ರಸ್ತೆ ಬದಿ ಅಂಗಡಿ-ಶೆಡ್‌ ತೆರವು ಕಾರ್ಯಾಚರಣೆ

KannadaprabhaNewsNetwork |  
Published : Apr 20, 2026, 02:30 AM IST
19ಕೆಕೆಆರ್3:ಕುಕನೂರು ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿದ್ದ ಅಂಗಡಿಗಳ ತೆರವು ಕಾರ್ಯಾಚರಣೆ  ಆಗಿದೆ. | Kannada Prabha

ಸಾರಾಂಶ

ರಸ್ತೆ ಬದಿಯಲ್ಲಿ ಹಲವಾರು ವರ್ಷಗಳಿಂದ ಜನರು ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದರು.

ಕುಕನೂರು: ಪಟ್ಟಣದ ಮುಖ್ಯ ರಸ್ತೆ ಬದಿಯ ಅಂಗಡಿಗಳನ್ನು ರಸ್ತೆ ವಿಸ್ತರಣೆ, ಸೌಂದರ್ಯಿಕರಣ ಹಾಗೂ ಬಸವಣ್ಣನವರ ಪುತ್ಥಳಿ ನಿರ್ಮಾಣದ ಹಿನ್ನೆಲೆಯಲ್ಲಿ ಪಪಂ ರಸ್ತೆ ಬದಿ ಅಂಗಡಿ ಮತ್ತು ಶೆಡ್‌ಗಳ ತೆರವು ಕಾರ್ಯಾಚರಣೆ ಕೈಗೊಂಡಿತು.

ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿದ್ದ ಅಂಗಡಿಗಳ ತೆರವು ಕಾರ್ಯಾಚರಣೆ ಆಗಿದೆ. ಈ ರಸ್ತೆ ಬದಿಯಲ್ಲಿ ಹಲವಾರು ವರ್ಷಗಳಿಂದ ಜನರು ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದರು. ಸದ್ಯ ಅವರ ಅಂಗಡಿ ಕಿತ್ತ ಪ್ರಯುಕ್ತ ಅವರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಮೇ. 4ರಂದು ಜಗಜ್ಯೋತಿ ಬಸವಣ್ಣ, ಸಂಗೊಳ್ಳಿ ರಾಯಣ್ಣ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಗಳ ಶಂಕುಸ್ಥಾಪನೆ ನಡೆಯಲಿದ್ದು, ತೆರವು ಆದ ಜಾಗದಲ್ಲಿ ಬಸವಣ್ಣನವರ ಸ್ಮಾರಕ ನಿರ್ಮಾಣ ಉದ್ದೇಶಿಸಿ ತೆರವು ಕಾರ್ಯಾಚರಣೆ ನಡೆದಿದೆ. ಅಂಗಡಿಗಳಿದ್ದ ಹಿಂಭಾಗದಲ್ಲೇ ಸ್ಮಾರಕ ನಿರ್ಮಾಣವಾಗಲಿದೆ.

ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಟೀ ಅಂಗಡಿ, ಹೋಟೆಲ್‌, ಸೈಕಲ್ ಅಂಗಡಿಸೇರಿದಂತೆ ಹಲವು ರಸ್ತೆ ಬದಿ ಮಳಿಗೆ ತೆರವುಗೊಳಿಸಲಾಯಿತು. ಹಲವು ವರ್ಷಗಳಿಂದ ಜೀವನೋಪಾಯವಾಗಿದ್ದ ಈ ಅಂಗಡಿಗಳು ನೆಲಸಮವಾಗಿವೆ. ಒಂದು ಕಡೆ ಸಾಲ ಪಡೆದು ವ್ಯಾಪಾರ ನಡೆಸುತ್ತಿದ್ದ ಸಣ್ಣ ವ್ಯಾಪಾರಿಗಳು ಈಗ ಅಂಗಡಿಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಸಾಲ ತೀರಿಸುವುದೇ ದೊಡ್ಡ ಸಮಸ್ಯೆಯಾಗಿದೆ.

20-30 ವರ್ಷಗಳಿಂದ ಇದೇ ಜಾಗದಲ್ಲಿ ವ್ಯಾಪಾರ ನಡೆಸುತ್ತಿದ್ದೇವೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು, ಈ ಕುರಿತು ವ್ಯಾಪಾರಸ್ಥರು ಪಪಂ ಮುಖ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿದ ವೇಳೆ ಮನವಿ ಮಾಡಿದ್ದಾರೆ.ಇಲ್ಲವಾದರೆ ಬದುಕು ಕಷ್ಟಕರವಾಗಲಿದೆ ಎಂದು ವ್ಯಾಪಾರಸ್ಥರು ಗೋಗರೆದರು.

ಅಂಗಡಿ ಹಾಕಲು ಪಪಂದಿಂದ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಮುಂದೆ ವ್ಯಾಪಾರ ನಡೆಸಿ ಜೀವನ ಸಾಗಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ನಾವು ಸಾಲ ಪಡೆದು ವ್ಯಾಪಾರ ಮಾಡುತ್ತಿದ್ದೇವೆ, ಈಗ ಅಂಗಡಿಗಳೇ ಇಲ್ಲದ ಕಾರಣ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಎಂದು ಮುತ್ತಪ್ಪ ಸಂಗನಾಳ, ವೀರಯ್ಯ ಬಂಡಿ, ಹುಸೇನ್ ಭಾಷ ಕೊಪ್ಪಳ, ಹನುಮಂತಪ್ಪ ಕೂಡ್ಲಿಗಿ, ಮದರ್ ಸಾಬ್ ಮದನದಾರ್, ಹುಸೇನ್ಸಾಬ್ ಬೆಣಕಲ್ ತಿಳಿಸಿದ್ದಾರೆ.

ಪಟ್ಟಣ ತೀವ್ರವಾಗಿ ಬೆಳೆಯುತ್ತಿದಂತೆ ಜನಸಂಖ್ಯೆ ಹಾಗೂ ವಾಹನ ಸಂಚಾರ ಹೆಚ್ಚಳದಿಂದ ಟ್ರಾಫಿಕ್ ಸಮಸ್ಯೆ ಮತ್ತು ಅಪಘಾತಗಳ ಪ್ರಮಾಣ ಹೆಚ್ಚುತ್ತಿದೆ.ಈ ಹಿನ್ನೆಲೆ ಜಿಲ್ಲಾಧಿಕಾರಿ ಹಾಗೂ ಸುಪ್ರೀಂ ಕೋರ್ಟ್ ಆದೇಶ ಅನ್ವಯ,ಫುಟ್‌ಪಾತ್ ಮತ್ತು ರಸ್ತೆ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವ ಶೆಡ್‌ಗಳು ಹಾಗೂ ಅಂಗಡಿ ಮುಗ್ಗಟ್ಟು ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗಿದೆ. ಕಳೆದ ಒಂದು ತಿಂಗಳಿನಿಂದ ವ್ಯಾಪಾರಸ್ಥರಿಗೆ ನೋಟಿಸ್ ನೀಡಿ ಮನವರಿಕೆ ಮಾಡಲಾಗಿದ್ದು, ಬಹುತೇಕರು ಸಹಕಾರ ನೀಡಿದ್ದಾರೆ. ರಸ್ತೆ ಅಗಲೀಕರಣ ಹಾಗೂ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಕುಕನೂರು ಪಪಂ ಮುಖ್ಯಾಧಿಕಾರಿ ನಾಗೇಶ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ‘ಶ್ರೀ ಶಾರದಾ ಆಸರೆ ಯೋಜನೆ’ ಆರಂಭ
ಮಾನವೀಯತೆ ಮೇಲೆ ಸಮಾಜ ನಿರ್ಮಾಣವಾಗಲಿ: ಕಿಮ್ಮನೆ