ಸಮಾಜ ಸುಧಾರಣೆಯಲ್ಲಿ ವಕೀಲರ ಪಾತ್ರ ಬಹುಮುಖ್ಯ: ನ್ಯಾಯಾಧೀಶೆ ಅಕ್ಷತಾ

KannadaprabhaNewsNetwork |  
Published : Dec 05, 2025, 02:15 AM IST
ಹೂವಿನಹಡಗಲಿ ತಾಲೂಕ ವಕೀಲರ ಸಂಘ ಆಯೋಜಿಸಿದ್ದ ವಕೀಲರ ದಿನಾಚರಣೆಗೆ ಚಾಲನೆ ನೀಡಿದ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶೆ ಅಕ್ಷತಾ ಟಿ. ಮಾತನಾಡಿದರು. | Kannada Prabha

ಸಾರಾಂಶ

ದೇಶದ ಮೊದಲ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್‌ ವಕೀಲರಾಗಿರುವ ಜತೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ.

ಹೂವಿನಹಡಗಲಿ: ಸಮಾಜ ಸುಧಾರಣೆಯಲ್ಲಿ ವಕೀಲರ ಪಾತ್ರ ಬಹುಮುಖ್ಯ. ಇದೊಂದು ಸೇವೆ ಎಂದು ಭಾವಿಸಿ, ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕೆಂದು ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶೆ ಅಕ್ಷತಾ ಟಿ. ಹೇಳಿದರು.

ಇಲ್ಲಿನ ತಾಲೂಕು ವಕೀಲರ ಸಂಘದಿಂದ ಆಯೋಜಿಸಿದ್ದ ತಾಲೂಕು ವಕೀಲರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಮೊದಲ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್‌ ವಕೀಲರಾಗಿರುವ ಜತೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಇವರ ಜನ್ಮ ದಿನವನ್ನು ವಕೀಲರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ, ಅವರ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ದೇಶದ ಸಂವಿಧಾನದ ನಾಲ್ಕು ಅಂಗಗಳಲ್ಲಿ ನ್ಯಾಯಾಂಗವೂ ಒಂದು. ಇದರ ಅರ್ಧ ಭಾಗವಾಗಿ ವಕೀಲರು ಕೆಲಸ ಮಾಡುತ್ತಿದ್ದಾರೆ. ವಕೀಲರು ಕಕ್ಷಿದಾರರ ಅಳಲು ಆಲಿಸಿ, ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ. ಡಿ.13ರಂದು ಲೋಕ್‌ ಅದಾಲತ್‌ ನಡೆಯಲಿದೆ. ಎಲ್ಲ ವಕೀಲರು ತಮ್ಮ ಕಕ್ಷಿದಾರರಿಗೆ ಅರಿವು ಮೂಡಿಸಿ ಆದಷ್ಟು ರಾಜಿ ಸಂಧಾನ ಮಾಡುವಂತಹ ವ್ಯವಸ್ಥೆಗೆ ಎಲ್ಲರೂ ಸಹಕರಿಸಬೇಕೆಂದು ಹೇಳಿದರು.

ಆರ್ಥಿಕವಾಗಿ ಶಕ್ತಿ ಇಲ್ಲದಂತಹ ಕಕ್ಷಿದಾರರಿಗೆ ಉಚಿತ ನ್ಯಾಯದಾನ ವ್ಯವಸ್ಥೆ ಇದೆ. ಇತ್ತೀಚೆಗೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆದಷ್ಟು ಕೇಸ್‌ಗಳನ್ನು ಕಡಿಮೆ ಮಾಡುವಂತಹ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.

ಹಿರಿಯ ವಕೀಲರಾದ ಸಿ.ಕೆ.ಎಂ. ಬಸವಲಿಂಗ ಸ್ವಾಮಿ ಮಾತನಾಡಿ, ವಕೀಲರು ಹೆಚ್ಚು ಜನ ಸಂಪರ್ಕ ಹೊಂದುವುದು ಅಗತ್ಯವಿದೆ. ಈಗ ನಿತ್ಯ ಒಂದಲ್ಲ ಒಂದು ರೀತಿಯ ಕಾನೂನುಗಳು ಜಾರಿಯಾಗುತ್ತಿವೆ. ವಕೀಲರಿಗೆ ನಿರಂತರ ಅಧ್ಯಯನದ ಅಗತ್ಯವಿದೆ ಎಂದರು.

ವಕೀಲರಿಗೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಸೌಲಭ್ಯಗಳನ್ನು ನೀಡಬೇಕು. ಕಿರಿಯ ವಕೀಲರು ಕೋರ್ಟ್‌ ಕಲಾಪದಲ್ಲಿ ಹೆಚ್ಚು ಭಾಗವಹಿಸಿ ಹಿರಿಯರಿಗೆ ಹಾಗೂ ನ್ಯಾಯಪೀಠಕ್ಕೆ ಗೌರವ ನೀಡಬೇಕು. ಕೋರ್ಟ್‌ನಲ್ಲಿ ಏರು ಧ್ವನಿಯಲ್ಲಿ ಮಾತನಾಡಬಾರದು ಎಂದರು.

ಸರ್ಕಾರಿ ಅಭಿಯೋಜಕ ಕೆ.ಅಜ್ಜಯ್ಯ ಮಾತನಾಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಂಜುನಾಥ ಜೈನ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಕೀಲರ ಸಂಘದ ಉಪಾಧ್ಯಕ್ಷ ಎಸ್‌.ಶಿವಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ವಿ.ಪಾಟೀಲ್‌, ಸಹ ಕಾರ್ಯದರ್ಶಿ ಎಸ್‌.ಬಿ. ಪತ್ರೇಶ, ಖಜಾಂಚಿ ಎಚ್‌.ಸುಜಾತ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ 25 ವರ್ಷ ವಕೀಲರ ವೃತ್ತಿ ಪೂರೈಸಿದ ಎಲ್‌.ಚಂದ್ರನಾಯ್ಕ, ಡಿ.ಸಿದ್ದನಗೌಡ, ಪಿ.ಎಂ. ಶಿವಕುಮಾರ ಅವರನ್ನು ಸನ್ಮಾನಿಸಲಾಯಿತು.

ಹನುಮಂತಪ್ಪ ಗದುಗಿನ ನಿರೂಪಿಸಿದರು. ಪ್ರಶಾಂತ ವಿ. ಪಾಟೀಲ್‌ ಸ್ವಾಗತಿಸಿದರು. ಪ್ರಕಾಶ ಜೈನ್‌ ಸಂಗಡಿಗರು ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಿ.ಎಂ. ಶಹೀದ್ ಗೆ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪುರಸ್ಕಾರ
ಸರ್ಕಾರಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಕೊಡುಗೆ