ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಜು. 29ರಂದು ರಾತ್ರಿ ಉದ್ಯಮಿ ದಂಪತಿಗಳ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ವರ್ತಕ ಸಮುದಾಯದಲ್ಲಿ ಆತಂಕ ಮನೆ ಮಾಡಿತ್ತು. ಈ ನಿಟ್ಟಿನಲ್ಲಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪೊಲೀಸರಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು. ಘಟನೆ ನಡೆದ 8 ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ, ಹಣ, ವಾಹನಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಮೂಲಕ ವರ್ತಕ ಸಮುದಾಯದಲ್ಲಿ ಧೈರ್ಯ ತುಂಬಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ಸಂಘದ ಅಧ್ಯಕ್ಷ ಜಿ.ಕೆ. ಧನುರಾಜ್ ಹೇಳಿದರು.
ಪೊಲೀಸರ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೂ ಶ್ಲಾಘಿಸಿದ್ದಾರೆ. ನಮ್ಮ ಸಂಘದ ಮನವಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಪೊಲೀಸ್ ಡಿವೈಎಸ್‍ಪಿ ಗಂಗಾಧರಪ್ಪ, ಇನ್ಸ್‌ಪೆಕ್ಟರ್ ಮುದ್ದು ಮಾದೇವ, ಅಪರಾಧ ವಿಭಾಗದ ಠಾಣಾಧಿಕಾರಿ ಗೋಪಾಲ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಪದಾಧಿಕಾರಿಗಳಾದ ರಾಮ್‍ಶೆಟ್ಟಿ, ಜನಾರ್ದನ್, ತಿಮ್ಮಶೆಟ್ಟಿ, ಪ್ರಮೋದ್, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.