ಭ್ರಷ್ಟಾಚಾರ ನಿಗ್ರಹ ಜಾಗೃತಿ ಅರಿವು ಸಪ್ತಾಹ -2024ರ ಕಾರ್ಯಕ್ರಮ ಉದ್ಘಾಟಿಸಿದ ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ವಿದ್ಯಾರ್ಥಿಗಳು ಭ್ರಷ್ಟಚಾರದ ಕುರಿತು ಲೋಕಾಯುಕ್ತಕ್ಕೆ ಮಾಹಿತಿ ನೀಡುವುದರ ಮೂಲಕ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಬೇಕು ಎಂದು ಕೊಪ್ಪಳ ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಚಂದ್ರಪ್ಪ ಇ.ಟಿ. ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಲೋಕಾಯುಕ್ತ ಕಚೇರಿಯಿಂದ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ನಿಗ್ರಹ ಜಾಗೃತಿ ಅರಿವು ಸಪ್ತಾಹ -2024ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1984ರಲ್ಲಿ ಕರ್ನಾಟಕ ಲೋಕಾಯುಕ್ತ ಪ್ರಾರಂಭ ಆಗಿದ್ದು, ಇದರ ಮುಖ್ಯ ಕೆಲಸ ಭ್ರಷ್ಟಾಚಾರ ತಡೆಗಟ್ಟುವುದು. ಎಲ್ಲರೂ ಸೇರಿ ಭ್ರಷ್ಟಾಚಾರ ತಡೆಗಟ್ಟಬೇಕು. ಯಾರಾದರೂ ಸರ್ಕಾರಿ ನೌಕರರು ಕೆಲಸ ನಿರ್ವಹಿಸಲು ಲಂಚದ ಬೇಡಿಕೆ ಇಟ್ಟರೆ ನಮಗೆ ಮಾಹಿತಿ ನೀಡಿ ಎಂದು ತಿಳಿಸಿದರು.ಕೊಪ್ಪಳ ಕರ್ನಾಟಕ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಶೈಲಜಾ ಪ್ಯಾಟಿ ಶೆಟ್ಟರ್ ಮಾತನಾಡಿ, ಎಲ್ಲ ಸರ್ಕಾರಿ ನೌಕರರು ಸಾರ್ವಜನಿಕರ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು. ಸಾರ್ವಜನಿಕರ ಹತ್ತಿರ, ರೈತರ ಹತ್ತಿರ ಲಂಚ ತೆಗೆದುಕೊಳ್ಳಬಾರದು. ಇದರಿಂದ ದೇಶದ ಅಭಿವೃದ್ಧಿಗೆ ತೊಡಕು ಉಂಟಾಗುತ್ತದೆ. ಎಲ್ಲ ಸಾರ್ವಜನಿಕರ ಸಹಕಾರದಿಂದ ಭ್ರಷ್ಟಾಚಾರವನ್ನು ತಡೆಗಟ್ಟಬಹುದು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಮಾತನಾಡಿ, ನಾವು ಭ್ರಷ್ಟಾಚಾರದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಇದು ಪ್ರಾಚಿನ ಕಾಲದಿಂದಲೂ ಇದೆ. ವಿದ್ಯಾರ್ಥಿಗಳು ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಅವುಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು.ಲೋಕಾಯುಕ್ತ ಅಧಿಕಾರಿಗಳು ವಿದ್ಯಾರ್ಥಿಗಳ ಜೊತೆ ಭ್ರಷ್ಟಾಚಾರದ ಕುರಿತು ಸಂವಾದ ನಡೆಸಿದರು. ವಿದ್ಯಾರ್ಥಿಗಳಿಗೆ ಭ್ರಷ್ಟಚಾರ ನಿರ್ಮೂಲನೆ ಕುರಿತು ಪ್ರತಿಜ್ಞಾ ವಿಧಿ ಭೋದಿಸಲಾಯಿತು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹುಲಿಗೆಮ್ಮ ಬಿ, ಉಪನ್ಯಾಸಕರಾದ ಡಾ. ಪ್ರದೀಪ್ ಕುಮಾರ್, ಡಾ. ನರಸಿಂಹ, ಅತಿಥಿ ಉಪನ್ಯಾಸಕರಾದ ಶಿವ ಪ್ರಸಾದ್ ಹಾದಿಮನಿ, ಡಾ. ಮಂಜಪ್ಪ, ಡಾ. ಸೂರಪ್ಪ ಹಾಗೂ ವಿದ್ಯಾರ್ಥಿನಿಯರು ಇದ್ದರು. ಕಾರ್ಯಕ್ರಮವನ್ನು ಭವ್ಯ ನಿರೂಪಿಸಿದರು. ಡಾ. ಹುಲಿಗೆಮ್ಮ ಸ್ವಾಗತಿಸಿ, ನರಸಿಂಹ ವಂದಿಸಿದರು.