ಕನ್ನಡಪ್ರಭ ವಾರ್ತೆ ಕುಣಿಗಲ್
ಪಟ್ಟಣದ ಜ್ಞಾನಭಾರತಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತುಮಕೂರು ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಥ್ರೋ ಬಾಲ್ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಿಂದ ಕುಣಿಗಲ್ ಜ್ಞಾನಭಾರತಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದರೆ ತಿಪಟೂರಿನ ವಿದ್ಯಾರ್ಥಿಗಳು ದ್ವಿತೀಯಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ತುಮಕೂರಿನ ವಿದ್ಯಾರ್ಥಿನಿಯರು ಪ್ರಥಮಸ್ಥಾನ ಗಳಿಸಿದರೆ ತಿಪಟೂರಿನ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದರು. ಕಾರ್ಯಕ್ರಮ ಉದ್ಘಾಟಿಸಿದ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಿ. ಬಿ. ರಾಮಸ್ವಾಮಿಗೌಡ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಸದೃಢತೆ ಸಾಧಿಸಿ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಶಕ್ತಿ ಬರುತ್ತದೆ ಸೋಲು, ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ಕ್ರೀಡಾ ಧರ್ಮವನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಪನಿಪಾಳ್ಯ ರಮೇಶ ಕ್ರೀಡೆಗೆ ಜಾತಿ, ಮತ, ಬಡವ, ಶ್ರೀಮಂತ, ಭಾಷೆಗಳ ಭೇದವಿರುವುದಿಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕ್ರೀಡೆಯ ಸಾಮರ್ಥ್ಯ ಪ್ರದರ್ಶಿಸಿ ಕ್ರೀಡೆಯ ಹಿರಿಮೆಯನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದರು. ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಪ್ರಭಾಕರರೆಡ್ಡಿ, ನೋಡಲ್ ಕೇಂದ್ರವಾದ ಮಹಾತ್ಮ ಗಾಂಧಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾ ಚಾರ್ಯ ನಾಗರಾಜು, ಜಿಲ್ಲಾ ಅನುದಾನಿತ ಪದವಿಪೂರ್ವ ಕಾಲೇಜುಗಳ ಸಂಘದ ಅಧ್ಯಕ್ಷ ಗೋವಿಂದರಾಜುರವರು ಮಾತನಾಡಿದರು.
ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಚ್. ಜಿ. ಚನ್ನಪ್ಪ, ನಿರ್ದೇಶಕರುಗಳಾದ ಲಕ್ಷ್ಮಣಗೌಡ ಹಾಗೂ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಗೋವಿಂದೇಗೌಡ, ಶಿವಣ್ಣ, ಕಿರಣಕುಮಾರ್, ಕೃಷ್ಣಮೂರ್ತಿ, ರವಿ, ವೆಂಕಟಮುನಿರೆಡ್ಡಿ, ನರೇಶ್, ವಿಜಯ ಕುಮಾರ್ ಹಾಗೂ ಉಪನಿರ್ದೇಶಕರಿಂದ ನಿಯೋಜಿಸಲ್ಪಟ್ಟ ದೈಹಿಕ ಶಿಕ್ಷಣ ಶಿಕ್ಷಕರಾದ ತಿಪ್ಪೇಶ್, ನಾಗೇಶ್, ಭವಾನಿ, ಅಜೀಜ್ ಉಲ್ಲಾಖಾನ್ ರವರು ಉಪಸ್ಥಿತರಿದ್ದರು.