ಆಹಾರ ಉತ್ಪಾದನೆಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ: ರುದ್ರಪ್ಪ ಲಮಾಣಿ

KannadaprabhaNewsNetwork | Updated : Jun 30 2024, 11:56 AM IST

ಸಾರಾಂಶ

ಆಹಾರ ಉತ್ಪಾದನೆಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದು ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ರಾಣಿಬೆನ್ನೂರು: ಆಹಾರ ಉತ್ಪಾದನೆಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದು ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು. ನಗರದ ಎಪಿಎಂಸಿ ರೈತ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಆಹಾರ ಸಂಸ್ಕರಣದಾರರ ಮಹಿಳಾ ಸಹಕಾರ ಸಂಘಗಳ ಸದಸ್ಯರುಗಳಿಗೆ ನೋಂದಣಿ ಪ್ರಮಾಣ ಪತ್ರಗಳ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಸ್ತ್ರೀಶಕ್ತಿ ಹೆಸರಿನಲ್ಲಿ ಸ್ವಸಹಾಯ ಸಂಘಗಳನ್ನು ಪ್ರಾರಂಭಿಸಲಾಯಿತು. ಇದರಿಂದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಯಿತು. ಇದೀಗ ಹಾವೇರಿ ಜಿಲ್ಲೆಯಿಂದ ಆಹಾರ ಸಂಸ್ಕರಣದಾರರ ಮಹಿಳಾ ಸಹಕಾರ ಸಂಘಗಳನ್ನು ಸ್ಥಾಪಿಸಿ ಅವುಗಳ ಮೂಲಕ ಆಹಾರೋತ್ಪನ್ನಗಳ ತಯಾರಿಕೆ ಮತ್ತು ಮಾರಾಟಕ್ಕೆ ಚಾಲನೆ ನೀಡುತ್ತಿರುವುದು ಒಂದು ಉತ್ತಮ ಕೆಲಸವಾಗಿದೆ.

 ಇವುಗಳ ಸಬಲೀಕರಣಕ್ಕಾಗಿ ಸಿಎಂ ಬಳಿಗೆ ಜಿಲ್ಲೆಯ ಶಾಸಕರ ನಿಯೋಗ ತೆಗೆದುಕೊಂಡು ಹೋಗಿ ಅವಶ್ಯಕತೆಯಿರುವ ಸೌಲಭ್ಯಗಳನ್ನು ಕಲ್ಪಿಸಲು ಬದ್ಧನಾಗಿರುವೆ. ನಮ್ಮನ್ನು ನಾವು ಗುರುತಿಸಿಕೊಂಡಾಗ ಸಮಾಜದಲ್ಲಿ ನಮಗೆ ಗೌರವ ಬರುತ್ತದೆ. ಇದರಲ್ಲಿ ಯಶಸ್ಸು ಕಂಡು ರಾಜ್ಯದಲ್ಲಿ ಮಾದರಿಯಾಗಬೇಕಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂದು ಸರ್ಕಾರ ಚಿಂತನೆ ನಡೆಸಿದೆ. ಈ ಹಿಂದೆ ತಂದೆ ತಾಯಿಗಳು ತಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವಾಗ ಎತ್ತು, ಹಸು, ಕೋಳಿ ನೀಡುವ ಮೂಲಕ ಆರ್ಥಿಕವಾಗಿ ಸಬಲರಾಬೇಕು, ಸ್ವಾವಲಂಬನೆ ಬದುಕು ನಡೆಸಲಿ ಎಂಬ ಚಿಂತನೆ ಹೊಂದಿದ್ದರು. 

ಅದೇ ಮಾದರಿಯಲ್ಲಿ ರುಕ್ಮಿಣಿ ಸಾವಕಾರ ಆಹಾರ ಸಂಸ್ಕರಣದಾರರ ಮಹಿಳಾ ಸಹಕಾರ ಸಂಘಗಳನ್ನು ಸ್ಥಾಪಿಸಿದ್ದಾರೆ. ಅವರ ಕಾರ್ಯ ನಿಜಕ್ಕೂ ಶಾಘ್ಲನೀಯವಾಗಿದೆ. ಈ ಯೋಜನೆಯನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು. ಮಹಿಳೆಯರಿಗೆ ಶಿಕ್ಷಣವೆ ಆಸ್ತಿಯಾಗಿದ್ದು ಪ್ರತಿಯೊಬ್ಬರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಗಟ್ಟಿತನ ಕೊಡಬೇಕು. ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿಸಮನಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಇಂದಿಗೂ ಕೂಡ ಮಹಿಳೆಯರು,ಹೆಣ್ಣುಮಕ್ಕಳಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಆದ್ದರಿಂದ ಪಾಲಕರು ಚಿಕ್ಕ ವಯಸ್ಸಿನಿಂದಲೇ ಗಂಡು ಮಕ್ಕಳಿಗೆ ಸಂಸ್ಕಾರ ನೀಡಬೇಕು. ಮಹಿಳೆಯರ ವಿರುದ್ದ ಅನ್ಯಾಯವಾದಾಗ ಸ್ತ್ರೀ ಸಂಘಟನೆಗಳು ಹೋರಾಟ ಮಾಡುವುದು ಅವಶ್ಯವಾಗಿದೆ ಎಂದರು.

 ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ನಮ್ಮದು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ಮಹಿಳೆಯರು ಸ್ವಾವಲಂಬಿಯಾಗಿ ಆರ್ಥಿಕ ವ್ಯವಸ್ಥೆಗೆ ಕೊಡುಗೆ ನೀಡಿದಾಗ ದೇಶ ಅಭಿವೃದ್ಧಿ ಹೊಂದುತ್ತದೆ. ಆದರೆ ನಮ್ಮಲ್ಲಿ ಮಹಿಳೆಯರನ್ನು ಅಡುಗೆ ಮನೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಅದರ ಬದಲು ಅವರಲ್ಲಿರುವ ಕೌಶಲ್ಯಗಳನ್ನು ಗುರುತಿಸಿ ಅವರಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ತರಬೇತಿ ನೀಡಬೇಕಾಗಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಶಕ್ತಿ ತುಂಬಲು ಸಹಕಾರಿಯಾಗಿವೆ ಎಂದರು.

ಪಿಕೆಕೆ ಇನಿಷಿಯೇಟಿವ್ಸ್ ಅಧ್ಯಕ್ಷೆ ಪೂರ್ಣಿಮಾ ಕೋಳಿವಾಡ ಮಾತನಾಡಿದರು. ಜಿಲ್ಲಾ ಆಹಾರ ಸಂಸ್ಕರಣದಾರರ ಮಹಿಳಾ ಸಹಕಾರ ಸಂಘಗಳ ಒಕ್ಕೂಟದ ನಿಯೋಜಿತ ಮುಖ್ಯ ಪ್ರವರ್ತಕಿ ರುಕ್ಮಿಣಿ ಸಾವಕಾರ ಅಧ್ಯಕ್ಷತೆ ವಹಿಸಿದ್ದರು.ಸಹಕಾರ ಇಲಾಖೆ ಸಹಾಯಕ ನಿಬಂಧಕ ವಿಕ್ರಮ ಕುಲಕರ್ಣಿ, ಕೆಎಮ್ ಎಫ್ ನಿರ್ದೇಶಕ ಎಚ್.ಜಿ.ಹಿರೇಗೌಡ್ರ, ಎಪಿಎಂಸಿ ಸಹಾಯಕ ನಿರ್ದೇಶಕ ಪರಮೇಶ ನಾಯಕ, ಪ್ರಕಾಶ ತಾವರೆ, ರಮೇಶ ಮೂಡಗೇರಿ, ಪೂರ್ಣಿಮಾ ಕೋಳಿವಾಡ, ಜಯಶ್ರೀ ಪಿಸೆ, ಬಸವರಾಜ ತಿಪ್ಪಾಯಿಕೊಪ್ಪ, ಶ್ರೀನಿವಾಸ ನಲವಾಗಲ, ಪ್ರಕಾಶ ತಾವರೆ ಮತ್ತಿತರರು ಉಪಸ್ಥಿತರಿದ್ದರು.

Share this article