ಹಿರೇಮೊರಬ ಗ್ರಾಮದಲ್ಲಿ ಸಮರ್ಪಕ ಬಸ್ ಸೇವೆಗೆ ಆಗ್ರಹಿಸಿ ರಸ್ತೆತಡೆ

KannadaprabhaNewsNetwork |  
Published : Aug 26, 2025, 01:05 AM IST
ರಟ್ಟೀಹಳ್ಳಿ ತಾಲೂಕಿನ ಹಿರೇಮೊರಬ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರೂ ಪ್ರತಿಭಟನಾಕಾರರು ಒಪ್ಪದ ಕಾರಣ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಪರಿಣಾಮ ಕೆಲಕಾಲ ನೂಕಾಟ, ತಳ್ಳಾಟ ನಡೆಯಿತು.

ರಟ್ಟೀಹಳ್ಳಿ: ಸಮರ್ಪಕ ಬಸ್ ಸೇವೆ ಕಲ್ಪಿಸುವಂತೆ ಹಾಗೂ ಕೋರಿಕೆ ನಿಲುಗಡೆಯ ಸ್ಥಳಗಳಲ್ಲಿ ಬಸ್ ನಿಲ್ಲಿಸದೇ ಉದ್ದಟತನ ತೋರುವ ಚಾಲಕ, ನಿರ್ವಾಹಕರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ತಾಲೂಕಿನ ಹಿರೇಮೊರಬ ಗ್ರಾಮದಲ್ಲಿ ರಸ್ತೆತಡೆ ನಡೆಸಿ ವಿದ್ಯಾರ್ಥಿಗಳು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ 9 ಗಂಟೆಯಿಂದ ಸುಮಾರು ಮೂರು ಗಂಟೆ ರಸ್ತೆ ಬಂದ್ ಮಾಡಿದ ವಿದ್ಯಾರ್ಥಿಗಳು, ಶಾಲಾ- ಕಾಲೇಜಿನ ಸಮಯದಲ್ಲಿ ಸರಿಯಾಗಿ ಬಸ್ಗಳು ಬರುತ್ತಿಲ್ಲ. ಹೀಗಾಗಿ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹೋಗಲಾಗುತ್ತಿಲ್ಲ. ಆಗೊಮ್ಮೆ, ಈಗೊಮ್ಮೆ ಬರುವ ಬಸ್ ಹತ್ತಿ ಕಾಲೇಜಿಗೆ ಹೋಗೋಣ ಎಂದರೆ ವಾಹನಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತವೆ. ಕೆಲವೊಮ್ಮೆ ಬಸಗಳನ್ನು ನಿಲ್ಲಿಸುವುದೇ ಇಲ್ಲ. ಎಷ್ಟೋ ಬಾರಿ ತರಗತಿಗಳನ್ನು ತಪ್ಪಿಸಿಕೊಂಡಿದ್ದೇವೆ. ಇದರಿಂದ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗಿದೆ ಎಂದು ಅಳಲು ತೋಡಿಕೊಂಡರು.

ಪ್ರಯಾಣಿಕರ ಪರದಾಟ: ಸುಮಾರು ಮೂರು ಗಂಟೆ ರಸ್ತೆತಡೆ ನಡೆಸಿದ್ದರಿಂದ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಪರದಾಡಿದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಹಿರೇಕೆರೂರು ಪಿಎಸ್‍ಐ ನೀಲಪ್ಪ ನರಲಾರ ಹಾಗೂ ಅಸಾದಿ ಅವರು, ಪ್ರತಿಭಟನಾನಿರತ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರನ್ನು ಸಮಾಧಾನಪಡಿಸಲು ಹೈರಾಣಾದರು. ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರೂ ಪ್ರತಿಭಟನಾಕಾರರು ಒಪ್ಪದ ಕಾರಣ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಪರಿಣಾಮ ಕೆಲಕಾಲ ನೂಕಾಟ, ತಳ್ಳಾಟ ನಡೆಯಿತು.ಸ್ಥಳಕ್ಕಾಗಮಿಸಿದ ಹಿರೇಕೆರೂರು ಡಿಪೋ ಮ್ಯಾನೇಜರ್ ಮಂಜುನಾಥ ಹಡಪದ ಅವರು, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮನವಿ ಆಲಿಸಿದರು. ನಂತರ ಮಾತನಾಡಿದ ಅವರು, ಹಿರೇಕೆರೂರು ಡಿಪೋ ಬಸಗಳಿಂದ ಸಮಸ್ಯೆಯಾಗುತ್ತಿಲ್ಲ. ಗ್ರಾಮದ ಕೋರಿಕೆಯ ನಿಲುಗಡೆ ಸ್ಥಳದಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದು, ಶಿಕಾರಿಪುರ ಹಾಗೂ ರಾಣಿಬೆನ್ನೂರು ಡಿಪೋಗಳ ಬಸಗಳು ನಿಲ್ಲಿಸದೆ ಇರುವುದರಿಂದ ಸಮಸ್ಯೆಯಾಗುತ್ತಿದ್ದು, ಎರಡು ಡಿಪೋ ಮ್ಯಾನೇಜರಗಳನ್ನು ಸಂಪರ್ಕಿಸಿ ಅವರಿಗೆ ನೋಟಿಸ್ ನೀಡಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ