ನ. 1ರಂದು ರೋಬೋ ಟೀಚರ್ ಪರಿಕಲ್ಪನೆ ಜಾರಿಗೆ: ಶಾಸಕ ಕೋಳಿವಾಡ

KannadaprabhaNewsNetwork |  
Published : Oct 24, 2025, 01:00 AM IST
ಪ್ರಕಾಶ ಕೋಳಿವಾಡ | Kannada Prabha

ಸಾರಾಂಶ

ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ಜನ್ಮದಿನವಾದ ನ. 1ರಂದು ತಾಲೂಕಿನ ಗುಡಗೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಣಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಿದ ರೋಬೋ ಟೀಚರ್ ಪರಿಕಲ್ಪನೆ ಜಾರಿಗೆ ತರಲಾಗುತ್ತಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ರಾಣಿಬೆನ್ನೂರು: ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ಜನ್ಮದಿನವಾದ ನ. 1ರಂದು ತಾಲೂಕಿನ ಗುಡಗೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಣಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಿದ ರೋಬೋ ಟೀಚರ್ ಪರಿಕಲ್ಪನೆ ಜಾರಿಗೆ ತರಲಾಗುತ್ತಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶಾಸಕ ಪ್ರಕಾಶ ಕೋಳಿವಾಡ, ರೋಬೋ ಟೀಚರ್ ಮಕ್ಕಳಿಗೆ ಶಿಕ್ಷಕರು ಯಾವ ರೀತಿ ಪಾಠ ಮಾಡಬೇಕು ಎಂಬುದನ್ನು ಹೇಳಿಕೊಡುತ್ತದೆ. ಇದು ಮಕ್ಕಳು ಕೇಳುವ ಎಲ್ಲ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ಕೊಡುತ್ತದೆ ಹಾಗೂ ವೃತ್ತಿ ನೈಪುಣ್ಯತೆ ಕುರಿತು ಸೂಕ್ತ ಮಾರ್ಗದರ್ಶನ ನೀಡುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿಯೂ ಜಾರಿಗೆ ತರುವ ಚಿಂತನೆಯಿದೆ ಎಂದರು.

ನಮ್ಮ ತಂದೆ ಕೆ.ಬಿ. ಕೋಳಿವಾಡ ಅವರ ಬಹುದಿನಗಳ ಕನಸಿನಂತೆ ಶ್ರದ್ಧಾಂಜಲಿ ವಾಹನವನ್ನು ನಮ್ಮ ಪಿಕೆಕೆ (ಪಕ್ಷಾತೀತ ಕಾಯಕದ ಕನಸು) ಸಂಸ್ಥೆ ವತಿಯಿಂದ ಕೆ.ಬಿ. ಕೋಳಿವಾಡ ಚಾರಿಟೆಬಲ್ ಟ್ರಸ್ಟ್‌ಗೆ ನ. 1ರಂದು ಹಸ್ತಾಂತರಿಸಲಾಗುವುದು. ಇದಲ್ಲದೆ ಕೆ.ಬಿ. ಕೋಳಿವಾಡ ಅವರ ಜನ್ಮದಿನದ ಅಂಗವಾಗಿ ನ. 15ರಂದು ನಗರದಲ್ಲಿ ಸರ್ಕಾರದ ವತಿಯಿಂದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕಿಗೆ ಸರ್ಕಾರದಿಂದ (ತಲಾ ನಾಲ್ಕು ಕೋಟಿ ವೆಚ್ಚದ) ಕೆಪಿಎಸ್ ಶಾಲೆಗಳನ್ನು ಮಂಜೂರಿ ಮಾಡಿಸಿದ್ದು ಶೀಘ್ರದಲ್ಲಿಯೇ ಹಿರೇಬಿದರಿ, ಹರನಗಿರಿ, ಇಟಗಿ ಗ್ರಾಮಗಳಲ್ಲಿ ಕಾರ್ಯಾರಂಭಿಸಲಿವೆ. ರೈತರಿಗಾಗಿ ಪ್ರಾಯೋಗಿಕವಾಗಿ ತಾಲೂಕಿನ ಕಾಕೋಳ ಜಿಪಂ ವ್ಯಾಪ್ತಿಯ ಗುಡಗೂರ, ಗಂಗಾಪುರ, ಮೈದೂರ, ಹರನಗಿರಿ, ವೈಟಿ ಹೊನ್ನತ್ತಿ ಗ್ರಾಮಗಳಲ್ಲಿ (ಫಾರ್ಮರ್ಸ್‌ ಪ್ರೊಡ್ಯೂಸರ್ ಆರ್ಗನೈಜೆಷನ್) ರೈತ ಉತ್ಪಾದಕ ಸಂಸ್ಥೆ ಪ್ರಾರಂಭಿಸುವ ಚಿಂತನೆಯಿದೆ. ಇದು ರೈತರಿಂದ ರೈತರಿಗಾಗಿ ನಡೆಯುತ್ತದೆ. ಈ ಸಂಸ್ಥೆಯಿಂದ ಗುಣಮಟ್ಟದ ಬೀಜ, ಗೊಬ್ಬರಗಳನ್ನು ರಿಯಾಯತಿ ದರದಲ್ಲಿ ಸರ್ಕಾರದ ಮೂಲಕ ಫ್ಯಾಕ್ಟರಿಂದ ನೇರವಾಗಿ ರೈತರಿಗೆ ಪೂರೈಕೆ ಮಾಡಲಾಗುತ್ತದೆ. ಸಣ್ಣ ರೈತರಿಗೆ ಕೃಷಿ ಯಂತ್ರಗಳ ಖರೀದಿಗೆ ನೆರವು ನೀಡಲಾಗುತ್ತದೆ ಹಾಗೂ ರೈತರಿಗೆ ತಾಂತ್ರಿಕ ಮಾಹಿತಿಯನ್ನು ಒದಗಿಸಲಾಗುತ್ತದೆ. ನಗರದ ದೊಡ್ಡ ಕೆರೆಯನ್ನು ಒಂದೂವರೆ ವರ್ಷದ ಕಾಲಮಿತಿಯಲ್ಲಿ ₹18 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಇದನ್ನೊಂದು ಪ್ರವಾಸಿ ತಾಣವಾಗಿಸಲಾಗುವುದು ಎಂದರು.

ನಗರದಲ್ಲಿನ ಬಿಜೆಪಿ ಕಚೇರಿಯು 1935ರಲ್ಲಿ ಕಾಂಗ್ರೆಸ್ ಕಚೇರಿಯಾಗಿತ್ತು. ಕೆಪಿಸಿಸಿ ನಿರ್ದೇಶನದ ಮೇರೆಗೆ ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಹೆಸರಿನಲ್ಲಿದ್ದ ಆಸ್ತಿಗಳ ಕುರಿತು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಆದರೂ ನಾನು ಔಪಚಾರಿಕವಾಗಿ ನೋಟಿಸು ಕಳುಹಿಸಲು ಸೂಚಿಸಿರುವೆ. ಇದರ ಹೊರತು ಯಾವುದೇ ರೀತಿ ಆತುರದ ಕ್ರಮ ಜರುಗಿಸಲು ನನಗೆ ಇಚ್ಛೆಯಿಲ್ಲ. ನಗರದ ಬೇರೊಂದು ಸ್ಥಳದಲ್ಲಿ ಕಾಂಗ್ರೆಸ್ ಭವನ ನಿರ್ಮಿಸಲಾಗುವುದು. ಅ. 28ರಂದು ನಿಗದಿಯಾಗಿರುವ ನಗರಸಭೆ ಸಾಮಾನ್ಯ ಸಭೆಗೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಹಾಜರಾಗಿ ವಿವಿಧ ಅಭಿವೃದ್ಧಿ ಕಾರ್ಯಗಳ ಜಾರಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ