ಕಂಪ್ಲಿ: ಆರೋಗ್ಯ ರಕ್ಷಣೆ, ಧಾರ್ಮಿಕ ಪರಂಪರೆ, ಪರಿಸರ ಸಮತೋಲನ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಗೋವುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮಹಾರಾಷ್ಟ್ರದ ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ತಿಳಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ನೀಡಿರುವ ಸ್ಥಾನ ಕೇವಲ ಧಾರ್ಮಿಕ ನಂಬಿಕೆಗೆ ಸೀಮಿತವಲ್ಲ, ಅದು ಪ್ರಕೃತಿ ಸಂರಕ್ಷಣೆ ಮತ್ತು ಮಾನವ ಆರೋಗ್ಯದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಭೂಮಿ, ನೀರು ಹಾಗೂ ಸೂಕ್ಷ್ಮ ಜೀವಾಣುಗಳ ಸಮತೋಲನ ಕಾಪಾಡಲು ಪಂಚಮಾತೆಗಳಲ್ಲಿ ಒಂದಾಗಿ ಪರಿಗಣಿಸಲ್ಪಡುವ ಆಕಳ ಸಾಕಣೆ ಅತ್ಯಗತ್ಯವಾಗಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಗೋ ಆಧಾರಿತ ಜೀವನಶೈಲಿ ಪರಿಸರ ಸ್ನೇಹಿಯಾಗಿದ್ದು, ಭೂಮಿಯ ಫಲವತ್ತತೆ ಹೆಚ್ಚಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ ಎಂದು ತಿಳಿಸಿದರು.
ಅಗ್ನಿಹೋತ್ರ ಯಜ್ಞದ ವೈಜ್ಞಾನಿಕ ಮಹತ್ವವನ್ನು ಉಲ್ಲೇಖಿಸಿದ ಅವರು, ಭೋಪಾಲ್ ಅನಿಲ ದುರಂತದ ಸಂದರ್ಭದಲ್ಲೂ ಅಗ್ನಿಹೋತ್ರ ನಡೆಸುತ್ತಿದ್ದ ಮನೆಗಳು ಸುರಕ್ಷಿತವಾಗಿದ್ದವು ಎಂಬ ಉದಾಹರಣೆಯನ್ನು ನೀಡಿದರು. ಪಂಚಗವ್ಯ ಬಳಕೆ ಮಾನವ ಆರೋಗ್ಯಕ್ಕೆ ಬಹುಪಯೋಗಿಯಾಗಿದ್ದು, ಕ್ಯಾನ್ಸರ್ ಹಾಗೂ ಎಚ್‌ಐವಿ ಸೇರಿದಂತೆ ಗಂಭೀರ ಕಾಯಿಲೆಗಳನ್ನು ನಿಯಂತ್ರಿಸಲು ಸಹಕಾರಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಭೂಮಿಯ ಪೊಳ್ಳುತನವನ್ನು ತಡೆಗಟ್ಟಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ರಾಸಾಯನಿಕ ಗೊಬ್ಬರಗಳ ಬದಲು ಗೋಮಯ ಮತ್ತು ಗೋ ಆಧಾರಿತ ಜೈವಿಕ ಗೊಬ್ಬರಗಳ ಬಳಕೆ ಅನಿವಾರ್ಯವಾಗಿದೆ. ಕೃಷಿ ಮತ್ತು ಗೋಸಂರಕ್ಷಣೆ ಪರಸ್ಪರ ಅವಿಭಾಜ್ಯ ಸಂಬಂಧ ಹೊಂದಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಎಸ್.ವಿ. ಪಾಟೀಲ್ ಗುಂಡೂರು ರಚಿಸಿದ ‘ಸಾರ್ಥಕದ ಹೆಜ್ಜೆಗಳು’ ಕೃತಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಂ. ಚನ್ನಮಲ್ಲಯ್ಯಶಾಸ್ತ್ರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಎಮ್ಮಿಗನೂರು ವಾಮದೇವ ಶಿವಾಚಾರ್ಯರು, ವರರುದ್ರಮುನಿ ಶಿವಾಚಾರ್ಯರು, ಸಿದ್ಧಲಿಂಗ ಶಿವಾಚಾರ್ಯರು, ಬ್ರಹ್ಮಾನಂದ ಮಹಾಸ್ವಾಮೀಜಿ, ಕೇಶವಾನಂದ ಸ್ವಾಮೀಜಿ, ಕರುಣಾನಂದ ಸ್ವಾಮೀಜಿ, ಚಂದ್ರಯ್ಯಸ್ವಾಮಿ, ಶಾಸಕ ಜೆ.ಎನ್. ಗಣೇಶ, ಮಾಜಿ ಶಾಸಕ ಪರಣ್ಣ ಮನವಳ್ಳಿ, ಟಿ.ಎಂ. ಚಂದ್ರಶೇಖರಯ್ಯ, ಎಂ. ಸುಧೀರ್, ಗೊಗ್ಗ ಚನ್ನಬಸವರಾಜ, ಎನ್.ಎಂ. ಪತ್ರಯ್ಯಸ್ವಾಮಿ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.