ಚಿಕ್ಕಬಳ್ಳಾಪುರ: ರಸ್ತೆಗಳಲ್ಲಿ ಗುಂಡಿಗಳ ಹಾವಳಿ<bha>;</bha> ಸವಾರರ ಪರದಾಟ

KannadaprabhaNewsNetwork | Published : Oct 11, 2023 12:45 AM

ಸಾರಾಂಶ

ಚಿಕ್ಕಬಳ್ಳಾಪುರದ ರಸ್ತೆಗಳು ಹದಗೆಟ್ಟು ಅಕ್ಷರಶಃ ಗುಂಡಿಗಳ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿನ ರಸ್ತೆಗಳಲ್ಲಿ ಸಂಚರಿಸುವುದು ಸವಾರರಿಗೆ ಸವಾಲಾಗಿದೆ. ತಾಲೂಕು ಆಡಳಿತ, ನಗರಸಭೆ, ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯದಿಂದ ನಗರದ ಪ್ರಮುಖ ರಸ್ತೆಗಳಿಂದ ಹಿಡಿದು, ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಓಣಿಯ ಒಳ ರಸ್ತೆಗಳಲ್ಲೂ ಮೊಳಕಾಲುದ್ದದ ಗುಂಡಿಗಳು ಬಿದ್ದಿವೆ
ತಾಲೂಕು ಆಡಳಿತ, ನಗರಸಭೆ, ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ | ಮಳೆ ಬಂದಾಗ ತುಂಬುವ ಗುಂಡಿಗಳು ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ನಗರದ ರಸ್ತೆಗಳು ಹದಗೆಟ್ಟು ಅಕ್ಷರಶಃ ಗುಂಡಿಗಳ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿನ ರಸ್ತೆಗಳಲ್ಲಿ ಸಂಚರಿಸುವುದು ಸವಾರರಿಗೆ ಸವಾಲಾಗಿದೆ. ತಾಲೂಕು ಆಡಳಿತ, ನಗರಸಭೆ, ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯದಿಂದ ನಗರದ ಪ್ರಮುಖ ರಸ್ತೆಗಳಿಂದ ಹಿಡಿದು, ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಓಣಿಯ ಒಳ ರಸ್ತೆಗಳಲ್ಲೂ ಮೊಳಕಾಲುದ್ದದ ಗುಂಡಿಗಳು ಬಿದ್ದಿವೆ. ಈ ರಸ್ತೆಗಳಲ್ಲೇ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ನಗರದ ಹೃದಯ ಭಾಗದಲ್ಲಿರುವ ಅಂಭೇಡ್ಕರ್‌ ವೃತ್ತದಿಂದ ಎಂಜಿ ರಸ್ತೆಯ ಸ್ಥಿತಿ ನೋಡುವಂತಿಲ್ಲ. ಇಲ್ಲಿ ಬಿದ್ದಿರುವ ದೊಡ್ಡ ಗುಂಡಿಯಲ್ಲಿ ಮಳೆ ಬಂದಾಗ ನೀರು ನಿಲ್ಲುತ್ತದೆ. ಈ ಸಂದರ್ಭ ಗುಂಡಿಗಳ ಆಳ ಎಷ್ಟಿವೆ ಎಂಬುದು ಗೊತ್ತಾಗುವುದಿಲ್ಲ. ಅದರೊಳಗೆ ಬೈಕ್‌ ಪಲ್ಟಿ ಹೊಡೆದು ಬಿದ್ದು ಸವಾರರು ಕೈಕಾಲು, ಹಲ್ಲು ಮುರಿದುಕೊಂಡ ಘಟನೆಗಳು ಸಾಕಷ್ಟಿವೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಾಗಿ ಒಂದೂವರೆ ದಶಕ ಪೂರ್ಣವಾಗಿದೆ. ಹೀಗೆ ಒಂದೂವರೆ ದಶಕ ಪ್ರಾಯದ ಜಿಲ್ಲಾ ಕೇಂದ್ರಗಳಲ್ಲಿ ರಸ್ತೆಗಳು ಉತ್ತಮವಾಗಿವೆಯೇ ಎಂದರೆ ಜನರಿಂದ ನಿರಾಸೆಯ ಉತ್ತರ ದೊರೆಯುತ್ತದೆ. ಚಿಕ್ಕಬಳ್ಳಾಪುರದಿಂದ ಮುಷ್ಟೂರು ಕಡೆ ಸಾಗುವ ರಸ್ತೆಯ ಸ್ಥಿತಿಯದ್ದು ಮತ್ತೊಂದು ಕಥೆ. ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಲೇ ಇದೆ. ಇದರಿಂದ ಆಳೆತ್ತರದ ಗುಂಡಿಗಳು ನಿರ್ಮಾಣವಾಗಿವೆ. ನಗರದ ಪ್ರಮುಖ ಬಡಾವಣೆಗಳ ರಸ್ತೆಗಳು ಸಹ ಗುಂಡಿ ಮುಕ್ತವಾಗಿಲ್ಲ. ರಸ್ತೆಯ ತೆಗ್ಗು, ಗುಂಡಿಗಳು ಹಾಗೂ ಪ್ರಮುಖ ರಸ್ತೆಗಳಲ್ಲಿನ ಬೃಹದಾಕಾರದಲ್ಲಿ ನಿರ್ಮಾಣವಾಗಿರುವ ಗುಂಡಿ ಮಳೆಯಾದರೇ ಅಂಗಡಿಕಾರರಿಗೆ, ಗ್ರಾಹಕರಿಗೆ ಕಿರಿ ಕಿರಿ ಉಂಟು ಮಾಡುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಗುಂಡಿಗಳನ್ನು ಮುಚ್ಚಲು ಕಳೆದ ಸಾಲಿನಲ್ಲಿ 16 ಲಕ್ಷ ರೂಗಳನ್ನು ಖರ್ಚು ಮಾಡಲಾಗಿದೆ ಎನ್ನುತ್ತವೆ ನಗರಸಭೆಯ ಮೂಲಗಳು. ಹೀಗೆ ಪ್ರತಿ ವರ್ಷ ಗುಂಡಿಗಳನ್ನು ಮುಚ್ಚಲು ನಗರಸಭೆಯು ಹಣವನ್ನು ತೆಗೆದಿರಿಸುತ್ತದೆ. ಆದರೆ ಗುಂಡಿಗಳು ಮಾತ್ರ ಅಪಾಯಕ್ಕೆ ಬಾಯಿ ತೆರೆದೇ ಇವೆ. ಯಾವ ರಸ್ತೆಯು ಹಳ್ಳ ಕೊಳ್ಳಗಳಿಲ್ಲದೆ ಇವೆ ಎಂದು ನಗರದಲ್ಲಿ ಹುಡುಕಬೇಕಷ್ಟೆ. ದುರಸ್ತಿಯೂ ಇಲ್ಲ : ನಗರದ ಪ್ರಮುಖ ಬಹುತೇಕ ರಸ್ತೆಗಳಲ್ಲಿ ಬೃಹತ್‌ ಪ್ರಮಾಣದ ತಗ್ಗು ಬಿದ್ದಿವೆ. ಇವುಗಳ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಿಲ್ಲ ಎಂಬುದು ಜನರ ಆರೋಪ. ಆರು ತಿಂಗಳಿಂದ ಇಂತಹ ಸ್ಥಿತಿಯಲ್ಲಿಯೇ ಇದ್ದರೂ ದುರಸ್ತಿಯೂ ನಡೆಯುತ್ತಿಲ್ಲ. ಅದರಲ್ಲೇ ನಿತ್ಯ ನೂರಾರು ಬಸ್‌, ಬೈಕ್‌, ಕಾರುಗಳು ಚಲಿಸುತ್ತಿವೆ. ಇಲ್ಲಿ ಹಾದು ಹೋಗುವ ಪ್ರತಿಯೊಬ್ಬರೂ ನಗರಸಭೆಗೆ ಹಾಗೂ ಲೋಕೋಪಯೋಗಿ ಇಲಾಖೆಗೆ ಹಿಡಿಶಾಪ ಹಾಕದೇ ಹೋಗುವುದಿಲ್ಲ. ಇದಲ್ಲದೇ ಇಂತಹ ಬಹುತೇಕ ಪ್ರಮುಖ ಮತ್ತು ಒಳ ರಸ್ತೆಗಳ ಸ್ಥಿತಿ ಇದಕ್ಕೆ ಹೊರತಾಗಿಲ್ಲ. ಸಿಕೆಬಿ-2 ನಗರದ ಎಂಜಿ ರಸ್ತೆಯ ಫಾರೆಸ್ಟ್‌ ಇಲಾಖೆ ಬಳಿಯ ಲೋಕೋಪಯೋಗಿ ಇಲಾಖೆಯ ವಸತಿ ಸಮೂಚ್ಚಯಗಳಿಗೆ ಯೂಜಿಡಿಗೆ ರಸ್ತೆ ಅಗೆದು ಸರಿಯಾಗಿ ಮುಚ್ಚದೆ ಇರುವುದರಿಂದ ರಸ್ತೆಯಗಲಕ್ಕೂ ಮೋಳಕಾಲುದ್ದದ ಗುಂಡಿ ಬಿದ್ದಿದ್ದು ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಿದೆ. ಯಮ ಸ್ವರೂಪಿ ಗುಂಡಿಗಳು ನಗರೋತ್ಥಾನ ಯೋಜನೆಯಡಿ ಏಕ ಪಥ ರಸ್ತೆಯನ್ನು ದ್ವೀಪತವನ್ನಾಗಿಸುವ ಕಾಮಗಾರಿ ನಡೆದಿದೆ ಯಾದರೂ ಜನರಿಗೆ ಮುಖ್ಯವಾಗಿರುವ ಭಾಗದಲ್ಲಿ ಆ ಕಾಮಗಾರಿ ನಡೆಯದಿರುವುದು ದುರಂತ. ಕೆಲವೆಡೆ ರಸ್ತೆ ಮಾಡಿ 6 ತಿಂಗಳು ಆಗಿಲ್ಲ. ಹೇಗೆ ಮಾಡಿದ್ದಾರೋ ಎಂಬುದು ತಿಳಿಯುತ್ತಿಲ್ಲ. ರಸ್ತೆಯಲ್ಲಿ ಬಿದ್ದಿರುವ ತೆಗ್ಗುಗಳಿಂದ ಮಕ್ಕಳಿಗೆ, ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತಿದೆ. ನಗರದ ಬಹುತೇಕ ರಸ್ತೆಗಳು ಜಿಟಿ ಜಿಟಿ ಮಳೆಗೆ ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ. ಎಲ್ಲಿ ನೋಡಿದರಲ್ಲಿ ಬೃಹತ್‌ ಪ್ರಮಾಣದ ಗುಂಡಿಗಳು ಬಿದ್ದಿವೆ. ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಿದೆ. ಅಧಿಕಾರಿಗಳಿಗೆ ಕಾಣುತ್ತಿಲ್ಲ ನಗರದ ಎಂ.ಜಿ ರಸ್ತೆ, ಬಿ.ಬಿ ರಸ್ತೆ, ಬಜಾರ್‌ ರಸ್ತೆ,ಗಂಗಮ್ಮನ ಗುಡಿ ರಸ್ತೆ, ಕೆಎಸ್‌ಆರ್‌ಟಿಸಿ ಡಿಪೊ ರಸ್ತೆ, ದೊಡ್ಡಬಳ್ಳಾಪುರ ಮಾರ್ಗದ ಕಂದವಾರ- ನಂದಿ ರಸ್ತೆ, ಚಿನ್ನದ ಅಂಗಡಿಗಳಿರುವ ಗಂಗಮ್ಮ ಗುಡಿ ರಸ್ತೆ–ಹೀಗೆ ನಗರದ ಬಹುತೇಕ ಹಾದಿಗಳಲ್ಲಿ ಗುಂಡಿಗಳು ದರ್ಶನವಾಗುತ್ತದೆ. ಕೆಲವು ರಸ್ತೆಗಳಲ್ಲಿ ಸಣ್ಣ ಪುಟ್ಟ ಗುಂಡಿಗಳು ಇದ್ದರೆ ಕೆಲವು ಕಡೆಗಳಲ್ಲಿ ದೊಡ್ಡ ಗುಂಡಿಗಳನ್ನು ಕಾಣಬಹುದು. ಬೈಕ್ ಸವಾರರನ್ನು ನೆಲಕ್ಕೆ ಉರುಳಿಸುವಷ್ಟು ಸಶಕ್ತವಾದ ಗುಂಡಿಗಳಿವೆ. ಚಾಲಕರು ಬೈಕ್‌ಗಳನ್ನು, ಕಾರುಗಳನ್ನು ಸರಾಗವಾಗಿ ಚಲಾಯಿಸಿಕೊಂಡು ಹೋಗುವಾಗ ತಟ್ಟನೆ ಗುಂಡಿಗಳಿಗೆ ಇಳಿಯುವ ಸನ್ನಿವೇಶಗಳು ಹೇರಳವಾಗಿ ಕಾಣಬಹುದು. ರಸ್ತೆ ವಿಸ್ತರಣೆಗಾಗಿ ಉಳಿದಿವೆಯೇ ಗುಂಡಿಗಳು: ನಗರದ ಪ್ರಮುಖ ರಸ್ತೆಗಳಲ್ಲಿ ಎಂ.ಜಿ ರಸ್ತೆಯೂ ಒಂದು. ಈಗಾಗಲೇ ಜಿಲ್ಲೆಯಲ್ಲಿ ಹೋಗಿರುವ ತುಮಕೂರು ಜಿಲ್ಲೆಯ ಶಿರಾ- ಕೋಲಾರ ಜಿಲ್ಲೆಯ ಮುಳಬಾಗಿಲು ವರೆಗಗಿನ ರಾಷ್ಟ್ರೀಯ ಹೆದ್ದಾರಿ 234 ನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ನಿರ್ಧಾರಕ್ಕೆ ಬಂದಿದ್ದು. ಹಾಲಿ ಇರುವ ಹೆದ್ದಾರಿಯನ್ನು (ನಾಲ್ಕು ಲೈನ್) ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಮಾಡಲು ಮುಂದಾಗಿದೆ.ಎಂ.ಜಿ ರಸ್ತೆಯನ್ನು ವಿಸ್ತರಿಸುವ ಕಾರ್ಯಕ್ಕಾಗಿ ಈಗಾಗಲೇ ಸರ್ವೆಗಳು ನಡೆದಿವೆ. ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಭಿವೃದ್ಧಿಗೊಳಿಸಲಿದೆ. ಆದರೆ ಅಂಭೇಡ್ಕರ್‌ ವೃತ್ತದಿಂದ ಎಪಿಎಂಸಿಯವರೆಗೆ ದಾರಿಯಲ್ಲಿ ದೊಡ್ಡ ಗುಂಡಿಗಳಿವೆ. ಈ ರಸ್ತೆಯಲ್ಲಿ ನಿತ್ಯ ಹೇರಳ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುವ ಕಾರಣ ಈ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಿಲ್ಲ ಎನ್ನುವ ಅಭಿಪ್ರಾಯವನ್ನು ನಾಗರಿಕರು ವ್ಯಕ್ತಪಡಿಸಿದರು.

Share this article