ದರೋಡೆ ಪ್ರಕರಣ: ಕುಖ್ಯಾತ ಕಳ್ಳರ ಬಂಧನ

KannadaprabhaNewsNetwork | Published : Mar 16, 2025 1:51 AM

ಸಾರಾಂಶ

ನಗರ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳ ಗೂಡ್ಸ್ ವಾಹನ, ಆಟೋ ರಿಕ್ಷಾ, ಕೊಬ್ಬರಿ, ಗುಜರಿ ವಸ್ತುಗಳು, ತೆಂಗಿನಕಾಯಿ ಮತ್ತು ಪಡಿತರ ಅಕ್ಕಿಯ ಕಳ್ಳತನ ಮಾಡಿದ್ದ ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ನಗರ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳ ಗೂಡ್ಸ್ ವಾಹನ, ಆಟೋ ರಿಕ್ಷಾ, ಕೊಬ್ಬರಿ, ಗುಜರಿ ವಸ್ತುಗಳು, ತೆಂಗಿನಕಾಯಿ ಮತ್ತು ಪಡಿತರ ಅಕ್ಕಿಯ ಕಳ್ಳತನ ಮಾಡಿದ್ದ ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಜನವರಿ 27ರಂದು ತಿಪಟೂರಿನ ಕೃಷಿ ಉತ್ಪನ್ನ ಕೊಬ್ಬರಿ ಮಾರುಕಟ್ಟೆಯಲ್ಲಿರುವ ಶ್ರೀಗಂಗಾ ಟ್ರೇಡರ್ಸ್ ಕೊಬ್ಬರಿ ಅಂಗಡಿಯ ಬಾಗಿಲು ಮುರಿದು ಕೊಬ್ಬರಿ ತುಂಬಿರುವ ಚೀಲಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಮಾಲೀಕ ಲಕ್ಷ್ಮಣರವರ ತಂದೆ ನಾಗರಾಜು ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಪ್ರಕರಣವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್ ರವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿ.ಮರಿಯಪ್ಪ ಹಾಗೂ ಬಿ.ಎಸ್.ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿ ತಿಪಟೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ವಿನಾಯಕ ಶೆಟಗೇರಿ ಮಾರ್ಗಸೂಚನೆ ಮೇರೆಗೆ ತಿಪಟೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವೆಂಕಟೇಶ್, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಡಿ.ಕೃಷ್ಣಪ್ಪ ಸೇರಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಸದ್ದಾಂ ಹುಸೇನ್ (24), ಹಾಲಹಳ್ಳಿ ಮಂಡ್ಯ, ರಾಹೀಲ್ (22) ಶ್ರೀನಗರ ಮೈಸೂರು ಇವರನ್ನು ಬಂಧಿಸಲಾಗಿದೆ. ಇವರಿಂದ ೩೮ ಚೀಲಗಳ ಕೊಬ್ಬರಿಯನ್ನು ಮತ್ತು ಹಾಸನ ಜಿಲ್ಲೆ ಗೊರೂರು ಪೊಲೀಸ್ ಠಾಣಾ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಆಶೋಕ ಲೈಲ್ಯಾಂಡ್ ವಾಹನ ಮತ್ತು ಕಳ್ಳತನ ಮಾಡಲು ಬಳಸಿದ್ದ ಕಬ್ಬಿಣದ ರಾಡು, ಹಗ್ಗ, ಟರ್ಪಾಲ್, ಚಾಕುವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ನಂತರ ತಿಪಟೂರು ನಗರ ಬಂಡಿಹಳ್ಳಿ ಗೇಟ್‌ನ ಮಸೂದ್ ಇಂಜಿನಿಯರಿಂಗ್ ವರ್ಕನಲ್ಲಿ ಕಳ್ಳತನ ಮಾಡಿದ ಗುಜರಿ ಮಾಲುಗಳನ್ನು ಮಾರಾಟ ಮಾಡಿ ಪಡೆದ ಒಂದು ಲಕ್ಷ ರು. ಹಣ ವಶಕ್ಕೆ ಪಡೆಯಲಾಗಿದೆ.

ಅಲ್ಲದೆ, ಆರೋಪಿಗಳಿಂದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಆಟೋ ರಿಕ್ಷಾ ವಾಹನ ವಶಕ್ಕೆ ಪಡೆಯಲಾಗಿದೆ.

ಮೈಸೂರು ಮತ್ತು ನೊಣವಿನಕೆರೆ ಪೊಲೀಸ್ ಠಾಣಾ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಗೂಡ್ಸ್ ವಾಹನಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ರಾಜ್ಯ ವಿವಿಧ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸರ್ಕಾರಿ ಗೋದಾಮುಗಳಲ್ಲಿ ಪಡಿತರ ಆಹಾರ ಅಕ್ಕಿ ಮತ್ತು ತುರುವೇಕೆರೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ತೆಂಗಿನಕಾಯಿ ಕಳ್ಳತನ ಮಾಡಿದ್ದು. ಈ ಆರೋಪಿಗಳಿಂದ ಕಳ್ಳತನ ಮಾಡಿದ್ದ ಸುಮಾರು ೧೦ ಲಕ್ಷ ರು. ಮೌಲ್ಯದ ಕೊಬ್ಬರಿ, ಗೂಡ್ಸ್ ವಾಹನ, ಆಟೋ ರಿಕ್ಷಾ ವಾಹನ, ಒಂದು ಲಕ್ಷ ರು. ಹಣ ಹಾಗೂ ಕೃತ್ಯಕ್ಕೆ ಬಳಸಿದ ಸಾಮಗ್ರಿಗಳನ್ನು ವಶಕ್ಕೆ ಪಡೆದು ಈಗ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಪ್ರಶಂಶಿಸಿದ್ದಾರೆ.

Share this article