ಮಡಿಕೇರಿ : ಭಾರಿ ಚರ್ಚೆಗೆ ಕಾರಣವಾಗಿದ್ದ ಮಡಿಕೇರಿಯ ಪೊಲೀಸ್ ವಸತಿ ಗೃಹದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳವು ಮಾಡಿ ಎಸ್ಕೇಪ್ ಆಗಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಸುರೇಶ್ ಸೇಂಗರ್, ಮನೀಶ್ ಭಗೇಲ್ ಎಂಬುವವರೇ ಬಂಧಿತ ಆರೋಪಿಗಳು.ಆರೋಪಿಗಳಿಂದ 50,480 ನಗದು, 09 ಮೊಬೈಲ್ ಫೋನ್‌ಗಳು, ಒಂದು ಬೋಲ್ಟ್ ಕಟ್ಟರ್, ಒಂದು ಕಬ್ಬಿಣದ ರಾಡ್, ಒಂದು ಬ್ಯಾಕ್ ಪ್ಯಾಕ್ ಬ್ಯಾಗ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ರಾಮರಾಜನ್ ಮಾಹಿತಿ ನೀಡಿದ್ದಾರೆ.ಆಂಧ್ರ, ತಮಿಳುನಾಡು, ತೆಲಂಗಾಣ ಮಹಾರಾಷ್ಟ್ರ, ಗೋವಾ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳ್ಳತನ ಕೊಲೆ ಸುಲಿಗೆ ಮಾಡಿರುವ ಈ ನಟೋರಿಯಸ್ ಗ್ಯಾಂಗ್ ಕಳೆದ ಜೂನ್ 17 ರಂದು ಮಡಿಕೇರಿಯಲ್ಲಿರುವ ಸುಮಾರು ಎಂಟು ಪೊಲೀಸ್ ಕ್ವಾಟ್ರಸ್ ಗಳಲ್ಲಿ ಬೀಗ ಮುರಿದು ಚಿನ್ನ, ಬೆಳ್ಳಿ, ನಗದು ಸೇರಿ ಒಂದುವರೆ ಲಕ್ಷ ದೋಚಿ ಎಸ್ಕೇಪ್ ಆಗಿತ್ತು.ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ಕೊಡಗು ಎಸ್ಪಿ ರಾಮಾರಾಜನ್ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದರು. ಎಸ್ಪಿ ರಾಮರಾಜನ್ ಹಾಗೂ ಹೆಚ್ಚುವರಿ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸುಮಾರು 700 ಕಿಲೋಮೀಟರ್ ವ್ಯಾಪ್ತಿಯಲ್ಲಿ 500 ಸಿಸಿ ಕ್ಯಾಮೆರಾಗಳ ಪರಿಶೀಲಿಸಿದ್ದ ಕೊಡಗು ಪೊಲೀಸರ ತಂಡ ಆರೋಪಿಗಳ ಮಾಹಿತಿ ಕಲೆ ಹಾಕಿ ಆರೋಪಿಗಳ ಪತ್ತೆಗಾಗಿ ಒಂದು ತಿಂಗಳು ಮಧ್ಯಪ್ರದೇಶದಲ್ಲಿ ತಂಗಿ ಆರೋಪಿಗಳ ಜಾಡು ಹಿಡಿದು ಎರಡು ತಿಂಗಳ ಬಳಿಕ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.ವಿಚಾರಣೆ ವೇಳೆ ಕೃತ್ಯದಲ್ಲಿ ಮೂರು ಜನ ಭಾಗಿಇರುವ ವಿಚಾರ ಬೆಳಕಿಗೆ ಬಂದಿದ್ದು, ಮತ್ತೋರ್ವ ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರೆಸಲಾಗಿದೆ ಎಂದು ಎಸ್ಪಿ ರಾಮರಾಜನ್ ತಿಳಿಸಿದ್ದಾರೆಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹಾಗೂ ಹೆಚ್ಚುವರಿ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಪೊಲೀಸ್ ವಸತಿ ಗೃಹ ಕಳ್ಳತನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಕೊಡಗು ಪೊಲೀಸ್ ತಂಡದ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ.