ಗ್ಯಾರಂಟಿ ನೆಪದಲ್ಲಿ ಜನರ ಜೇಬಿಗೆ ಕನ್ನ: ಮಾಜಿ ಮುಖ್ಯಮಂತ್ರಿ ಎಚ್ಡಿಕೆ

KannadaprabhaNewsNetwork |  
Published : Apr 19, 2024, 01:01 AM IST
59 | Kannada Prabha

ಸಾರಾಂಶ

ಗ್ಯಾರಂಟಿಗಳ ನೆಪದಲ್ಲಿ ಕಳೆದ 11 ತಿಂಗಳಿನಿಂದ ರಾಜ್ಯದಲ್ಲಿ ಯಾವುದಾದರೊಂದು ಅಬಿವೃದ್ಧಿ ಕಾರ್ಯ ಆಗಿದೆಯೇ? ನಾನು ಮುಖ್ಯಮಂತ್ರಿಯಾಗಿ ಎರಡು ಬಾರಿ ಅಧಿಕಾರ ನಡೆಸಿದಾಗ ಎರಡು ಬಾರಿಯೂ ರೈತರ ಸಾಲ ಮನ್ನಾ ಮಾಡಿದ್ದೆ. ಸಾರಾಯಿ ನಿಷೇಧ, ಲಾಟರಿ ನಿಷೇಧದಂತಹ ಕ್ರಾಂತಿಕಾರಿ ಕ್ರಮ ಜರುಗಿಸಿದ್ದೆ. ಆದರೆ ಇಂದಿನ ರಾಜ್ಯ ಸರ್ಕಾರ ಗ್ಯಾರಂಟಿಗಳ ಯೋಜನೆ ಕಾರಣವೊಡ್ಡಿ ಜನರಿಗೆ ಟೋಪಿ ಹಾಕುತ್ತಿದೆ.

ಕನ್ನಡಪ್ರಭ ವಾರ್ತೆ ಹುಣಸೂರು

ಗ್ಯಾರಂಟಿಗಳ ನೆಪದಲ್ಲಿ ಜನರ ಜೇಬಿಗೆ ಪಿಕ್ ಪಾಕೆಟ್ ಮಾಡುವ ಮೂಲಕ ಮತದಾರನಿಗೆ ರಾಜ್ಯ ಸರ್ಕಾರ ಮೋಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರ ಇತ್ತೀಚೆಗೆ ರೋಡ್ ಶೋದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ಯಾರಂಟಿಗಳ ನೆಪದಲ್ಲಿ ಕಳೆದ 11 ತಿಂಗಳಿನಿಂದ ರಾಜ್ಯದಲ್ಲಿ ಯಾವುದಾದರೊಂದು ಅಬಿವೃದ್ಧಿ ಕಾರ್ಯ ಆಗಿದೆಯೇ? ನಾನು ಮುಖ್ಯಮಂತ್ರಿಯಾಗಿ ಎರಡು ಬಾರಿ ಅಧಿಕಾರ ನಡೆಸಿದಾಗ ಎರಡು ಬಾರಿಯೂ ರೈತರ ಸಾಲ ಮನ್ನಾ ಮಾಡಿದ್ದೆ. ಸಾರಾಯಿ ನಿಷೇಧ, ಲಾಟರಿ ನಿಷೇಧದಂತಹ ಕ್ರಾಂತಿಕಾರಿ ಕ್ರಮ ಜರುಗಿಸಿದ್ದೆ. ಆದರೆ ಇಂದಿನ ರಾಜ್ಯ ಸರ್ಕಾರ ಗ್ಯಾರಂಟಿಗಳ ಯೋಜನೆ ಕಾರಣವೊಡ್ಡಿ ಜನರಿಗೆ ಟೋಪಿ ಹಾಕುತ್ತಿದೆ. ಮದ್ಯದ ಬೆಲೆ ಗಗನಕ್ಕೇರಿಸುವ ಮೂಲಕ ಜನರ ಜೀಬಿಗೆ ಕನ್ನ ಹಾಕುತ್ತಿದೆ ಎಂದು ಟೀಕಿಸಿದರು.

ಮೀಸಲಾತಿ ವಿರೋಧಿ ಕಾಂಗ್ರೆಸ್:

ಮೀಸಲಾತಿ ವ್ಯವಸ್ಥೆಯನ್ನೇ ವಿರೋಧಿಸಿದ್ದ ಕಾಂಗ್ರೆಸ್ ಇದೀಗ ಬಿಜೆಪಿ ಸರ್ಕಾರ ಸಂವಿಧಾನವನ್ನೇ ಬದಲಾಯಿಸುತ್ತದೆ ಎಂಬ ಸುಳ್ಳು ಆರೋಪ ಹೊರಿಸುತ್ತಿದೆ. ಈ ದೇಶದ ಆರ್ಥಿಕ ಅಭಿವೃದ್ಧಿಗೆ, ಭ್ರದ್ರತೆಗಾಗಿ ಹಾಗೂ ಜನರ ಸ್ವಾವಲಂಬಿ ಬದುಕಿಗಾಗಿ ಮತ್ತೆ ಮೋದಿಜಿ ಪ್ರಧಾನಮಂತ್ರಿಯಾಗಬೇಕೆಂಬ ಕೂಗು ದೇಶದೆಲ್ಲೆಡೆ ಎದ್ದಿದೆ. ಆದರೆ ಕಾಂಗ್ರೆಸ್ ಬಿಜೆಪಿ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುತ್ತಿದೆ. ಸಂವಿಧಾನ ಬದಲಾವಣೆ, ಮೀಸಲಾತಿ ವಿರೋಧಿ ಪಟ್ಟ ಕಟ್ಟುತ್ತಿದೆ. ವಿರ್ಯಾಸವೆಂದರೆ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ನೇರವಾಗಿ ಸೋಲಿಸಿದ ಪಕ್ಷ ಕಾಂಗ್ರೆಸ್. ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸಿದ್ದ ಪಕ್ಷ ಕಾಂಗ್ರೆಸ್. ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ಇಂತಹವರು ಇದೀಗ ಮೋದಿಯವರ ವಿರುದ್ದ ಗುಲ್ಲು ಹಬ್ಬಿಸುವ ಕಾರ್ಯ ನಡೆಸಿರುವುದು ಖಂಡನೀಯವೆಂದರು.

ತಂಬಾಕು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್:

ನಾನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಜನತೆ ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ. ನನಗೆ ಕೇಂದ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಲ್ಲಿ, ಈ ಭಾಗದ ತಂಬಾಕು ಬೆಳೆವ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಶಾಶ್ವತ ವಿಶೇಷ ಪ್ಯಾಕೇಜ್ ರೂಪಿಸುತ್ತೇನೆ. ರಾಜ್ಯದಲ್ಲಿ ಭೀಕರ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ರೈತರಿಗೆ ಬೆಳೆ ಪರಿಹಾರವಾಗಿ ರಾಜ್ಯ ಸರ್ಕಾರ ಕೇವಲ 2 ಸಾವಿರ ರು.ಗಳನ್ನು ನೀಡುತ್ತಿದೆ. ಅದರಲ್ಲೂ ಶೇ. 75 ಭಾಗ ಕೇಂದ್ರ ಸರ್ಕಾರದ ಕೊಡುಗೆಯಾಗಿದೆ. ಇಂತಹ ದರಿದ್ರ ಸರ್ಕಾರ ನಿಮಗೆ ಬೇಕೇ ಎಂದು ಸಭಿಕರನ್ನು ಪ್ರಶ್ನಿಸಿದರು. ದೇಶದ 80 ಕೋಟಿ ಜನರಿಗೆ 3 ಲಕ್ಷ ಕೋಟಿ ರು. ವೆಚ್ಚದಡಿ ಉಚಿತವಾಗಿ 5 ಕೆಜಿ ಅಕ್ಕಿಯನ್ನು ಮೋದಿ ನೀಡುತ್ತಿದ್ದಾರೆ. ಆದರೆ ಅನ್ನಭಾಗ್ಯದ ಹೆಸರಿನಲ್ಲಿ ನಾನು ಕೊಟ್ಟೆ ಎಂದು ರಾಜ್ಯ ಸರ್ಕಾರ ಬೊಬ್ಬೆ ಹೊಡೆದುಕೊಳ್ಳುತ್ತಿರುವುದು ದುರಂತವಾಗಿದೆ.

ಯದುವಂಶದ ಕುಡಿ ಯದುವೀರ್ ಒಡೆಯರ್ ಅತ್ಯಂತ ಮೃದು ಸ್ವಭಾವದ ವ್ಯಕ್ತಿಯಾಗಿದ್ದು, ಸಾಮಾನ್ಯರಲ್ಲಿ ಸಾಮಾನ್ಯನಾಗಿ ಸೇವೆ ಸಲ್ಲಿಸಲು ಬಂದಿದ್ದಾರೆ. ಮೈಸೂರು ಸಂಸ್ಥಾನದ ಅರಸರ ಕೊಡುಗೆ ಈ ನಾಡಿಗೆ ಅಪಾರವಾಗಿದ್ದು, ಅವರ ವಂಶದ ಯದುವೀರ್ ಅವರನ್ನು ನೀವೆಲ್ಲರೂ ಒಮ್ಮತದಿಂದ ಆರಿಸಿ ಲೋಕಸಭೆಗೆ ಕಳುಹಿಸಬೇಕೆಂದು ಕೋರಿದರು.

ಕಮಲದ ಗುರುತಿಗೆ ಮತ ಹಾಕಿರಿ:

ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತ, ಮತದಾನದ ದಿನ ಇವಿಎಂ ಯಂತ್ರದಲ್ಲಿ ಜೆಡಿಎಸ್ ನ ತೆನೆಹೊತ್ತ ಮಹಿಳೆಯ ಗುರುತು ಇರುವುದಿಲ್ಲ. ಇದರಿಂದ ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೊಳಗಾಗಬಾರದು. ಈ ಬಾರಿ ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದು, ನಮ್ಮೆಲ್ಲರ ಅಭ್ಯರ್ಥಿ ಬಿಜೆಪಿಯ ಯದುವೀರ್ ಒಡೆಯರ್ ಆಗಿದ್ದು, ಕ್ರಮಸಂಖ್ಯೆ 1ರ ಕಮಲದ ಗುರುತಿಗೆ ಮತಹಾಕಿರಿ ಎಂದು ಕೋರಿದ್ದು ವಿಶೇಷವಾಗಿತ್ತು.

ಶಾಸಕ ಜಿ.ಡಿ. ಹರೀಶ್ ಗೌಡ, ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು.

ಮಾಜಿ ಸಚಿವ ಎಸ್.ಎ. ರಾಮದಾಸ್, ದೇವರಾಜ ಅರಸು ಮೊಮ್ಮಗ ಮಂಜುನಾಥ ಅರಸ್, ಮುಖಂಡರಾದ ಶ್ರೀಧರ್, ಸತೀಶ್ ಪಾಪಣ್ಣ, ಅಮಿತ್ ದೇವರಹಟ್ಟಿ, ಶರವಣ ಇದ್ದರು. ರೋಡ್ ಶೋ ಆರಂಭಗೊಂಡ ಅರಸು ಪುತ್ಥಳಿ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತಯಾಚಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ