ಕೊಪ್ಪಳ: ಜನಗಣತಿ ಕಾರ್ಯಕ್ಕೆ ಗಣತಿದಾರರು ಹಾಗೂ ಮೇಲ್ವಿಚಾರಕರ ಪಾತ್ರ ಮುಖ್ಯವಾಗಿದ್ದು, ಅವರಿಗೆ ಫೀಲ್ಡ್ ಟ್ರೇನರಗಳು ಸಮರ್ಥವಾದ ತರಬೇತಿ ನೀಡಿ ಕೆಲಸ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ ಹೇಳಿದರು.
ದೇಶದ ಅಭಿವೃದ್ಧಿ ಯೋಜನೆಗಳ ರೂಪಿಸುವಿಕೆಯಲ್ಲಿ ಜನಗಣತಿ ಅಂಕಿ-ಅಂಶಗಳು ಅಡಿಪಾಯವಾಗಿದ್ದು, ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳು ರಾಷ್ಟ್ರ ನಿರ್ಮಾಣದ ಅಳಿಲು ಸೇವೆಯಲ್ಲಿ ಭಾಗಿಗಳಾಗುತ್ತಿದ್ದೇವೆ ಎಂಬ ಭಾವನೆಯೊಂದಿಗೆ ಪ್ರಾಮಾಣಿಕ ಹಾಗೂ ಸಮರ್ಪಕವಾಗಿ ಕೆಲಸ ಮಾಡಬೇಕು. ಈ ಬಾರಿಯ ಜನಗಣತಿಯು ಹಳೆಯ ಮ್ಯಾನುಯಲ್ ಪದ್ಧತಿ ಕೈಬಿಟ್ಟು,ಸಂಪೂರ್ಣವಾಗಿ ಮೊಬೈಲ್ ಆ್ಯಪ್ ಮೂಲಕ ನಡೆಯಲಿದ್ದು, ಇದು ನಿಖರತೆ ಮತ್ತು ಪಾರದರ್ಶಕತೆ ಹೆಚ್ಚಿಸಲಿದೆ. ಪ್ರತಿ ವಾರ್ಡ್ ಅಥವಾ ಗ್ರಾಮ ಮಟ್ಟದಲ್ಲಿ 150 ರಿಂದ 200 ಕುಟುಂಬಗಳನ್ನು ಒಳಗೊಂಡ ಬ್ಲಾಕ್ ಗುರುತಿಸಿ ನಿಖರ ಬ್ಲಾಕ್ ನಕ್ಷೆ ಮತ್ತು ಪಟ್ಟಿ ಸಿದ್ಧಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನಗಣತಿ ಕಾರ್ಯವು ಯಶಸ್ವಿಯಾಗಲು ಬ್ಲಾಕ್‍ಗಳ ರಚನೆ ಅತ್ಯಂತ ಪ್ರಮುಖವಾಗಿದೆ.ಬ್ಲಾಕ್ ರಚನೆಯಲ್ಲಿ ಸಣ್ಣ ತಪ್ಪುಗಳಾದರೂ ಇಡೀ ಪ್ರಕ್ರಿಯೆ ಹಳಿ ತಪ್ಪುತ್ತದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರತಿ ಬ್ಲಾಕ್‍ಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುವ ವಾರ್ಡ್ ಬಿಲ್ ಕಲೆಕ್ಟರ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಬೇಕು.ಗಣತಿದಾರರನ್ನು ನೇಮಿಸುವಾಗ ಅವರು ವಾಸಿಸುವ ಅಥವಾ ಕೆಲಸ ಮಾಡುವ ಬ್ಲಾಕ್‍ಗಳಲ್ಲೇ ನಿಯೋಜಿಸಬೇಕು. ಒಂದು ವೇಳೆ ಅನಿವಾರ್ಯ ಸಂದರ್ಭಗಳಲ್ಲಿ ಸ್ಥಳೀಯರು ಲಭ್ಯವಿಲ್ಲದಿದ್ದರೆ, 200 ಮೀಟರ್ ವ್ಯಾಪ್ತಿಯಲ್ಲಿರುವ ಸರ್ಕಾರಿ ನೌಕರರನ್ನು ಮಾತ್ರ ಬಳಸಿಕೊಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜನಗಣತಿ ಕೇಂದ್ರ ಕಚೇರಿ ಬೆಂಗಳೂರಿನ ಮಾಸ್ಟರ್ ಟ್ರೈನರ್ ಫಣಿ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.