ತುಂಬಿದ ಕೊಡದ ಮೇಲೆ ಗಿಳಿ ಕುಂತಿತಲೆ ಪರಾಕ್

KannadaprabhaNewsNetwork |  
Published : Oct 23, 2026, 02:00 AM IST
ಪೊಟೋ- ಲಕ್ಷ್ಮೇಶ್ವರದ ಇತಿಹಾಸಿಕ ಪ್ರಸಿದ್ದ ಸೋಮೆಶ್ವರ ದೇವಸ್ಥಾನದಲ್ಲಿ ವಿಜಯದಶಮಿ ಹಬ್ಬದ ದಿನದಂದು ಕಾರಣಿಕ ನುಡಿಯುತ್ತಿರುವ ನಾಗಪ್ಪ ಬಿಂಗಿ. | Kannada Prabha

ಸಾರಾಂಶ

ಪಟ್ಟಣದ ಇತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಹಿನ್ನೆಲೆ ಸೋಮನಾಥನಿಗೆ ವಿಶೇಷ ಪೂಜೆ ಕೈಂಕರ್ಯಗಳು ಕಳೆದ ೯ ದಿನಗಳ ಕಾಲ ನಡೆದವು. ವಿಜಯದಶಮಿ ದಿನ ಬುಧವಾರ ರಾತ್ರಿ ಕಾರ್ಣಿಕೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಪಟ್ಟಣದ ಇತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಹಿನ್ನೆಲೆ ಸೋಮನಾಥನಿಗೆ ವಿಶೇಷ ಪೂಜೆ ಕೈಂಕರ್ಯಗಳು ಕಳೆದ ೯ ದಿನಗಳ ಕಾಲ ನಡೆದವು. ವಿಜಯದಶಮಿ ದಿನ ಬುಧವಾರ ರಾತ್ರಿ ಕಾರ್ಣಿಕೋತ್ಸವ ನಡೆಯಿತು. ಈ ಬಾರಿ ಕಾರಣಿಕ ನುಡಿಯುವ ನಾಗಪ್ಪ ಬಿಂಗಿ “ತುಂಬಿದ ಕೊಡದ ಮೇಲೆ ಗಿಳಿ ಕುಂತಿತಲೆ ಪರಾಕ್” ಎಂದು ಕಾರಣಿಕ ನುಡಿಯುತ್ತಿದ್ದಂತೆ ಸೇರಿದ್ದ ಭಕ್ತರು ಹರ್ಷೋದ್ಗಾರ ವ್ಯಕ್ತಪಡಿಸಿದರು.

ಬುಧವಾರ ಮಧ್ಯರಾತ್ರಿ ಸೋಮೇಶ್ವರ ದೇವರ ಪಾದಗಟ್ಟಿ ಹತ್ತಿರ ಸೇರಿದ್ದ ಸಾವಿರಾರು ಜನ ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿಯುವ ನಾಗಪ್ಪ ಬಿಂಗಿ ಅವರು ಮುಳ್ಳಿನ ಆವಿಗೆ ಮೇಲೆ ನಿಂತು ಸದ್ದಲೇ ಎಂದಾಗ ಇಡಿ ಜನಸ್ತೋಮ ಶಾಂತವಾಯಿತು. ಈ ವೇಳೆ ಅವರು ತುಂಬಿದ ಗಿಡದ ಮೇಲೆ ಕುಂತಿತಲೇ ಪರಾಕ್ ಎಂದು ಕಾರಣಿಕ ನುಡಿದರು. ಹಲವಾರು ವರ್ಷಗಳಿಂದ ಕಾರ್ಣಿಕಕಾರ ನಾಗಪ್ಪ ಬಿಂಗಿ ಕಾರಣಿಕವನ್ನು ನುಡಿಯುತ್ತಿದ್ದು, ದಸರಾ ಹಬ್ಬದಲ್ಲಿ ೯ ದಿನಗಳಿಂದ ಹಣ್ಣು, ಹಾಲು ಸೇವಿಸಿ ಉಪವಾಸ ವ್ರತಾಚರಣೆ ಮಾಡಿ ಕಾರಣಿಕ ದಿನದಂದು ಮುಳ್ಳಿನ ಆವಿಗೆ ಮೇಲೆ ನಿಂತು ಕಾರಣಿಕ ನುಡಿಯುವದು ಇಲ್ಲಿನ ಸಂಪ್ರದಾಯವಾಗಿದೆ. ಈ ಬಾರಿ “ತುಂಬಿದ ಕೊಡದ ಮೇಲೆ ಗಿಳಿ ಕುಂತಿತಲೆ ಪರಾಕ್”ಎಂದು ಕಾರಣಿಕ ವಾಣಿ ನುಡಿದಿರುವದರಿಂದ ರೈತರ ಮೊಗದಲ್ಲಿ ಸಂತಸ ಮೂಡಿತು.

ಈ ಬಾರಿ ಹಿಂಗಾರು ಮಳೆ-ಬೆಳೆ ಉತ್ತಮವಾಗುವುದು ಎನ್ನುವ ನಂಬಿಕೆ ಕಾರಣಿಕದಲ್ಲಿ ಕಂಡು ಬಂದಿತು ಎಂದು ಹಿರಿಯರು ಹೇಳಿದರು. ದೇವಸ್ಥಾನದ ಅರ್ಚಕ ಕೃಷ್ಣ ಪೂಜಾರ, ದೇವಸ್ಥಾನ ಅರ್ಚಕ ಸಮಿತಿ, ಸೋಮೇಶ್ವರ ಸೇವಾ ಟ್ರಸ್ಟ್ ಕಮೀಟಿ, ಜಾತ್ರಾ ಕಮೀಟಿ ಹಾಗೂ ಹಿರಿಯರು ಮುಖಂಡರು ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ಪಟ್ಟಣದ ಮ್ಯಾಗೇರಿ ಓಣಿಯ ಬೀರೇಶ್ವರ, ಕಡಕೋಳ ಸಿದ್ದೇಶ್ವರ, ಮೈಲಾರಲಿಂಗೇಶ್ವರ, ಹೊನಕೇರಿ ಮಲ್ಲಯ್ಯ, ವೀರಭದ್ರೇಶ್ವರ, ಯಲ್ಲಮ್ಮದೇವಿ, ಹನುಮಂತದೇವರ ಸೇರಿದಂತೆ ಪಟ್ಟಣದ ಎಲ್ಲ ದೇವಸ್ಥಾನದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ಇರಿಸಿ ವಾದ್ಯಗಳೊಂದಿಗೆ ಪಟ್ಟಣದ ಹೊರವಲಯದ ದೇವಸ್ಥಾನಗಳಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಿಸಲಾಯಿತು. ಉತ್ತರ ದ್ವಾರದ ಬಳಿ ವೀರಭದ್ರ ದೇವರ ವಡಪುಗಳನ್ನು ಹೇಳಲಾಯಿತು. ನಂತರ ಸೋಮೆಶ್ವರ ದೇವಸ್ಥಾನ ಪಾದಗಟ್ಟೆ ಹತ್ತಿರ ಸೇರಿದವು. ಅದೇ ರೀತಿ ಬೇರೆ ಬೇರೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು, ಪವಾಡಗಳು ನೆರವೇರಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸ್ ಹುತಾತ್ಮರ ತ್ಯಾಗ, ಕರ್ತವ್ಯನಿಷ್ಠೆ ಸಮಾಜಕ್ಕೆ ಸದಾ ಪ್ರೇರಣೆ: ನ್ಯಾ. ಗಂಗಾಧರ
ಚಾಟ್‌ಜಿಪಿಟಿ, ಎಐ ಅತಿಯಾದ ಬಳಕೆಯಿಂದ ಕ್ರಿಯಾಶೀಲತೆ ಕುಂಠಿತ: ವಾಣಿ ಕಲಬುರ್ಗಿ