ಮೈಕ್ರೋಬಯಾಲಜಿಸ್ಟ್ ಗಳ ಪಾತ್ರ ನಿರ್ಣಾಯಕ

KannadaprabhaNewsNetwork | Published : Mar 14, 2025 12:31 AM

ಸಾರಾಂಶ

ರೋಗಿಗಳ ಆರೈಕೆ ನಿರ್ವಹಣೆಯಲ್ಲಿ ಮೈಕ್ರೋಬಯಾಲಜಿಸ್ಟ್‌ಗಳ ಪಾತ್ರ ನಿರ್ಣಾಯಕ ಎಂದು ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ಪ್ರೊ.ಡಾ.ಚಂದ್ರಶೇಖರ್‌ ಪ್ರತಿಪಾದಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುರೋಗಿಗಳ ಆರೈಕೆ ನಿರ್ವಹಣೆಯಲ್ಲಿ ಮೈಕ್ರೋಬಯಾಲಜಿಸ್ಟ್‌ಗಳ ಪಾತ್ರ ನಿರ್ಣಾಯಕ ಎಂದು ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ಪ್ರೊ.ಡಾ.ಚಂದ್ರಶೇಖರ್‌ ಪ್ರತಿಪಾದಿಸಿದ್ದಾರೆ. ಗುರುವಾರ ನಗರದ ಶಿರಾರಸ್ತೆಯ ಶ್ರೀದೇವಿ ನರ್ಸಿಂಗ್ ಕಾಲೇಜು ಹಾಗೂ ಶ್ರೀ ರಮಣಮಹರ್ಷಿ ನರ್ಸಿಂಗ್ ಕಾಲೇಜು, ಶ್ರೀದುಗಾಂಬಾ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಸಹಯೋಗದೊಂದಿಗೆ ಶ್ರೀದೇವಿ ಆಸ್ಪತ್ರೆ ಮೈಕ್ರೋಬಯಾಲಜಿ ವಿಭಾಗದೊಂದಿಗೆ ಸೋಂಕು ತಡೆಗಟ್ಟುವಲ್ಲಿ ಸೂಕ್ಷ್ಮಾಣು ಜೀವಿಗಳ ಪಾತ್ರ ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.ಸೋಂಕು ಬಾರದಂತೆ ಎಲ್ಲಾ ರೀತಿಯ ಆರೋಗ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹಾಗೂ ಸೋಂಕು ತಗುಲಿದ ನಂತರ ಅದನ್ನು ಬೇಗ ಹತೋಟಿಗೆ ತರುವುದರ ಕಡೆ ಸೂಕ್ಷ್ಮಾಣು ಜೀವಿ ತಜ್ಞರು ಗಮನ ಹರಿಸಬೇಕು. ಹೀಗಾದಾಗ ರೋಗಿ ಬೇಗ ಚೇತರಿಸಿಕೊಳ್ಳುತ್ತಾನೆ ಮತ್ತು ಬೇರೆಯವರಿಗೆ ಯಾವುದೇ ಸೋಂಕು ಹರಡುವುದಿಲ್ಲ ಎಂದು ಹೇಳಿದರು. ಸೂಕ್ಷ್ಮಾಣು ಜೀವಿಗಳು ಇಲ್ಲದೆ, ಇರುವ ಜಾಗ ಇಲ್ಲವೇ ಇಲ್ಲ. ಗಾಳಿ, ನೀರು ಮತ್ತು ಮನುಷ್ಯರಲ್ಲೂ ಸೂಕ್ಷ್ಮಾಣು ಜೀವಿಗಳಿವೆ. ಮನುಷ್ಯ ಹುಟ್ಟುವುದಕ್ಕೂ ಮೊದಲು ಸೂಕ್ಷ್ಮಾಣು ಜೀವಿಗಳು ಇದ್ದವು. 180 ಡಿಗ್ರಿಯಿಂದ ಹಿಡಿದು 250 ಡಿಗ್ರಿ ತಾಪಮಾನದವರೆಗೂ ಸೂಕ್ಷ್ಮಾಣು ಜೀವಿಗಳು ಬಾಳಿ ಬದುಕುತ್ತವೆ. ರೋಗಿಯ ಚಿಕಿತ್ಸೆಯಲ್ಲಿ ಸೂಕ್ಷ್ಮಾಣು ಜೀವಿಗಳ ನಿರ್ವಹಣೆ ಬಹಳ ಮುಖ್ಯವಾಗಿದೆ ಎಂದರು. ಸೂಕ್ಷ್ಮಾಣು ಜೀವಿಗಳಲ್ಲಿ ಎರಡು ವಿಧಗಳಿವೆ ಒಂದು ಮನುಷ್ಯನಿಗೆ ಪ್ರಯೋಜನಕಾರಿಯಾಗಿದ್ದರೆ ಮತ್ತೊಂದು ಅಪಾಯಕಾರಿ ಹೀಗಾಗಿ ರೋಗಿಯ ಉಪಚಾರ ಮತ್ತು ನಿರ್ವಹಣೆಯಲ್ಲಿ ವೈಯಕ್ತಿಕ ಸ್ವಚ್ಛತೆಗೆ ಒತ್ತು ಕೊಡಬೇಕು ಎಂದು ಹೇಳಿದರು.ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್‌ರವರು ಮಾತನಾಡಿ ನೋವು ಹಾಗೂ ಯಾತನೆಯಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ಎಷ್ಟು ಮುಖ್ಯವೋ ಅದಕ್ಕಿಂತ ಮುಖ್ಯವಾಗಿ ಯಾವುದೇ ಸೋಂಕು ತಗುಲದಂತೆ ನಿರ್ವಹಣೆ ಮಾಡುವ ದೊಡ್ಡ ಜವಾಬ್ದಾರಿ ಮೈಕ್ರೋಬಯಾಲಜಿಸ್ಟ್‌ಗಳ ಮೇಲಿದೆ ಎಂದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ನಾಯಕ್ ಶಾಲಿನಿ ಅಶೋಕ್ ಹಾಗೂ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಪರಿಮಳ, ಮೈಕ್ರೋಬಯಾಲಜಿ ವಿಭಾಗದ ಪ್ರೊ.ಡಾ.ರೂಪಶ್ರೀ, ಶ್ರೀದೇವಿ ಸಂಸ್ಥೆಯ ಆಡಳಿತಾಧಿಕಾರಿ ಟಿ.ವಿ.ಬ್ರಹ್ಮದೇವಯ್ಯ, ಶ್ರೀದೇವಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಆರ್.ಕೆ.ಮುನಿಸ್ವಾಮಿ, ಶ್ರೀರಮಣ ಮಹರ್ಷಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್.ಉಷಾ, ಶ್ರೀದುಗಾಂಬಾ ಸ್ಕೂಲ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲರಾದ ಡಾ.ಅಂಬಾ, ಶ್ರೀದೇವಿ ನರ್ಸಿಂಗ್ ಕಾಲೇಜಿನ ಪ್ರೊ.ಚಿಕ್ಕಹನುಮಂತಯ್ಯ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

Share this article