ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಅರೇಹಳ್ಳಿಯ ಮಾಲಹಳ್ಳಿ ಚಂದ್ರು ಅವರ ತೋಟದಲ್ಲಿ ಕಾಡಾನೆಗಳು ೩ ದಿನ ದಾಳಿ ಮಾಡಿ ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ನಾಶ ಮಾಡಿದ್ದು ಮಾಜಿ ಸಚಿವ ಬಿ ಶಿವರಾಂ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಳೆದ ಮೂರು ದಿನದಿಂದಲೂ ರಾತ್ರಿ ವೇಳೆ ಮಾಲಹಳ್ಳಿ ಎಚ್ಎನ್ ಚಂದ್ರು ಅವರ ತೋಟದ ಮೇಲೆ 15ಕ್ಕೂ ಹೆಚ್ಚು ಕಾಡಾನೆಗಳು ನಿರಂತರವಾಗಿ ದಾಳಿ ಮಾಡುತ್ತಿದ್ದು ಫಸಲು ಬಿಡುತ್ತಿರುವ ಅಡಿಕೆ ಮರಗಳನ್ನು ಧರೆಗುರುಳಿಸಿವೆ. ಅದೇ ರೀತಿ ತೋಟದಲ್ಲಿ ಅಳವಡಿಸಿದ್ದ ಪೈಪ್‌ಗಳನ್ನು ನಾಶಪಡಿಸಿವೆ. ಹಾನಿ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಬಿತ್ತರವಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ ಶಿವರಾಂ ಅವರು ಚಂದ್ರು ಅವರ ತೋಟಕ್ಕೆ ಭೇಟಿ ನೀಡಿ ಬೆಳೆ ಹಾನಿ ಬಗ್ಗೆ ಪರಿಶೀಲನೆ ನಡೆಸಿ ಆನೆ ದಾಳಿಯಿಂದ ಆಗಿರುವ ಅಪಾರ ನಷ್ಟವನ್ನು ಕಂಡು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಇತ್ತೀಚೆಗೆ ಫಸಲು ಬಿಡುತ್ತಿರುವ ಅಡಿಕೆ ಮರಗಳು ಆನೆ ದಾಳಿಯಿಂದ ನೆಲಕಚ್ಚಿದ್ದು ಅಪಾರ ಹಾನಿ ಸಂಭವಿಸಿದೆ. ಆನೆ ಮತ್ತು ಮಾನವ ಸಂಘರ್ಷ ಮಲೆನಾಡು ಭಾಗದಲ್ಲಿ ನಿರಂತರವಾಗಿ ಮುಂದುವರಿಯುತ್ತಿದೆ. ಈ ಬಗ್ಗೆ ಶಾಶ್ವತ ಪರಿಹಾರ ನಿರ್ಣಯವನ್ನು ಸರ್ಕಾರ ಕೈಗೊಳ್ಳಬೇಕಿದೆ. ಸೋಮವಾರ ಮಧ್ಯಾಹ್ನ ಅರಣ್ಯ ಸಚಿವ ಈಶ್ವರ ಖಂಡ್ರೆ ಕಾಡಾನೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ಬೆಳೆ ಹಾನಿಗೊಳಗಾಗಿರುವ ಕಾಫಿ ಬೆಳೆಗಾರರು, ರೈತರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರಾಜ್ಯ ಕಿಸಾನ್ ಘಟಕದ ಸಂಚಾಲಕ ತುಳಸಿ ದಾಸ್, ಮುಖಂಡರಾದ ಸಿರಾಜ್ ಅಹಮದ್, ಅಜ್ಮಲ್ ಅಹಿಂ, ರಹಿಸುರ್ ರೆಹಮಾನ್, ಇತರರು ಇದ್ದರು.