ಜಿಲ್ಲಾ ರೋಟರಿ ಕಾಫಿ ಲ್ಯಾಂಡ್ ವತಿಯಿಂದ ಜಿಲ್ಲಾ ಯೋಜನಾ ಉದ್ಘಾಟನೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಾಜಮುಖಿ ಕೆಲಸಗಳಿಗೆ ಒತ್ತು ನೀಡುವ ರೋಟರಿ ಸಂಸ್ಥೆ ಸಮುದಾಯದ ಆರೋಗ್ಯ, ಸ್ವಾಸ್ಥ್ಯ ಹಾಗೂ ಜೀವನಮಟ್ಟ ಸುಧಾರಿಸಲು ಹಲವಾರು ವರ್ಷಗಳಿಂದ ಶ್ರಮಿಸುತ್ತಿದೆ ಎಂದು ರೋಟರಿ ಕಾಫಿ ಲ್ಯಾಂಡ್ ಜಿಲ್ಲಾ ರಾಜ್ಯಪಾಲ ದೇವಾನಂದ್ ಹೇಳಿದರು.
ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಜಿಲ್ಲಾ ರೋಟರಿ ಕಾಫಿ ಲ್ಯಾಂಡ್ ನಿಂದ ಶುಕ್ರವಾರ ಏರ್ಪಡಿಸಿದ್ಧ ಜಿಲ್ಲಾ ಯೋಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೋಟರಿ ಈ ಬಾರಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ಸುರಕ್ಷತೆ, ಹಸಿರು, ನೀರು, ಸಾಮಾಜಿಕ ನ್ಯಾಯ ಹಾಗೂ ಆರೋಗ್ಯ ಮತ್ತು ಸ್ವಚ್ಛತಾ ಜಾಗೃತಿ ಎಂಬ ನಾಲ್ಕು ಅಂಶಗಳು ಒಳಗೊಂಡಿರುವ ಯೋಜನಾ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಲ್ಲಿ ಅರಿವು ಮೂಡಿಸಲು ಮುಂದಾಗುತ್ತಿದೆ ಎಂದು ತಿಳಿಸಿದರು.ಸಮಾಜದಲ್ಲಿನ ಪ್ರತಿಯೊಬ್ಬರು ಪರಿಸರದ ವೃಕ್ಷಗಳನ್ನು ಉಳಿಸಿ, ಬೆಳೆಸಲು ಕಾಳಜಿ ವಹಿಸಬೇಕು. ಮರ ಗಿಡಗಳ ಉಪಯೋಗವನ್ನು ನಾವುಗಳು ಅರಿತಾಗ ಮಾತ್ರ ಸಸ್ಯದ ಮಹತ್ವ ತಿಳಿಯಲಿದೆ ಎಂದ ಅವರು, ಪರಿಸರ ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು ಹಾನಿಗೊಳಗಾಗದಂತೆ ಜಾಗ್ರತೆ ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. 18ರ ಪ್ರಾಯದ ಮುನ್ನ ದ್ವಿಚಕ್ರ ವಾಹನ ಚಲಾಯಿಸುವುದು ಕಾನೂನಿನಲ್ಲಿ ಅಪರಾಧ. ಹೀಗಾಗಿ ಲೈಸೆನ್ಸ್ ಪಡೆದುಕೊಂಡು ಬೈಕ್ ಅಥವಾ ಕಾರು ಚಲಾಯಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ವಕೀಲ ಹಳೇಕೋಟೆ ತೇಜಸ್ವಿ ಸಾಮಾಜಿಕ ನ್ಯಾಯ, ಕೃಷಿ ಅಧಿಕಾರಿ ವೆಂಕಟೇಶ್ ಎಸ್.ಚವ್ಹಾಣ್ ಹಸಿರು, ನೀರು ಹಾಗೂ ಸರ್ಕಾರಿ ವೈದ್ಯ ಡಾ.ಎಂ.ಚಂದ್ರಶೇಖರ್ ಆರೋಗ್ಯ ಮತ್ತು ಸ್ವಚ್ಛಾತೆ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.
ಚಿಕ್ಕಮಗಳೂರಿನ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಜಿಲ್ಲಾ ರೋಟರಿ ಕಾಫಿ ಲ್ಯಾಂಡ್ ನಿಂದ ಶುಕ್ರವಾರ ಏರ್ಪಡಿಸಿದ್ಧ ಜಿಲ್ಲಾ ಯೋಜನಾ ಕಾರ್ಯಕ್ರಮವನ್ನು ರೋಟರಿ ಕಾಫಿ ಲ್ಯಾಂಡ್ ಜಿಲ್ಲಾ ರಾಜ್ಯಪಾಲ ದೇವಾನಂದ್ ಉದ್ಘಾಟಿಸಿದರು.