ರಸ್ತೆ ಪಕ್ಕದ ಗೂಡಂಗಡಿಗಳ ತೆರವು ಕಾರ್ಯಾಚರಣೆ

KannadaprabhaNewsNetwork |  
Published : Apr 23, 2025, 12:37 AM IST
೨೨ಬಿಎಸ್ವಿ೦೩- ಬಸವನಬಾಗೇವಾಡಿಯ ಪುರಸಭೆಯಿಂದ ಪಟ್ಟಣದಲ್ಲಿ ಪಾದಚಾರಿ ರಸ್ತೆಯಲ್ಲಿದ್ದ ಗೂಡಂಗಡಿಗಳ ತೆರವು ಕಾರ್ಯಾಚರಣೆ ಮಂಗಳವಾರ ಜರುಗಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದಿಂದ ಇವಣಗಿ ಗ್ರಾಮದ ಕೂಡು ರಸ್ತೆಯವರೆಗೂ ಎರಡು ಬದಿಯಿರುವ ಪಾದಚಾರಿ ರಸ್ತೆಯಲ್ಲಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆ ಮಂಗಳವಾರ ಪುರಸಭೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಬಸವೇಶ್ವರ ವೃತ್ತದಿಂದ ಇವಣಗಿ ಗ್ರಾಮದ ಕೂಡು ರಸ್ತೆಯವರೆಗೂ ಎರಡು ಬದಿಯಿರುವ ಪಾದಚಾರಿ ರಸ್ತೆಯಲ್ಲಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆ ಮಂಗಳವಾರ ಪುರಸಭೆಯಿಂದ ನಡೆಯಿತು.

ಪಾದಚಾರಿ ರಸ್ತೆಗೆ ಹೊಂದಿಕೊಂಡಿರುವ ವಿವಿಧ ಗೂಡಂಗಡಿಗಳನ್ನು ಈಗಾಗಲೇ ಎರಡು-ಮೂರು ಸಲ ತೆರವು ಮಾಡಲಾಗಿತ್ತು. ಮತ್ತೆ ಗೂಡಂಗಡಿಗಳು ತಲೆ ಎತ್ತಿದ್ದ ಪರಿಣಾಮ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ನೇತೃತ್ವದಲ್ಲಿ ಮಂಗಳವಾರ ಮತ್ತೆ ತೆರವು ಕಾರ್ಯಾಚರಣೆ ಜರುಗಿತು. ಗೂಡಂಗಡಿಗಳ ಮಾಲೀಕರು ಇಲ್ಲದೇ ಇರುವ ಗೂಡಂಗಡಿಗಳನ್ನು ತೆರವುಗೊಳಿಸಿ ಮೆಗಾ ಮಾರುಕಟ್ಟೆಯಲ್ಲಿ ಪುರಸಭೆ ಸಿಬ್ಬಂದಿ ತೆಗೆದುಇಟ್ಟರು. ಸ್ಥಳದಲ್ಲಿದ್ದ ಗೂಡಂಗಡಿ ಮಾಲೀಕರು ತಮ್ಮ ತಮ್ಮ ಅಂಗಡಿಗಳನ್ನು ತೆರವು ಮಾಡಿಕೊಂಡರು. ಪಿಐ ಗುರುಶಾಂತ ದಾಶ್ಯಾಳ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಪುರಸಭೆಯಿಂದ ತೆರವು ಕಾರ್ಯಾಚರಣೆ ಮಾಡಲಾಗಿದೆ. ಹಿಂದೆ ತೆರವು ಮಾಡಿದಾಗ ಅವರಿಗೆ ಮೆಗಾ ಮಾರುಕಟ್ಟೆ ಪಕ್ಕದಲ್ಲಿ ಅಂಗಡಿಗಳನ್ನು ಹಾಕಿಕೊಳ್ಳಲು ಜಾಗೆ ಗುರುತಿಸಲಾಗಿತ್ತು. ಅಲ್ಲಿ ತಮ್ಮ ಅಂಗಡಿಗಳನ್ನು ಹಾಕಿಕೊಳ್ಳುವಂತೆ ತಿಳಿಸಿತ್ತು. ತೆರವು ಕಾರ್ಯಾಚರಣೆ ಮಾಡಿದರೂ ಮತ್ತೆ ಪಾದಚಾರಿ ರಸ್ತೆಗೆ ಹೊಂದಿಕೊಂಡಂತೆ ಗೂಡಂಗಡಿಗಳನ್ನು ಹಾಕಿಕೊಂಡಿದ್ದರಿಂದ ಮತ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರಿಂದಾಗಿ ಮತ್ತೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತೆ ಗೂಡಂಗಡಿಗಳನ್ನು ಹಾಕಿದರೆ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಗೂಡಂಗಡಿಯವರು ಪುರಸಭೆಯೊಂದಿಗೆ ಸಹಕಾರ ನೀಡುವ ಮೂಲಕ ತಮಗೆ ನಿಗದಿಪಡಿಸಿದ ಜಾಗೆಯಲ್ಲಿ ತಮ್ಮ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡಬೇಕು. ಇದನ್ನು ಗೂಡಂಗಡಿಯವರು ತಿಳಿದುಕೊಳ್ಳಬೇಕಿದೆ ಎಂದರು. ತೆರವು ಕಾರ್ಯಾಚರಣೆಯಲ್ಲಿ ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಅಭಿಯಂತರ ಮಹಾದೇವ ಜಂಬಗಿ, ಆರೋಗ್ಯ ನಿರೀಕ್ಷಕ ವಿಜಯಕುಮಾರ ವಂದಾಲ, ರಾವುತ ಮ್ಯಾಗೇರಿ, ರಾಜು ರಾಠೋಡ, ಗುರು ಮಾಗಾವಿ, ಆನಂದ ಸೇರಿದಂತೆ ಇತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ