ಈ ಹಿಂದೆ 2010ರಲ್ಲಿ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ ಇದ್ದಾಗಲೇ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿತ್ತು
ಕುಕನೂರು: 33% ಮಹಿಳಾ ಮೀಸಲಾತಿ ತಂದರೆ ಸ್ವಾಗತಿಸುತ್ತೇವೆ. ಆದರೆ ಕ್ಷೇತ್ರ ವಿಂಗಡಣೆಗೆ ನಮ್ಮ ವಿರೋಧವಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ವಿಂಗಡಣೆ ಆದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಸೀಟು ಬಹಳ ಬರುವುದಿಲ್ಲ. ಪಾಪ್ಯುಲೇಷನ್ ಗ್ರೌಥ್ ರೇಟ್ ಪ್ರಕಾರ ಕ್ಷೇತ್ರ ವಿಂಗಡಣೆ ಆದರೆ ದಕ್ಷಿಣ ಭಾರತಕ್ಕೆ ಕಡಿಮೆ ಸೀಟು ಬರುತ್ತವೆ. ನಮ್ಮವರು ಪ್ರಧಾನಿ ಸಹ ಆಗುವದಿಲ್ಲ. ಇದನ್ನು ಕೇಳಿದರೆ ದುಪ್ಪಟ್ಟು ಮಾಡುತ್ತೇವೆ ಎನ್ನುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಎಂದೂ ವಿರೋಧಿಸಿಲ್ಲ. ಈ ಹಿಂದೆ 2010ರಲ್ಲಿ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ ಇದ್ದಾಗಲೇ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿತ್ತು. 2023ರಲ್ಲಿ ನರೇಂದ್ರ ಮೋದಿ ಅವಧಿಯಲ್ಲಿ ಲೋಕಸಭೆಯಲ್ಲಿ ಬಿಲ್ ಪಾಸ್ ಆಗಿದೆ. ಬರೀ ಮೀಸಲಾತಿ ಜಾರಿಗೆ ತಂದಿದ್ದರೆ ಯಾವುದೇ ತೊಂದರೆ ಇರುತ್ತಿಲ್ಲ. ಬಿಜೆಪಿಯವರು ತಮ್ಮ ಲಾಭಕ್ಕಾಗಿ ಕ್ಷೇತ್ರ ವಿಂಗಡಣೆ ಸಹ ಇದರ ಜತೆ ಸೇರಿಸಿ ಲಾಭಿ ಮಾಡಲು ಹೊರಟಿದ್ದರಿಂದ ಮಸೂದೆಗಳ ಅಂಗೀಕಾರಕ್ಕೆ ಮತ ನೀಡಿಲ್ಲ. ೨೦೧೧ ರ ಜನಸಂಖ್ಯೆ ಆಧಾರ ಮೇಲೆ ಮಾಡುತ್ತೇವೆ ಎಂದು ಹೇಳುತ್ತಾರೆ. ದಕ್ಷಿಣ ಭಾರತದ ಜನನ ಫರ್ಟೀಲೀಟಿ ರೇಟ್ 1.6 ಕ್ಕಿಂತ ಕೆಳಗೆ ಇದೆ. ಆದರೆ ಉತ್ತರ ಭಾರತದ್ದು 2.8ಕ್ಕಿಂತ ಜಾಸ್ತಿ ಇದೆ. ಹಾಗಾಗಿ ಕ್ಷೇತ್ರ ವಿಂಗಡಣೆ ಆದರೆ ಆ ಭಾಗಕ್ಕೆ ಹೆಚ್ಚು ಕ್ಷೇತ್ರಗಳು ಹೋಗಲಿವೆ.
ಮಂತ್ರಿ ಆಗುವ ಆಸೆ ಇದೆ: ನನಗೂ ಮಂತ್ರಿ ಆಗುವ ಆಸೆ ಇದೆ. ಆದರೆ ಮಾಡಬೇಕು. ನಾನು ಸಹ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಮಂತ್ರಿ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ. ಸಿಎಂ ಜತೆ ಕಾರ್ಯ ಮಾಡಿದ್ದೇನೆ. ಮಂತ್ರಿ ಆಗುವ ಆಸೆ ಇದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.