ಮನೆ ಮಂದಿ ಕಟ್ಟಿಹಾಕಿ ನಗದು, ಚಿನ್ನಾಭರಣ ದರೋಡೆ

KannadaprabhaNewsNetwork |  
Published : Sep 16, 2024, 01:50 AM IST
15ಕೆಪಿಆರ್‌ಸಿಆರ್ 01 :  | Kannada Prabha

ಸಾರಾಂಶ

ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿನ ಶ್ರೀ ಲಕ್ಷ್ಮೀ ನರಸಿಂಹ ಬಡಾವಣೆಯ ನಿವಾಸಿ ಬಸನಗೌಡ ಮಟಮಾರಿ ಎಂಬುವವರ ಮನೆ ದರೋಡೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಮನೆ ಬಾಗಿಲು ಮುರಿದು ಒಳ ನುಗ್ಗಿದ ದರೋಡೆಕೋರರು ಮನೆಯವರನ್ನು ಕಟ್ಟಿಹಾಕಿ ನಗದು, ಚಿನ್ನ, ಬೆಳ್ಳಿ ಹಣ ದರೋಡೆ ಮಾಡಿದ ಘಟನೆ ನಗರದಲ್ಲಿ ರವಿವಾರ ಜರುಗಿದೆ.

ರವಿವಾರ ಬೆಳಗ್ಗಿನ ಜಾವ ಸ್ಥಳೀಯ ಆಶಾಪುರ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಬಡಾವಣೆಯ ನಿವಾಸಿ ಬಸನಗೌಡ ಮಟಮಾರಿ ಎಂಬುವವರ ಮನೆಗೆ ನುಗ್ಗಿದ ನಾಲ್ಕು ಜನ ಮುಸುಕುಧಾರಿಗಳು ಚಾಕು ತೋರಿಸಿ ಬೆದರಿಸಿ, ಮನೆಯವರನ್ನು ಕಟ್ಟಿಹಾಕಿ 22 ತೊಲೆ ಬಂಗಾರ, 2 ಕೆಜಿ ಬೆಳ್ಳಿ, 2 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.

ಪೂರ್ವ ಯೋಜನೆಯಂತೆ ನಾಲ್ಕು ಜನ ದರೋಡೆಕೋರರ ಗ್ಯಾಂಗ್ ಕಪ್ಪು ಬಟ್ಟೆ ಧರಿಸಿ ಮನೆ ರಸ್ತೆಯ ಅಕ್ಕಪಕ್ಕದ ಕಂಬಗಳ, ಮನೆಗಳ ಮುಂದಿನ ದೀಪಗಳನ್ನು ಆಫ್‌ ಮಾಡಿ, ಅಕ್ಕ-ಪಕ್ಕದ ಮನೆಗಳಿಗೆ ಹೊರಗಿಂದ ಲಾಕ್ ಮಾಡಿದ್ದು, ಮನೆಯೊಳಗೆ ನುಗ್ಗಿ ತಾಯಿ ಶಾರಾದಾ, ಮಗಳು ವೀಣಾ ಅವರನ್ನು ಚಾಕುವಿನಿಂದ ಬೆದರಿಸಿ ಅವರ ಕೊರಳಲ್ಲಿದ್ದ ಚಿನ್ನವನ್ನು ಕಿತ್ತುಕೊಂಡಿದ್ದು, ಕೊಠಡಿಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ಕದ್ದು ಕಾಲುಕಿತ್ತಿದ್ದಾರೆ.

ಘಟನೆ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಶ್ವಾನ ದಳ ಹಾಗೂ ಬೆರಳಚ್ಚಿನ ತಂಡದ ತಜ್ಞರು ಬಂದು ಮನೆಯನ್ನು ಶೋಧಿಸಿ ದರೋಡೆಕೋರರ ಕುರುಹು ಸಂಗ್ರಹಿಸಿದರು. ಘಟನಾವಳಿಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಗರದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರ ಪತ್ತೆಗೆ ಶೋಧಕಾರ್ಯವನ್ನು ಆರಂಭಿಸಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆ ವರ್ತಕರೊಬ್ಬರನ್ನು ಅಪಹರಿಸುವ ಪ್ರಯತ್ನ ಮಾಡಿ, ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಮಾಸುವೆ ಮುನ್ನವೇ ನಗರದಲ್ಲಿ ಎಂದೂ ನಡೆಯದ ಇಂತಹ ಘಟನೆಯಿಂದಾಗಿ ಸುತ್ತ-ಮುತ್ತಲಿನ ಮನೆಗಳ ಜನರು ತೀವ್ರ ಆತಂಕಗೊಂಡಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ