ರೋಣ: ಉತ್ತರ ಕರ್ನಾಟಕದ ಸುಪ್ರಸಿದ್ಧ ಜಾತ್ರೆಗಳಲ್ಲೊಂದಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿದೇವಿ ಜಾತ್ರೆ ಶನಿವಾರ ಜರುಗಿದ್ದು, ಜಾತ್ರಾ ತೇರನ್ನು ಎಳೆಯಲು ತಾಲೂಕಿನ ಮಾಡಲಗೇರಿ ಗ್ರಾಮದಿಂದ ಹಗ್ಗ ತೆರಳಿದೆ.
ಬನಶಂಕರಿದೇವಿ ಜಾತ್ರಾ ರಥಕ್ಕೆ 8 ಇಂಚು ದಪ್ಪದ ಪುಡಿನಾರಿನಿಂದ ಹುರಿಗೊಳಿಸಿದ 250 ಅಡಿ ಉದ್ದ ಹಾಗೂ 450 ಕೆಜಿ ತೂಕ ಹೊಂದಿದ 2 ಹಗ್ಗಗಳನ್ನು ಪ್ರತ್ಯೇಕವಾಗಿ 2 ಹಳಿ ಬಂಡಿಯಲ್ಲಿಟ್ಟುಕೊಂಡು ಹೋಗಲಾಯಿತು. ಮಾಡಲಗೇರಿ ಗ್ರಾಮದಿಂದ 20 ಕಿಮೀ ದೂರದ ಬನಶಂಕರಿಗೆ ತಾಲೂಕಿನ ನೈನಾಪುರ, ಡಾಣಕಶಿರೂರ, ಮಣ್ಣೇರಿ ಮೂಲಕ ಮಲಪ್ರಭೆ ನದಿ ದಾಟಿ ಚೋಳಚಗುಡ್ಡ ಗ್ರಾಮ ಮಾರ್ಗವಾಗಿ ಬನಶಂಕರಿ ತಲುಪಲಾಯಿತು. ಮಣ್ಣೇರಿ ಗ್ರಾಮದಿಂದ ಚೋಳಚಗುಡ್ಡ ಗ್ರಾಮಕ್ಕೆ ತೆರಳು ಮಾರ್ಗ ಮಧ್ಯೆ ಮೈದುಂಬಿ ಹರಿಯುತ್ತಿರುವ ಮಲಪ್ರಭ ನದಿಯನ್ನು ಹಳಿ ಬಂಡಿಗೆ ಹೆಗಲುಕೊಟ್ಟ ಜೋಡೆತ್ತುಗಳು ಯಾವುದೇ ಪ್ರಯಾಸವಿಲ್ಲದೇ ದಾಟಿದವು. ತಾಲೂಕಿನ ಹಿರೇಹಾಳ, ನೈನಾಪುರ, ಕೊತಬಾಳ, ಚೋಳಚಗುಡ್ಡ, ಹೊಳೆಆಲೂರ, ನೀರಲಗಿ, ಬೇಲೂರ, ಕೊತಬಾಳ, ಡಾಣಕಶಿರೂರ, ಮಣ್ಣೇರಿ, ಜಾಲಿಹಾಳ, ನಸಬಿ ಸೇರಿದಂತೆ ವಿವಿಧ ಗ್ರಾಮಗಳ ಜನರು ಈ ರೋಮಾಂಚನಕಾರಿ ದೃಶ್ಯವನ್ನು ನದಿ ದಡದಲ್ಲಿ ನಿಂತು ವೀಕ್ಷಿಸಿದರು.
ಹಳಿಬಂಡಿಗಳು ಮಲಪ್ರಭಾ ನದಿ ದಾಟಿ ಚೋಳಚಗುಡ್ಡ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆಗೈದು ಬನಶಂಕರಿಗೆ ತೆರಳಿದವು. ಮಾರ್ಗದ ಉದ್ದಕ್ಕೂ ಭಕ್ತರು ಜಯಘೋಷ ಮೊಳಗಿಸಿದರು.