ತಿ ಕೇಂದ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಬಳ್ಳಾರಿ ತಿಳಿಸಿದ್ದಾರೆ.

Share this article