ಆಮೆಗತಿಯಲ್ಲಿ ಸಾಗಿದ ನಗರೋತ್ಥಾನ ಯೋಜನೆ ಕಾಮಗಾರಿ

KannadaprabhaNewsNetwork |  
Published : Mar 06, 2026, 03:00 AM IST
ಗಂಗಾವತಿ 3ನೇ ವಾರ್ಡ್‌ನಲ್ಲಿ ರಸ್ತೆ ಕಾಮಗಾರಿಗೆ ಬಳಸಿರುವ ಕಂಕರ್ ಹಾಗೇ ಬಿದ್ದಿರುವದು. | Kannada Prabha

ಸಾರಾಂಶ

ಇನ್ನಾದರೂ ನಗರಸಭೆಯವರು ಇತ್ತ ಕಡೆ ಗಮನಹರಿಸಿ ಗುಣಮಟ್ಟದ ರಸ್ತೆ, ಚರಂಡಿಗಳ ವ್ಯವಸ್ಥೆ ಕೈಗೊಂಡರೆ ನಗರೋತ್ಥಾನ ಯೋಜನೆ ಸಾರ್ಥಕವಾಗುತ್ತದೆ

ರಾಮಮೂರ್ತಿ ನವಲಿ ಗಂಗಾವತಿ

ಹಲವಾರು ವರ್ಷಗಳಿಂದ ನನೆಗುಂದಿಗೆ ಬಿದ್ದಿದ್ದ ನಗರೋತ್ಥಾನ ಯೋಜನೆ ಕಾಮಗಾರಿ ಅಧೋಗತಿಯತ್ತ ಸಾಗಿದೆ. ಈಗ ವಾರ್ಡ್‌ಗಳಲ್ಲಿ ಕೈಗೊಂಡಿರುವ ರಸ್ತೆ ದುರಸ್ತಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ಈಗಾಗಲೇ ನಗರದ ಒಂದನೇ ವಾರ್ಡ್‌, ಮೂರನೇ ವಾರ್ಡ್‌ನ ಸತ್ಯನಾರಾಯಣ ದೇವಸ್ಥಾನದ ರಸ್ತೆ, ಜಯನಗರದ ರಸ್ತೆ ಮತ್ತು ರಾಮಮಂದಿರ, ಸಿದ್ದಿಕೇರಿ ರಸ್ತೆಯ ಆಂಜನೇಯ ಸ್ವಾಮಿ ದೇಗುಲದ ಹಿಂಭಾಗದಲ್ಲಿ ಕಾಮಗಾರಿ ಕೈಗೊಂಡು ತಿಂಗಳು ಗತಿಸಿದ್ದರೂ ತಮಗೆ ತಿಳಿದಾಗೋಮ್ಮೆ ಕಾಮಗಾರಿ ಆರಂಭಿಸುತ್ತಿದ್ದಾರೆ. ಗುತ್ತಿಗೆ ಪಡೆದ ಬಾಲಾಜಿ ಕೃಪಾ ಕನಸ್ಟ್ರಷನ್ ಕಂಪನಿಯವರು ಸ್ಥಳಕ್ಕೆಭೇಟಿ ನೀಡದೇ ಕಾಟಾಚಾರಕ್ಕೆ ಕಾಮಗಾರಿ ಕೈಗೊಂಡಿದ್ದಾರೆ.

₹21.38 ಕೋಟಿ ಅನುದಾನ: ನಗರೋತ್ಥಾನ ಯೋಜನೆಯಲ್ಲಿ ನಗರದ 35 ವಾರ್ಡ್‌ಗಳಲ್ಲಿ 65 ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ರಸ್ತೆ ದುರಸ್ತಿ, ಚರಂಡಿ ಕಾಮಗಾರಿ, ಸಿಸಿ ರಸ್ತೆ, ಬಿಟಿ ರಸ್ತೆ ಮತ್ತು ಡಾಂಬರೀಕರಣ ಕಾಮಗಾರಿ ನಡೆಯುತ್ತಿವೆ. ಈ ಕಾಮಗಾರಿ ನಡೆಯುತ್ತಿದೆ. ಆದರೂ ವಿಳಂಬ, ಕಳಪೆ ಕಾಮಗಾರಿಗಳಿಗೆ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ವೃದ್ಧರು, ವಿದ್ಯಾರ್ಥಿಗಳಿಗೆ ಇಲ್ಲ ಸುಗಮ ಸಂಚಾರ: ನಗರದ 3ನೇ ವಾರ್ಡ್‌ನಲ್ಲಿ ರಸ್ತೆ ಮೇಲೆ ಕಂಕರ್ ಹಾಕಿದ್ದಾರೆ. ಆದರೆ ಕಂಕರಗೆ ನೀರು ಹಾಕಿ ಸಮರ್ಪಕ ರೋಲರ್ ಮಾಡದ ಹಿನ್ನೆಲೆ ಕಂಕರ್ ಹೊರಗೆ ಬಂದಿದ್ದರಿಂದ ದಿನ ನಿತ್ಯ ಸಂಚಾರ ಮಾಡುವ ವೃದ್ಧರು ಮತ್ತು ವಿದ್ಯಾರ್ಥಿಗಳಿಗೆ ಸುಗಮ ಸಂಚಾರ ಇಲ್ಲದಂತಾಗಿದೆ. ರಸ್ತೆ ಮೇಲೆ ಕಂಕರಗಳು ಯದ್ವಾತದ್ವಾ ಬಿದ್ದಿದ್ದರಿಂದ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಕೊನೆಗೆ ಕಂಕರ್ ಮೇಲೆ ರೋಲರ್‌ ಹೊಡೆದು ನೀರು ಹಾಕಿದ್ದರೆ ತಾತ್ಕಾಲಿಕವಾಗಿ ಸಾರ್ವಜನಿಕರು ಸಂಚಾರಕ್ಕೆ ಅನುಕೂಲವಾಗುತ್ತಿತ್ತು. ಈ ಬಗ್ಗೆ ಹಲವಾರು ಭಾರಿ ನಗರಸಭೆಯ ತಾಂತ್ರಿಕ ವಿಭಾಗದವರಿಗೆ ಮಾಹಿತಿ ನೀಡಿದರೂ ಗಮನಹರಿಸುತ್ತಿಲ್ಲ ಎನ್ನುವ ಅರೋಪ ಕೇಳಿ ಬರುತ್ತದೆ. ಇದು ಕೇವಲ 3ನೇ ವಾರ್ಡ್‌ನ ಸ್ಥಿತಿ ಅಲ್ಲ ಬಹುತೇಕ ವಾರ್ಡ್‌ ಗಳಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಯ ಪರಿಸ್ಥಿತಿ ಆಗಿದೆ.

ಇನ್ನಾದರೂ ನಗರಸಭೆಯವರು ಇತ್ತ ಕಡೆ ಗಮನಹರಿಸಿ ಗುಣಮಟ್ಟದ ರಸ್ತೆ, ಚರಂಡಿಗಳ ವ್ಯವಸ್ಥೆ ಕೈಗೊಂಡರೆ ನಗರೋತ್ಥಾನ ಯೋಜನೆ ಸಾರ್ಥಕವಾಗುತ್ತದೆ ಎಂಬದು ಜನರ ಅಭಿಪ್ರಾಯವಾಗಿದೆ.

ನಗರದಲ್ಲಿ ನಗರೋತ್ಥಾನ ಯೋಜನೆಯಲ್ಲಿ ಕೆಲ ವಾರ್ಡ್‌ಗಳಲ್ಲಿ ರಸ್ತೆ ಕಾಮಗಾರಿ ಕೈಗೊಂಡಿದ್ದು. ತಾಂತ್ರಿಕ ತೊಂದರೆಯಿಂದ ಕಾಮಗಾರಿ ವಿಳಂಬವಾಗಿದೆ. ಕೆಲ ವಾರ್ಡ್‌ಗಳಲ್ಲಿ ಕೈಗೊಂಡಿರುವ ಕಾಮಗಾರಿ ಗುಣಮಟ್ಟ ಪರಿಶೀಲನೆ ಮಾಡಬೇಕಾಗಿದೆ. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರರಿಗೆ ಸೂಚಿಸಲಾಗುವುದು ಎಂದು ಗಂಗಾವತಿ ನಗರಸಭೆ ಎಇಇ ಶರಣಪ್ಪ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

11ರಿಂದ ಆರೋಗ್ಯ ಇಲಾಖೆ ಮುಷ್ಕರ, ಓಪಿಡಿ ಬಂದ್ !
ಕರಡಿ ದಾಳಿಗಳಿಗೆ 25ಕ್ಕೂ ಹೆಚ್ಚು ರೈತರು ಬಲಿ