ಧಾರಾಕಾರದ ಮಳೆಗೆ ಕೊಚ್ಚಿ ಹೋದ ರಸ್ತೆಗಳು, ಕಿತ್ತು ಹೋದ ಬದುವು

KannadaprabhaNewsNetwork |  
Published : Jun 06, 2024, 12:32 AM IST
ಪೊಟೋ-ಸಮೀಪದ ಪು,ಬಡ್ನಿ ಗ್ರಾಮದ ಹತ್ತಿರ ದೊಡ್ಡ ಹಳ್ಳದ ನೀರು ರಸ್ತೆಯ ಮೇಲೆ ಹರಿಯುವ ಮೂಲಕ ಆದರಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಕಿತ್ತು ಹೋಗಿರುವುದು. ಪೊಟೋ- ಸಸಮೀಪದ ಗೊಜನೂರ ಗ್ರಾಮದ ಹತ್ತಿರ ಗದಗ ಲಕ್ಷ್ಮೇಶ್ವರ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ನೀರು ಹರಿಯುತ್ತಿರುವುದರಿಂದ  ವಾಹನ ಸವಾರರು ಪರದಾಡುತ್ತಿರುವುದು.  | Kannada Prabha

ಸಾರಾಂಶ

ಲಕ್ಷ್ಮೇಶ್ವರ ತಾಲೂಕಿನಲ್ಲಿ 2 ದಿನಗಳಿಂದ ಸುರಿಯುತ್ತಿರುವ ಮಳೆ ರೈತರ ಮೊಗದಲ್ಲಿ ಹರ್ಷ ಉಕ್ಕುವಂತೆ ಮಾಡಿದೆ. ಆದರೆ ಹಲವು ಗ್ರಾಮಗಳ ಹೊಲದ ಫಲವತ್ತಾದ ಮಣ್ಣಿನ ಬದುವುಗಳು ಕೊಚ್ಚಿಹೋಗಿ ಅಪಾರ ಹಾನಿ ಸಂಭವಿಸಿದೆ

ಲಕ್ಷ್ಮೇಶ್ವರ: ಕಳೆದ 2-3 ದಿನಗಳಿಂದ ತಾಲೂಕಿನಾದ್ಯಂತ ಸುರಿದ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿ ಮಾಡಿದೆ.

ಧಾರಾಕಾರ ಮಳೆಗೆ ದೊಡ್ಡ ಹಳ್ಳವು ಉಕ್ಕಿ ಹರಿದು ಪು. ಬಡ್ನಿ ಹಾಗೂ ಆದರಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿದೆ. ವಾಹನ ಸವಾರರು ಪರದಾಡುವಂತಾಗಿದೆ.

ಲಕ್ಷ್ಮೇಶ್ವರ ತಾಲೂಕಿನಲ್ಲಿ 2 ದಿನಗಳಿಂದ ಸುರಿಯುತ್ತಿರುವ ಮಳೆ ರೈತರ ಮೊಗದಲ್ಲಿ ಹರ್ಷ ಉಕ್ಕುವಂತೆ ಮಾಡಿದೆ. ಆದರೆ ಹಲವು ಗ್ರಾಮಗಳ ಹೊಲದ ಫಲವತ್ತಾದ ಮಣ್ಣಿನ ಬದುವುಗಳು ಕೊಚ್ಚಿಹೋಗಿ ಅಪಾರ ಹಾನಿ ಸಂಭವಿಸಿದೆ. ಗೊಜನೂರ ಗ್ರಾಮದ ಹತ್ತಿರ ಗದಗ-ಲಕ್ಷ್ಮೇಶ್ವರಕ್ಕೆ ಸಂಪರ್ಕ ಕಲ್ಪಿಸುವ ಪಾಳಾ-ಬಾದಾಮಿ ರಸ್ತೆಯ ಮೇಲೆ ಹಳ್ಳದ ನೀರು ಹರಿಯುತ್ತಿದ್ದು, 2-3 ಗಂಟೆಗಳ ಕಾಲ ವಾಹನ ಸವಾರರು ಪರದಾಡಿದರು.

ಪು. ಬಡ್ನಿ ಗ್ರಾಮದ ಹತ್ತಿರ ದೊಡ್ಡ ಹಳ್ಳದ ನೀರು ರಸ್ತೆಯ ಮೇಲೆ ಹರಿದು, ಆದರಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿಹೋಗಿದೆ. ದೊಡ್ಡಹಳ್ಳಕ್ಕೆ ಕಟ್ಟಿದ ಬಾಂದಾರಲ್ಲಿ ಹೂಳು ತುಂಬಿಕೊಂಡು ಹಾಗೂ ಬೆಳೆದ ಕಸದ ಬಳ್ಳಿಗಳಿಂದ ಹಳ್ಳದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಅಕ್ಕಪಕ್ಕದ ಹೊಲಗಳಿಗೆ ನುಗ್ಗಿದೆ. ಅಲ್ಲದೆ ಈ ನೀರು ರಸ್ತೆಯ ಮೇಲೆ ಹರಿದು ಹೋಗಿದ್ದರಿಂದ ಸೇತುವೆ ಪಕ್ಕದಲ್ಲಿನ ಮಣ್ಣಿನ ರಸ್ತೆ ಕೊಚ್ಚಿ ಹೋಗಿದೆ. ಅನೇಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅಲ್ಲದೆ ಹೊಲದಲ್ಲಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ. ಆದರಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ.

ಬಾಂದಾರದಲ್ಲಿನ ಹೂಳು ತೆಗೆದರೆ ಅಕ್ಕಪಕ್ಕದ ಹೊಲಗಳಿಗೆ ಆಗುವ ಹಾನಿ ತಪ್ಪಿಸಲು ಸಾಧ್ಯ. ಆದರೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಬಾಂದಾರದಲ್ಲಿನ ಹೂಳು ತೆಗೆಯವ ಯೋಜನೆ ನಮ್ಮ ಇಲಾಖೆಯಲ್ಲಿ ಇಲ್ಲ ಎಂದು ಹೇಳುವ ಮೂಲಕ ಕೈ ತೊಳೆದುಕೊಳ್ಳುತ್ತಾರೆ ಎಂದು ಪು. ಬಡ್ನಿ ಗ್ರಾಮದ ರೈತ ಧರ್ಮಣ್ಣ ಬಟಗುರ್ಕಿ ಆರೋಪಿಸಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಸೋಮವಾರ ಸಂಜೆ ಹಾಗೂ ಮಂಗಳವಾರ ಬೆಳಗ್ಗೆ ಧಾರಾಕಾರ ಮಳೆ ಸುರಿದಿದ್ದು, ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿದೆ. ಮಾಡಳ್ಳಿ, ಯಳವತ್ತಿ, ಯತ್ತಿನಹಳ್ಳಿ, ಗೊಜನೂರು, ಬಟ್ಟೂರ, ಪು. ಬಡ್ನಿ, ರಾಮಗೇರಿ, ಅಕ್ಕಿಗುಂದ ಗ್ರಾಮಗಳಲ್ಲಿ ಹಳ್ಳ-ಕೊಳ್ಳಗಳು ಉಕ್ಕಿ ಹರಿದಿದ್ದು, ಹಲವೆಡೆ ರಸ್ತೆ ಮೇಲೆ ನೀರು ಆವರಿಸಿದೆ.

ಮಾಡಳ್ಳಿಯಿಂದ ಬರದ್ವಾಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ನೀರು ಹರಿದು ಬೇರೆ ಗ್ರಾಮಗಳಿಗೆ ಹೋಗುವ ಪ್ರಯಾಣಿಕರು ಪರದಾಡಿದ್ದಾರೆ. ಗೊಜನೂರು ಗ್ರಾಮದಲ್ಲಿ ಅನೇಕ ಕೆರೆ ಹಾಗೂ ಹೊಲಗಳಲ್ಲಿನ ಒಡ್ಡುಗಳು ಒಡೆದಿವೆ. ಗೊಜನೂರು ಗ್ರಾಮದ ಹತ್ತಿರ ಹಳ್ಳಕ್ಕೆ ದೊಡ್ಡ ಸೇತುವೆ ನಿರ್ಮಿಸಿ ಪದೇ ಪದೇ ಹಳ್ಳದ ನೀರು ರಸ್ತೆಯ ಮೇಲೆ ಹರಿಯುವುದನ್ನು ತಪ್ಪಿಸಬೇಕು ಎಂದು ಚನ್ನಪ್ಪ ಷಣ್ಮುಖಿ ಆಗ್ರಹಿಸಿದ್ದಾರೆ.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ