ಕನ್ನಡಪ್ರಭ ವಾರ್ತೆ ರೋಣ
ಖಾನಾಪುರದ ಗೌರವ್ವ ನಾಗಪ್ಪ ಹುಚನಟ್ಟಿ (46) ಕೊಲೆಯಾದ ಮಹಿಳೆ. ರೋಣ ತಾಲೂಕಿನ ಹೊನ್ನಾಪುರ ಗ್ರಾಮದ ಪ್ರಕಾಶ ಭೀಮಪ್ಪ ತಳವಾರ (21) ಕೊಲೆ ಆರೋಪಿ. ಇಬ್ಬರಿಗೂ ಅನೈತಿಕ ಸಂಬಂಧವಿರುವ ಬಗ್ಗೆ ತನಿಖೆ ವೇಳೆ ತಿಳಿದು ಬಂದಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ಪರಿಚಯವಾಗಿ, ಸಲುಗೆ ಬೆಳೆದು ಕೊಲೆಯಲ್ಲಿ ಅಂತ್ಯವಾಗಿದೆ.
ಮೃತ ಮಹಿಳೆ ಮೂಲತಃ ಖಾನಾಪುರದವಳಾಗಿದ್ದು, ಆಕೆಯ ನಾಪತ್ತೆ ಕುರಿತು ದೂರು ದಾಖಲಾಗಿತ್ತು. ಅಲ್ಲಿ ನಾಪತ್ತೆಯಾದ ಮಹಿಳೆಗೂ ಮಲ್ಲಾಪುರದಲ್ಲಿ ಶವವಾಗಿ ಪತ್ತೆಯಾದ ಮಹಿಳೆಯ ಹೊಲಿಕೆ ಹಾಗೂ ಕೊರಳಲ್ಲಿನ ಪದಕ, ತಾಳಿ ಒಂದೇ ರೀತಿಯಿದ್ದ ಕಾರಣ ಪೊಲೀಸರಿಗೆ ಅನುಮಾನ ಬಂದು ಪ್ರಕರಣದ ಹಿಂದೆ ಬಿದ್ದಿದ್ದರು. ಆದರೆ, ಆರೋಪಿ ಪತ್ತೆಯಾಗಿರಲಿಲ್ಲ.ನರಗುಂದದಲ್ಲಿನ ಸಿಸಿಟಿವಿ ಫೂಟೇಜ್ ಒಂದರಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ಮಹಿಳೆಯೊಬ್ಬರ ಜುಟ್ಟಲಿನ ಕೂದಲಿಗೆ ಹಾಕಿಕೊಂಡಿದ್ದ ರಬ್ಬರ್ ಬ್ಯಾಂಡ್ ಹಾಗೂ ಮೃತಪಟ್ಟ ಮಹಿಳೆಯ ಜುಟ್ಟಲಿನಲ್ಲಿದ್ದ ರಬ್ಬರ್ ಬ್ಯಾಂಡ್ ಒಂದೇ ರೀತಿಯಿದ್ದ ಕಾರಣ ಅನುಮಾನ ಬಂದ ಪೊಲೀಸರು ಬೈಕ್ ಹಾಗೂ ಅದರ ವಿವರ ಕಲೆ ಹಾಕಿದರು. ಅಲ್ಲಿ ಲೋಕೇಷನ್ ತೋರಿಸಿದ ಮೊಬೈಲ್ ಸಿಮ್ ರೋಣ ತಾಲೂಕಿನ ಬೆಳವಣಕಿ ಸಮೀಪ ಎಂಡ್ ಆದಾಗ ಪೊಲೀಸರಿಗೆ ಮತ್ತಷ್ಟು ಅನುಮಾನ ಬಂದು ಆರೋಪಿ ರೋಣ ತಾಲೂಕಿನ ಹೊನ್ನಾಪುರ ಗ್ರಾಮದ ಪ್ರಕಾಶ ಭೀಮಪ್ಪ ತಳವಾರ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ತಪ್ಪು ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ.