ಮೂರೂ ಪಕ್ಷದ ನಾಯಕರಿಂದ ಕೀಳು ಮಟ್ಟದ ಪದ ಬಳಕೆ

KannadaprabhaNewsNetwork |  
Published : Aug 06, 2024, 12:33 AM IST
35 | Kannada Prabha

ಸಾರಾಂಶ

ಮೂರೂ ಪಕ್ಷಗಳ ನಾಯಕರು ಸಜ್ಜನಿಕೆ ಬಿಟ್ಟಿದ್ದಾರೆ. ಇವುಗಳಿಂದ ನಾಡಿನ ಜನತೆಗೆ ಏನೂ ಅನುಕೂಲತೆ ಇಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಹಗರಣಗಳ ಪರ- ವಿರೋಧವಾಗಿ ಪ್ರತಿಭಟಿಸುತ್ತಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೀಳು ಮಟ್ಟದ ಪದ ಬಳಸಿ ಕನ್ನಡವನ್ನು ಕೊಲ್ಲುತ್ತಿದ್ದಾರೆ. ಈ ಹೋರಾಟದಿಂದ ಸಾರ್ವಜನಿಕ ಹಿತಾಸಕ್ತಿಯ ಬದಲಿಗೆ ಕುಟುಂಬ ರಾಜಕೀಯದ ಹಿತಾಸಕ್ತಿ ಅಡಗಿದಂತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಎಂಡಿಎ ಹಗರಣ ಮತ್ತು ವಾಲ್ಮೀಕಿ ನಿಗಮದ ಹಗರಣ ಕುರಿತು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೈಗೊಂಡಿರುವ ಪಾದಯಾತ್ರೆ ಮತ್ತು ಕಾಂಗ್ರೆಸ್ ನಡೆಸುತ್ತಿರುವ ಸಭೆಗಳಲ್ಲಿ ಆಯಾ ಪಕ್ಷದ ನಾಯಕರು ಕೀಳುಮಟ್ಟದ ಪದ ಬಳಕೆ ಮಾಡುತ್ತಿದ್ದಾರೆ. ಆ ಮೂಲಕ ಕಸ್ತೂರಿ ಕನ್ನಡವನ್ನು ಕೊಲ್ಲುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೂರೂ ಪಕ್ಷಗಳ ನಾಯಕರು ಸಜ್ಜನಿಕೆ ಬಿಟ್ಟಿದ್ದಾರೆ. ಇವುಗಳಿಂದ ನಾಡಿನ ಜನತೆಗೆ ಏನೂ ಅನುಕೂಲತೆ ಇಲ್ಲ. ಆದರೆ ಇವರು ಬಳಸುತ್ತಿರುವ ಪದಗಳು ನಾಚಿಕೆಗೇಡಿನಂತಿವೆ. ಇವರು ಕನ್ನಡದ ಕಗ್ಗೊಲೆ ಮಾಡುತ್ತಿದ್ದು, ಕನ್ನಡ ಪರ ಹೋರಾಟಗಾರರು ಏಕೆ ಸುಮ್ಮನಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಮೈಸೂರು ಸಾಂಸ್ಕೃತಿಕ ನಗರ. ಈ ವೇಳೆ ಕಸ್ತೂರಿ ಕನ್ನಡದ ಪರಿಸ್ಥಿತಿ ಏನಾಗುತ್ತಿದೆ ಎಂಬುದು ಕಳವಳವನ್ನುಂಟು ಮಾಡುತ್ತಿದೆ. ಈ ರಾಜಕಾರಣಿಗಳಿಂದ ಭಾಷೆ, ಸಂಸ್ಕೃತಿ ನಾಶವಾಗುತ್ತಿದೆ. ಇದರ ವಿರುದ್ಧ ಕನ್ನಡಿಗರು ಸೆಟೆದು ನಿಲ್ಲಬೇಕು ಎಂದು ಅವರು ಕೋರಿದರು.

ಈ ಮೂರು ಪಕ್ಷಗಳ ನಾಯಕರಾದ ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರಿಗೆ ಸಾರ್ವಜನಿಕ ಹಿತಾಸಕ್ತಿಗಿಂತ ಕುಟುಂಬ ಹಿತಾಸಕ್ತಿ ಮುಖ್ಯವಾಗುತ್ತಿದೆ. ಎಲ್ಲಾ ನಾಯಕರೂ ತಮ್ಮ ಮಕ್ಕಳನ್ನು ಮುಂದೆ ತರುತ್ತಿದ್ದಾರೆಯೇ ಹೊರತು ಬೇರೇನನ್ನೂ ಮಾಡುತ್ತಿಲ್ಲ. ನಾಡಿನ ಬಗ್ಗೆ ದೂರದೃಷ್ಟಿ ಇರಿಸಿಕೊಂಡು ಚಿಂತನೆ ಮಾಡುತ್ತಿಲ್ಲ. ದೇವರಾಜ ಅರಸು ಅವರು ತಮ್ಮಂತಹವರನ್ನು ಮುಂದೆ ತಂದರು. ಈ ರೀತಿಯ ಕೆಲಸವನ್ನು ಇವರು ಮಾಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಎಂಡಿಎ ಹಗರಣ ಕುರಿತು ತನಿಖೆ ನಡೆಯುತ್ತಿದೆ. ಆದರೆ ನಗರಾಭಿವೃದ್ಧಿ ಸಚಿವರು ಹೆಲಿಕಾಪ್ಟರ್ ನಲ್ಲಿ ಬಂದು ಎಲ್ಲಾ ಕಡತ ಕೊಂಡೊಯ್ದಿದ್ದಾರೆ. ಈಗಾಗಲೇ ಕರ್ತವ್ಯದಿಂದ ಬಿಡುಗಡೆಗೊಂಡವರು ಮತ್ತೆ ಎಂಡಿಎ ಕಚೇರಿಗೆ ಬಂದು ಅಲ್ಲಿ ಕಡತ ತಿದ್ದುವುದೇ ಮೊದಲಾದ ಕೆಲಸದಲ್ಲಿ ತೊಡಗಿದ್ದಾರೆ. ಜತೆಗೆ ಎಂಡಿಎ ನಲ್ಲಿದ್ದ ಸಿಸಿ ಟಿವಿ ಕ್ಯಾಮೆರಾ ಮೊದಲಾದವನ್ನು ತೆಗೆದು ಹಾಕಲಾಗಿದೆ. ಇನ್ನೇನು ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂಕೇವಲ 14 ನಿವೇಶನ ಪಡೆದು ಏನು ಮಾಡಬೇಕು. ಕಳಂಕ ರಹಿತ ಎನಿಸಿಕೊಳ್ಳಬೇಕಾದರೆ ಅದನ್ನು ಎಂಡಿಎಗೆ ಹಿಂದಿರುಗಿಸಿ, ಅಲ್ಲಿ ಭವನವನ್ನೋ, ಆಸ್ಪತ್ರೆಯನ್ನೋ ಕಟ್ಟಲೆಂದು ಎಂದು ಅವರು ಸಲಹೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!