ಹಿರೇಕೆರೂರು: ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಬಹುಮುಖ್ಯವಾಗಿದ್ದು, ಪ್ರತಿಯೊಬ್ಬರೂ ಶಿಕ್ಷಣವಂತರಾಗಿ, ಮಾದರಿ ವ್ಯಕ್ತಿತ್ವ ರೂಪಿಸಿಕೊಂಡು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ತಾಲೂಕಿನ ನೂಲಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 2021- 22ನೇ ಸಾಲಿನ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಯೋಜನೆ ಅಡಿಯಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ವಿದ್ಯಾರ್ಥಿಗಳ ಸುಗಮ ಕಲಿಕೆ ಪೂರಕವಾಗುವಂತೆ ನೂತನ ಯೋಜನೆಗಳು ಮತ್ತು ಅಗತ್ಯ ಮೂಲ ಸೌಕರ್ಯಗಳನ್ನು ನೀಡಿ ಉತ್ತಮ ಕಲಿಕಾ ವಾತಾವರಣ ರೂಪಿಸುವ ಕಾರ್ಯ ಮಾಡುತ್ತಿದೆ.
ವಿದ್ಯಾರ್ಥಿಗಳು ಸರ್ಕಾರದ ಎಲ್ಲ ಯೋಜನೆಗಳ ಪ್ರಯೋಜನ ಪಡೆದುಕೊಂಡು ಶಿಕ್ಷಣವಂತರಾಗಿ ಕಲಿತ ಶಾಲೆ, ಪಾಲಕರು ಮತ್ತು ಶಿಕ್ಷಕರಿಗೆ ಗೌರವ ತರುವಂತಹ ಸಾಧನೆ ಮಾಡಬೇಕು. ಪಠ್ಯದೊಂದಿಗೆ ಸಹಪಠ್ಯ ಚಟುವಟಕೆಗಳಲ್ಲಿ ಪಾಲ್ಗೊಂಡು ಸರ್ವತೋಮುಖ ಬೆಳವಣಿಗೆ ಹೊಂದಬೇಕು. ಶಿಕ್ಷಣದೊಂದಿಗೆ ಸಂಸ್ಕಾರ ಗುಣಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಮಾದರಿಯಾಗುವಂತಹ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಮಹಾದೇವಪ್ಪ ವೀರಾಪುರ, ಡಿಡಿಪಿಐ ಸುರೇಶ ಹುಗ್ಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ಎಸ್‌ಡಿಎಂಸಿ ಉಪಾಧ್ಯಕ್ಷ ಗಣೇಶ ತಾವರಗಿ, ಗ್ರಾಪಂ ಸದಸ್ಯರಾದ ಉಮಾ ಚಕ್ರಸಾಲಿ, ಮನೋಹರ ಕಮ್ಮಾರ, ವಿನಯ ದಳವಾಯಿ, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕ ಎಚ್.ಎಚ್. ಜಾಡರ, ಪ್ರಾಚಾರ್ಯ ಕೆ.ಸಿ. ಉಕ್ಕುಂದ, ಉಪ ಪ್ರಾಚಾರ್ಯ ಸಿ.ಎನ್. ಲಮಾಣಿ, ಮುಖ್ಯಶಿಕ್ಷಕ ಎಂ.ಡಿ. ಕುರುಬರ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ಶಾಲಾ ಸಿಬ್ಬಂದಿ, ಗ್ರಾಮಸ್ಥರು, ಪೋಷಕರು, ವಿದ್ಯಾರ್ಥಿಗಳು ಇದ್ದರು.ಬೆಳೆವಿಮೆ ದಾಖಲೆ ಸಲ್ಲಿಸಲು ಸೂಚನೆಹಾವೇರಿ: 2023-24ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆ ವಿಮೆ ಸಮೀಕ್ಷೆಯೊಂದಿಗೆ ಹೊಂದಾಣಿಕೆಯಾಗದೇ ವಿಮಾ ಸಂಸ್ಥೆಯವರಿಂದ ತಿರಸ್ಕೃತಗೊಂಡಿದ್ದ ಪ್ರಸ್ತಾವನೆಗಳನ್ನು ಮರು ಪರಿಶೀಲನೆಗಾಗಿ ತಾಲೂಕು ಮಟ್ಟದ ಸಮಿತಿ ಸಭೆಯಲ್ಲಿ ಸಿಂಧು ಎಂದು ಪರಿಗಣಿಸಲು ಅಗತ್ಯ ದಾಖಲೆಗಳನ್ನು ರೈತರು ಸಲ್ಲಿಸಬೇಕು ಎಂದು ಹಾವೇರಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.ವಿಮಾ ಸಂಸ್ಥೆಯಿಂದ ತಿರಸ್ಕೃತ ರೈತರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ. ತಿರಸ್ಕೃತ ರೈತರು 2023- 24ರ ತಮ್ಮ ಪಹಣಿಯಲ್ಲಿ ವಿಮೆಗೆ ನೋಂದಾಯಿಸಿದ ಬೆಳೆ ದಾಖಲಾಗಿದ್ದರೆ, ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ ರಶೀದಿ ಅಥವಾ ವಿಮೆ ನೋಂದಾಯಿತ ಬೆಳೆಯ ಉತ್ಪನ್ನವನ್ನು ಕೃಷಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಲ್ಲಿ ಅಂತಹ ದಾಖಲೆ ಹಾಗೂ ಬೆಳೆವಿಮೆಗೆ ನೋಂದಾಯಿಸಿದ ಬೆಳೆಗೆ ಸಂಬಂಧಿಸಿದಂತೆ ಇನ್ನಿತರ ದಾಖಲೆಗಳನ್ನು 15 ದಿನಗಳೊಳಗಾಗಿ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳ ಮುಖಾಂತರ ಸಮಿತಿಗೆ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.