ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರೋಟರಿ ಸಂಸ್ಥೆಯು ಸಮಾಜದಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿ ಮಾಡಲು ಶ್ರಮಿಸುತ್ತಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್.ಜಿ ಹೇಳಿದರು.ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ನಾರಾಯಣ ಹೃದಾಯಲಯ ಸಹಯೋಗದಲ್ಲಿ ಇಲ್ಲಿನ ಗೋವಿಂದಪುರದಲ್ಲಿ ಆಯೋಜಿಸಿದ್ದ ಮಹಿಳೆಯರಿಗೆ ಮೊಮೊಗ್ರಫಿ, ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶ ಕ್ಯಾನ್ಸರ್ ಬಗ್ಗೆ ಜಾಗೃತಿ ಕಾರ್ಯಕ್ರಮ ಮತ್ತು ಉಚಿತ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಿರಂತರವಾಗಿ ಉತ್ತಮ ಸಾಮಾಜಿಕ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನಿಂದ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ನಾರಾಯಣ ಹೃದಯಾಲಯದ ವೈದ್ಯೆ ರಶ್ಮಿ ಅಂಚಿನಾಳ ಮಾತನಾಡಿ, ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶ ಕ್ಯಾನ್ಸರ್ ವಿಚಾರವಾಗಿ ಉಪಯುಕ್ತ ಮಾಹಿತಿ ನೀಡಿ, ಜಾಗೃತಿ ಅಭಿಯಾನ ರೋಗದ ಬಗ್ಗೆ ಗಮನ ಸೆಳೆಯುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಿದರು.ಈಗ ಗರ್ಭಕೋಶದ ಕ್ಯಾನ್ಸರ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಇದೇ ರೀತಿ ಹೆಚ್ಚು ಹೆಚ್ಚು ಆರೋಗ್ಯ ಶಿಬಿರಗಳನ್ನು ಮಾಡುವುದು ಒಳ್ಳೆಯದು. ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಆರೋಗ್ಯ ಶಿಬಿರಗಳನ್ನು ಮಾಡುತ್ತಿರುವುದು ಮತ್ತು ನಾವು ಜೊತೆಗೂಡಿ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ತಿಳಿಸಿದರು.
ಈ ಆರೋಗ್ಯ ಶಿಬಿರವನ್ನು ಗೀತಾ ಜಗದೀಶ್ ಸಂಯೋಜಿಸಿದ್ದರು. ಈ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಮಹಿಳೆಯರು ಜಾಗೃತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಬಿ.ವಿ.ಈಶ್ವರ್, ರವಿ ಕೋಟೋಜಿ, ಬಸವರಾಜ್, ಧರ್ಮೇಂದ್ರ ಸಿಂಗ್, ಜಗದೀಶ್, ಮೋಹನ್, ರಾಜಶ್ರೀ ಬಸವರಾಜ್, ಶುಭಾ ಚಿದಾನಂದ್ ಹಾಗೂ ಆಶಾ ಕಾರ್ಯಕರ್ತೆ ಚೇತನಾ, ಗೋವಿಂದಪುರದ ಗ್ರಾಪಂ ಮಾಜಿ ಸದಸ್ಯ ರುದ್ರಪ್ಪ, ರಾಜು ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.