ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತಗಟ್ಟೆಗೆ ತೆರಳಿದ ಸಿಬ್ಬಂದಿ

KannadaprabhaNewsNetwork |  
Published : Oct 23, 2026, 01:45 AM IST
ವಿಧಾನಪರಿಷತ್‌ ಚುನಾವಣೆಯ ಹಿನ್ನೆಲೆಯಲ್ಲಿ ಮತಯಂತ್ರದೊಂದಿಗೆ ಮತಗಟ್ಟೆಗೆ ತೆರಳಿದ ಸಿಬ್ಬಂದಿ. | Kannada Prabha

ಸಾರಾಂಶ

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿ ಸಿದ್ಧತೆ ಪೂರ್ಣಗೊಂಡಿದ್ದು, ಗುರುವಾರ ಜಿಲ್ಲೆಯ ವಿವಿಧೆಡೆ ಮಸ್ಟರಿಂಗ್ ಕಾರ್ಯ ಯಶಸ್ವಿಯಾಗಿ ನಡೆಯಿತು. ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 20 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಕೊಪ್ಪಳ: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿ ಸಿದ್ಧತೆ ಪೂರ್ಣಗೊಂಡಿದ್ದು, ಗುರುವಾರ ಜಿಲ್ಲೆಯ ವಿವಿಧೆಡೆ ಮಸ್ಟರಿಂಗ್ ಕಾರ್ಯ ಯಶಸ್ವಿಯಾಗಿ ನಡೆಯಿತು.

ಮತದಾನಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬ್ಯಾಲೆಟ್ ಬಾಕ್ಸ್ ಸೇರಿದಂತೆ ಅಗತ್ಯ ಚುನಾವಣಾ ಸಾಮಗ್ರಿಗಳನ್ನು ವಿತರಿಸಿ, ಪೊಲೀಸ್ ಭದ್ರತೆಯೊಂದಿಗೆ ಆಯಾ ಮತಗಟ್ಟೆಗಳಿಗೆ ಕಳುಹಿಸಿಕೊಡಲಾಯಿತು.

ಕೊಪ್ಪಳ ತಹಸೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಭೇಟಿ ನೀಡಿ ಮಸ್ಟರಿಂಗ್ ಪ್ರಕ್ರಿಯೆ ಪರಿಶೀಲಿಸಿದರು. ಮತದಾನ ನಿಗದಿತ ಸಮಯಕ್ಕೆ ಆರಂಭವಾಗುವಂತೆ ನೋಡಿಕೊಳ್ಳಬೇಕು. ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಮತದಾನ ಮುಕ್ತಾಯದ ಬಳಿಕ ಬ್ಯಾಲೆಟ್ ಬಾಕ್ಸ್‌ಗಳನ್ನು ಬಿಗಿ ಭದ್ರತೆಯಲ್ಲಿ ಭದ್ರತಾ ಕೊಠಡಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮತಗಟ್ಟೆಗಳಲ್ಲಿ ಶಾಮಿಯಾನ ಹಾಗೂ ಸಿಬ್ಬಂದಿಗೆ ಊಟೋಪಚಾರದ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸುವಂತೆಯೂ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ 20 ಮತಗಟ್ಟೆಗಳು: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 20 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗೆ ನಾಲ್ವರು ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ, ಒಬ್ಬ ಡಿ-ದರ್ಜೆ ನೌಕರ ಹಾಗೂ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಪ್ರತಿ ಮತಗಟ್ಟೆಗೆ ಒಬ್ಬ ಮೈಕ್ರೋ ಅಬ್ಸರ್ವರ್ ನೇಮಿಸಲಾಗಿದೆ.

ಮತಗಟ್ಟೆಗಳ ವಿವರ: ಗಂಗಾವತಿ ತಾಲೂಕಿನಲ್ಲಿ ಮೂರು ಮತಗಟ್ಟೆಗಳಿದ್ದು, ಗಂಗಾವತಿ ಬಸ್ ನಿಲ್ದಾಣದ ಬಳಿಯ ಸರ್ಕಾರಿ ಉರ್ದು ಪ್ರೌಢಶಾಲೆ (108), ವೆಂಕಟಗಿರಿ ಗ್ರಾಮ ಪಂಚಾಯಿತಿ ಕಾರ್ಯಾಲಯ (109) ಹಾಗೂ ಮರಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ (110)ಗಳಲ್ಲಿ ಮತದಾನ ನಡೆಯಲಿದೆ.

ಕಾರಟಗಿ ತಾಲೂಕಿನಲ್ಲಿ ಕಾರಟಗಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪಿಯು ವಿಭಾಗದ ಕಟ್ಟಡ (111) ಮತ್ತು ಸಿದ್ದಾಪುರ ಗ್ರಾಪಂ ಕಾರ್ಯಾಲಯ (112) ಮತಗಟ್ಟೆಗಳಾಗಿವೆ. ಕನಕಗಿರಿ ಪಪಂ ಕಾರ್ಯಾಲಯದಲ್ಲಿ 113ನೇ ಮತಗಟ್ಟೆ ಸ್ಥಾಪಿಸಲಾಗಿದೆ.

ಕುಷ್ಟಗಿ ತಾಲೂಕಿನಲ್ಲಿ ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಕೊಠಡಿ (114), ಸರ್ವೆ ಕೊಠಡಿ (115), ಹನುಮನಾಳ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (116), ಹನುಮಸಾಗರ ಪಪಂ ಕಾರ್ಯಾಲಯ (117) ಹಾಗೂ ತಾವರಗೇರಾ ಪಪಂ ಕಾರ್ಯಾಲಯದಲ್ಲಿ (118) ಮತದಾನ ನಡೆಯಲಿದೆ.

ಕುಕನೂರು ಪಪಂ ಕಾರ್ಯಾಲಯ (119) ಹಾಗೂ ಮಂಗಳೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಭಾಗದ ಕಟ್ಟಡದಲ್ಲಿ (120) ಮತಗಟ್ಟೆ ಸ್ಥಾಪಿಸಲಾಗಿದೆ. ಯಲಬುರ್ಗಾ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ ನೂತನ ಕಟ್ಟಡದ ದಕ್ಷಿಣ ಭಾಗ (121) ಮತ್ತು ಹಿರೇವಂಕಲಕುಂಟಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಧ್ಯ ಭಾಗದಲ್ಲಿ (122) ಮತದಾನ ನಡೆಯಲಿದೆ.

ಕೊಪ್ಪಳ ತಾಲೂಕಿನಲ್ಲಿ ಅಳವಂಡಿ ಗ್ರಾಪಂ ಕಾರ್ಯಾಲಯ (123), ಇರಕಲಗಡ ಗ್ರಾಪಂ ಕಾರ್ಯಾಲಯ (124), ತಾಪಂ ಕಾರ್ಯಾಲಯ (125), ರೈಲ್ವೆ ನಿಲ್ದಾಣ ರಸ್ತೆಯ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ (126) ಹಾಗೂ ಹಿಟ್ನಾಳ ಗ್ರಾಪಂ ಕಾರ್ಯಾಲಯದಲ್ಲಿ (127) ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಇಂದು ಮತದಾನ: ಅ. 23ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಮತದಾನ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದ್ದು, ಮತಗಟ್ಟೆಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಮಹೆಬೂಬ್ ಜೀಲಾನ್ ಖುರೇಶಿ, ತಹಸೀಲ್ದಾರ್ ಬಸವರಾಜ್ ತನ್ನಳ್ಳಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಮ್ಸ್ ಆಸ್ಪತ್ರೆಗೆ ರೈಲ್ವೆ ಸೇತುವೆ ನಿರ್ಮಾಣಕ್ಕೆ ವರದಿ ಕೇಳಿದ ರೈಲ್ವೆ ಇಲಾಖೆ
ಮಾಂಜಾದಾರ ನಿಷೇಧ ಯಾರ ಜವಾಬ್ದಾರಿ!