ಗುಲಾಬಿ ಮಾರ್ಗ: ಕೆ. ಜಿ. ಹಳ್ಳಿಯಲ್ಲಿ ಮೆಟ್ರೋ ಸುರಂಗ ಕೆಲಸ ಶುರು

KannadaprabhaNewsNetwork |  
Published : Feb 02, 2024, 01:00 AM ISTUpdated : Feb 02, 2024, 03:02 PM IST
KG Halli Metro

ಸಾರಾಂಶ

ಗುಲಾಬಿ ಮಾರ್ಗದ ಸುರಂಗ ಕೊರೆವ ಕಾಮಗಾರಿಯಲ್ಲಿ ತೊಡಗಿದ್ದ ಏಳು ಯಂತ್ರಗಳು ಈಗಾಗಲೇ ತಮ್ಮ ಕೆಲಸವನ್ನು ಮುಗಿಸಿವೆ. ಇನ್ನು, ಸುರಂಗ ಮಾರ್ಗದಲ್ಲಿ ಹನ್ನೆರಡು, ಹಾಗೂ ಎತ್ತರಿಸಿದ ಮಾರ್ಗದಲ್ಲಿ ಆರು ನಿಲ್ದಾಣಗಳ ಕಾಮಗಾರಿ ಪ್ರಗತಿಯಲ್ಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾಳೇನಅಗ್ರಹಾರದಿಂದ ನಾಗವಾರವರೆಗೆ ಸಂಪರ್ಕಿಸುವ ನಮ್ಮ ಮೆಟ್ರೋದ ಗುಲಾಬಿ ಮಾರ್ಗದಲ್ಲಿ ಟಿಬಿಎಂ ತುಂಗಾ ಗುರುವಾರದಿಂದ ಅಂತಿಮವಾಗಿ ಕೆ.ಜಿ.ಹಳ್ಳಿ-ನಾಗವಾರದವರೆಗೆ ಸುರಂಗ ಕೊರೆವ ಕಾರ್ಯವನ್ನು ಆರಂಭಿಸಿದ್ದು, ಇನ್ನೊಂದೆಡೆ ಸುರಂಗದಲ್ಲಿ ಹಳಿ ಜೋಡಣೆ ಕಾರ್ಯ ಚುರುಕಾಗಿದೆ.

ವೆಂಕಟೇಶಪುರದಿಂದ ಕೆ.ಜಿ.ಹಳ್ಳಿವರೆಗೆ 1184.4 ಮೀಟರ್‌ ಸುರಂಗ ಕೊರೆದಿದ್ದ ತುಂಗಾ ಟಿಬಿಎಂ ಡಿಸೆಂಬರ್‌ನಲ್ಲಿ ಹೊರಬಂದಿತ್ತು. ಇದೀಗ ಅಂತಿಮ ಹಂತವಾಗಿ 935 ಮೀ. ಸುರಂಗ ಕೊರೆವ ಕಾಮಗಾರಿಯನ್ನು ಪ್ರಾರಂಭಿಸಿದೆ. ಈ ಕಾಮಗಾರಿ ಮೇ ಅಂತ್ಯ ಅಥವಾ ಜೂನ್‌ ಮೊದಲ ವಾರದಲ್ಲಿ ಮುಗಿಯುವ ನಿರೀಕ್ಷೆಯಿದೆ.

ಟಿಬಿಎಂ ಭದ್ರಾ: ಸದ್ಯ ಭದ್ರಾ ಟಿಬಿಎಂ ವೆಂಕಟೇಶಪುರದಿಂದ ಕೆ.ಜಿ.ಹಳ್ಳಿವರೆಗೆ (1186 ಮೀ.) ಸುರಂಗ ಕೊರೆವ ಕಾರ್ಯದಲ್ಲಿದ್ದು, ದಿನಕ್ಕೆ 3.35 ಮೀ. ಸುರಂಗ ಕೊರೆಯುತ್ತಿರುವ ಈ ಯಂತ್ರ ಈವರೆಗೆ 1128 ಮೀ. ಸುರಂಗದ ಕೆಲಸ ಮುಗಿಸಿದೆ. 

ಫೆ.7ರ ಹೊತ್ತಿಗೆ ಇದು ಪೂರ್ಣಗೊಳ್ಳಲಿದೆ. ಬಳಿಕ ಮಾರ್ಚ್‌ನಿಂದ ಈ ಟಿಬಿಎಂ ಕೂಡ ಕೆ.ಜಿ.ಹಳ್ಳಿ-ನಾಗವಾರದವರೆಗೆ (939 ಮೀ.) ಸುರಂಗ ಕೊರೆವ ತನ್ನ ಅಂತಿಮ ಕಾರ್ಯ ಆರಂಭಿಸಲಿದೆ. 

ಈ ಕೆಲಸ ಜೂನ್‌ ಅಂತ್ಯ, ಜುಲೈ ಮೊದಲ ವಾರದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಈ ಮೂಲಕ ಗುಲಾಬಿ ಮಾರ್ಗದ 20.99 ಕಿ.ಮೀ. ಸುರಂಗ ಕೊರೆವ ಕೆಲಸ ಮುಗಿಯಲಿದೆ.

ಗುಲಾಬಿ ಮಾರ್ಗದ ಸುರಂಗ ಕೊರೆವ ಕಾಮಗಾರಿಯಲ್ಲಿ ತೊಡಗಿದ್ದ ಏಳು ಯಂತ್ರಗಳು ಈಗಾಗಲೇ ತಮ್ಮ ಕೆಲಸವನ್ನು ಮುಗಿಸಿವೆ. ಇನ್ನು, ಸುರಂಗ ಮಾರ್ಗದಲ್ಲಿ ಹನ್ನೆರಡು, ಹಾಗೂ ಎತ್ತರಿಸಿದ ಮಾರ್ಗದಲ್ಲಿ ಆರು ನಿಲ್ದಾಣಗಳ ಕಾಮಗಾರಿ ಪ್ರಗತಿಯಲ್ಲಿದೆ.ಹಳಿ ಜೋಡಣೆ

ಪ್ರಸ್ತುತ ಗುಲಾಬಿ ಮಾರ್ಗದ ಎತ್ತರಿಸಿದ ಕಾರಿಡಾರ್‌ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಟ್ರ್ಯಾಕ್‌ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಶೇ. 30ರಷ್ಟು ಪ್ಲಿಂತ್‌ ಕಾಸ್ಟಿಂಗ್‌ (ಸಿಮೆಂಟ್‌ ಚೌಕಟ್ಟುಗಳನ್ನು ರೂಪಿಸಿಕೊಳ್ಳುವುದು) ಕಾರ್ಯ ಆಗಿದೆ. 

ಇನ್ನೊಂದೆಡೆ ತಾವರೆಕೆರೆ-ನಾಗವಾರದವರೆಗೆ ಟೆಕ್ಸ್‌ಮ್ಯಾಕೊ ರೈಲ್ ಆ್ಯಂಡ್‌ ಎಂಜಿನಿಯರಿಂಗ್‌ ಕಂಪನಿ ಹಳಿ ಜೋಡಣೆ ನಡೆಸುತ್ತಿದ್ದು, 0.80ರಷ್ಟು ಕೆಲಸ ಆಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಮೆಜೆಸ್ಟಿಕ್‌ ಪ್ಲಾಟ್‌ಫಾರ್ಮಲ್ಲಿ ಸ್ಟೀಲ್‌ ಬ್ಯಾರಿಕೇಡ್‌ ಅಳವಡಿಕೆ:  ನಮ್ಮ ಮೆಟ್ರೋ ನಾಡಪ್ರಭು ಕೆಂಪೇಗೌಡ ನಿಲ್ದಾಣದ ಪ್ಲಾಟ್‌ಫಾರ್ಮ್‌ ಅಂಚಿನಲ್ಲಿ ಸ್ಟೀಲ್‌ ಬ್ಯಾರಿಕೇಡ್‌ಗಳನ್ನು ಅಳವಡಿಕೆ ಮಾಡುತ್ತಿದ್ದು, ಈಗಾಗಲೇ ಮೂರ್ನಾಲ್ಕು ಪ್ಲಾಟ್‌ಫಾರ್ಮ್‌ನಲ್ಲಿ ಅಳವಡಿಕೆಯಾಗಿದೆ. 

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಇದನ್ನು ಹಾಕಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಮೆಟ್ರೋ ಹಳಿಗಿಳಿದ ಎರಡು ಪ್ರಕರಣಗಳು ಘಟಿಸಿದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ಈ ಕ್ರಮ ಅನುಸರಿಸಿದೆ. ಆದರೆ, ಜನತೆ ಬ್ಯಾರಿಕೇಡ್‌ ಬದಲು ಆದಷ್ಟು ಬೇಗ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ ಅಳವಡಿಸುವಂತೆ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ