ಹಿರಿಯೂರು: ಆದಿ ಮಾನವನ ಕಾಲದಿಂದಲೂ ಇಂದಿನವರೆಗೆ ಸಮಾಜಕ್ಕೆ ಮಹಿಳೆಯರ ಕೊಡುಗೆಗಳು ಅಪಾರ ಎಂದು ಸಮಾಜಸೇವಕಿ ಶಶಿಕಲಾ ರವಿಶಂಕರ್ ಅಭಿಪ್ರಾಯಪಟ್ಟರು.
ನಗರದ ರೋಟರಿ ಸಭಾಂಗಣದಲ್ಲಿ ಏಕನಾಥೇಶ್ವರಿ ಸಂಗೀತ ವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಮತ್ತು ಮನುಕುಲಕ್ಕೆ ಮಹಿಳೆಯರ ಕೊಡುಗೆ ವಿಚಾರ ಸಂಕೀರಣದಲ್ಲಿ ಭಾಗವಹಿಸಿ ಮಾತನಾಡಿದರು.ಮಹಿಳೆಯರನ್ನು ಹೊರತುಪಡಿಸಿ ಈ ಜಗತ್ತನ್ನು ಗುರುತಿಸಲಾಗದು. ಪುರುಷ ಪ್ರಧಾನ ಸಮಾಜದ ಕಾಲದಿಂದಲೂ ಮಹಿಳೆಯರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತಾ ಸಾಮರ್ಥ್ಯ ಸಾಬೀತು ಮಾಡಿಕೊಳ್ಳುತ್ತಾ ಬಂದಿದ್ದಾರೆ. ಅನಾದಿ ಕಾಲದಿಂದಲೂ ಆಯಾಯ ಕಾಲಮಾನಕ್ಕೆ ತಕ್ಕಂತೆ ಮಹಿಳೆ ಜಗತ್ತಿಗೆ ಅನಿವಾರ್ಯವಾಗಿ, ಬೆಂಬಲವಾಗಿ ತನ್ನ ಸಾಧನೆ ತೋರುತ್ತಾ ಬಂದಿದ್ದಾಳೆ. ಇಂತದ್ದೇ ಕ್ಷೇತ್ರವಂತಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪುರುಷ ಸಮಾನವಾಗಿ ನಿಲ್ಲುವ ಕಾಲ ಬಂದಿದೆ. ಬಾಹ್ಯಾಕಾಶ, ವೈದ್ಯಕೀಯ, ಶಿಕ್ಷಣ, ಕ್ರೀಡೆ, ಹೀಗೆ ಪ್ರತಿ ಕ್ಷೇತ್ರಗಳಲ್ಲೂ ಮಹಿಳೆಯರು ಶಕ್ತಿ ಪ್ರದರ್ಶನ ಮಾಡಿಯಾಗಿದೆ. ಇದಲ್ಲದೆ ಕುಟುಂಬ ನಿರ್ವಹಣೆ, ಮಕ್ಕಳ ಭವಿಷ್ಯ ಕಟ್ಟುವಿಕೆಯಂತಹ ವಿಷಯಗಳಲ್ಲಿ ತಾಯಿ ಮಮತೆಯನ್ನು ಹಾಗೇ ಉಳಿಸಿಕೊಂಡು ಬಂದಿದ್ದಾಳೆ. ಮಹಿಳೆಯರ ಕೊಡುಗೆ ಮನುಕುಲಕ್ಕೆ ಗಮನಾರ್ಹವಾಗಿದ್ದು, ಇನ್ನಷ್ಟು ಗಣನೀಯ ಪ್ರಮಾಣದಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆಯಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಮೋಹಿನಿ ಶ್ರೀನಿವಾಸ್ ಮಾತನಾಡಿ, ಮಹಿಳೆಯರು ಪ್ರಬಲವಾಗುವುದರ ಜೊತೆಗೆ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಕೇವಲ ಕುಟುಂಬಕ್ಕೆ ಸೀಮಿತ ಎಂಬ ಕಾಲ ಸರಿದು ಹೋಗಿ ಇಡೀ ದೇಶವನ್ನು ನಡೆಸುವ ಮಟ್ಟಕ್ಕೆ ಮಹಿಳೆಯರು ಬೆಳೆದು ನಿಂತಿರುವುದು ಸಂತೋಷ ಪಡುವ ಸಂಗತಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಸಂಗೀತ ವಿದ್ವಾನ್ ಆರ್.ತಿಪ್ಪೇಸ್ವಾಮಿ.ಎಂ, ಕಿರಣ್ ಮಿರಜ್‌ಕರ್, ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷ ನಿಜಲಿಂಗಪ್ಪ, ರೋಟರಿ ಅಧ್ಯಕ್ಷ ದೇವರಾಜ್ ಮೂರ್ತಿ, ಮಂಜಮ್ಮ, ಶಂಕರಲಿಂಗಯ್ಯ, ಜಗದಾoಬ, ವಿನುತಾ, ದಿವ್ಯಶ್ರೀ ಮುಂತಾದವರು ಹಾಜರಿದ್ದರು.
ಮಹಿಳಾ ಸಾಧಕರಾದ ಡಾ.ಚಂಪಾ, ಮೋಹಿನಿ ಶ್ರೀನಿವಾಸ್, ಲಕ್ಷ್ಮೀ ರಾಜೇಶ್, ಸೌಮ್ಯ ಪ್ರಶಾಂತ್, ಗೀತಾ ರಾಧಾಕೃಷ್ಣ, ತಿಪ್ಪಮ್ಮ, ನಿರ್ಮಲ, ಗಂಗಕ್ಕ, ಭಾರತಿ ಸುಲೋಚನಮ್ಮ, ನಾಗಸುಂದರಮ್ಮ, ನೈನಾ ಲತಾ, ಡಾ.ಅಮೃತಲಕ್ಷ್ಮಿ, ತ್ರಿವೇಣಿ, ಕೃಷ್ಣಕುಮಾರಿ, ಶಾರದಾ, ಶೈಲಾ, ಸುಗುಣ, ಮುದ್ದಮ್ಮ, ಶಶಿಪ್ರಕಾಶ್, ಹೇಮಾವತಿಯವರನ್ನು ಸನ್ಮಾನಿಸಲಾಯಿತು.