-ಆದಿ ಜಾಂಬವ ಅಭಿವೃದ್ಧಿ ನಿಮಗದ ಅಧ್ಯಕ್ಷ ಜಿ.ಎಸ್. ಮಂಜುನಾಥ ಪ್ರತಿಪಾದನೆ । ನಿವೃತ್ತಿ ಅಂಚಿನಲ್ಲಿರುವ ಐವರು ಪೌರ ಕಾರ್ಮಿಕರ ಸನ್ಮಾನ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಪೌರಕಾರ್ಮಿಕರ ನೇಮಕಾತಿಗೆ ನಿಗದಿಪಡಿಸಿರುವ ಮೀಸಲಾತಿ ಹಾಗೂ ರೋಸ್ಟರ್ ನಿಯಮ ಸಡಿಲಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ ಹೇಳಿದರು.ನಗರಸಭೆಯಿಂದ ರಾಜೇಂದ್ರ ನಗರದ ಅಂಬೇಡ್ಕರ್ ಕಲ್ಯಾಣ ಮಂಟಪ ಆವರಣದಲ್ಲಿ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೇ.99 ರಷ್ಟು ಪರಿಶಿಷ್ಟ ಜಾತಿ ಜನರೇ ಪೌರ ಕಾರ್ಮಿಕ ಕೆಲಸ ಮಾಡುತ್ತಾರೆ. ಪರಿಶಿಷ್ಟ ಜಾತಿಯಲ್ಲೂ ಅತಿ ಹಿಂದುಳಿದವರು ಮಾತ್ರ ಹೆಚ್ಚಾಗಿ ಪೌರಕಾರ್ಮಿಕ ವೃತ್ತಿಯನ್ನು ಆಯ್ದುಕೊಳ್ಳುತ್ತಾರೆ ಎಂದರು.
ಈ ಕಾರಣಕ್ಕಾಗಿ ನಗರಗಳಲ್ಲಿ ಪೌರಕಾರ್ಮಿಕ ಸಮಸ್ಯೆ ತಲೆದೋರುತ್ತದೆ. ಈಗಾಗಲೇ ನೇರ ಪಾವತಿಯಡಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಸಹ ಖಾಯಂ ನೇಮಕಾತಿ ಮಾಡಿಕೊಳ್ಳಲು ಅಡಚರಣೆ ಉಂಟಾಗುತ್ತಿದೆ ಎಂದರು.
ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಜಾರಿಗೊಳಿಸಿ ಮನೆ ಮನೆಗಳಿಂದ ಕಸ ಸಂಗ್ರಹಿಸಲು ಆರಂಭಿಸಿದ ಮೇಲೆ, ನಗರಸಭೆಯ ದ್ವಿತೀಯ ಹಾಗೂ ಪ್ರಥಮ ದರ್ಜೆ ಸಹಾಯಕರು, ಕಂದಾಯ ಅಧಿಕಾರಿಗಳ ಹುದ್ದೆಗಳನ್ನು ಕಡಿತಗೊಳಿಸಿ, ಅವುಗಳ ಬದಲಿಗೆ ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತರರನ್ನು ನಗರಸಭೆ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ನಗರಸಭೆಗೆ ವಿವಿಧ ಇಲಾಖೆಗಳಿಂದ ಎರವಲು ಸೇವೆಯ ಮೇಲೆ ಅಧಿಕಾರಿಗಳು ಬರುವುದನ್ನು ತಡೆಯಲಾಗಿದೆ. ಪೌರಕಾರ್ಮಿಕರ ಹೋರಾಟದ ಫಲವಾಗಿ ಸರ್ಕಾರದಿಂದಲೇ ವೇತನ ನೀಡಲಾಗುತ್ತಿದೆ. ಇದರ ಜತೆಗೆ ಪೌರ ಕಾರ್ಮಿಕರಿಗೆ ನಗರಸಭೆಯ ಶೇ. 24.5 ಜಮೀನು ಖರೀದಿಸಿ ನಿವೇಶನಗಳನ್ನು ಹಂಚುವಂತೆ ಜಿ.ಎಸ್.ಮಂಜುನಾಥ್ ಅಧಿಕಾರಿಗಳಲ್ಲಿ ಕೋರಿದರು.
ಪೌರಾಯುಕ್ತೆ ಎಂ. ರೇಣುಕಾ ಮಾತನಾಡಿ, ಸೆ.23 ರಂದು ಪೌರಕಾರ್ಮಿಕ ದಿನಾಚರಣೆ ಆಚರಿಸುತ್ತಾ ಬರಲಾಗುತ್ತಿದೆ. ನಗರದ ಸಾರ್ವಜನಿಕರು ಪೌರಕಾರ್ಮಿಕರನ್ನು ಗೌರವದಿಂದ ಕಾಣಬೇಕು. ತುಂಬಾ ಕಷ್ಟಪಟ್ಟು ನಗರದ ಸ್ವಚ್ಛತೆಗಾಗಿ ದುಡಿಯುವ ಪೌರಕಾರ್ಮಿರಿಗೆ ಸರ್ಕಾರದಿಂದ ನೆರವು ಹಾಗೂ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಪೌರಕಾರ್ಮಿಕರಾದ ಜಯಣ್ಣ. ಎನ್. ದೇವೆಂದ್ರಪ್ಪ, ನಾಗೇಂದ್ರಪ್ಪ, ಇಸಾಕ್ ಹಾಗೂ ದುರ್ಗೇಶಪ್ಪ, ಆರೋಗ್ಯ ಇಲಾಖೆ ಶುಶ್ರೂಷಕ ಮಲ್ಲಣ್ಣವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಪೌರಕಾರ್ಮಿಕರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಗರಸಭೆ ಅಧ್ಯಕ್ಷೆ ಸುಮಿತಾ ರಘು, ಉಪಾಧ್ಯಕ್ಷೆ ಶ್ರೀದೇವಿ ಜಿ.ಎಸ್, ಸದಸ್ಯರಾದ ಎಚ್. ಶ್ರೀನಿವಾಸ, ಭಾಗ್ಯಮ್ಮ, ಅನುರಾಧ, ತಾರಕೇಶ್ವರಿ, ನಸರುಲ್ಲಾ, ಕೆ.ಬಿ. ಸುರೇಶ್, ಶಬ್ಬೀರ್ ಅಹಮದ್, ರಮೇಶಾಚಾರ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಪೌರಕಾರ್ಮಿಕ ಸಂಘದ ಅಧ್ಯಕ್ಷ ದುರ್ಗೇಶ್ ಇದ್ದರು.
23 ಸಿಟಿಡಿ6