ಲಕ್ಷ್ಮೇಶ್ವರ: ಸಮೀಪದ ಹೂವಿನ ಶಿಗ್ಲಿಯ ವಿರಕ್ತಮಠದ 46ನೇ ವರ್ಷದ ಜಾತ್ರಾಮಹೋತ್ಸವಕ್ಕೆ ಭಕ್ತರು ಸಾವಿರಾರು ರೊಟ್ಟಿಗಳನ್ನು ಚಕ್ಕಡಿಯಲ್ಲಿ ಮೆರವಣಿಗೆಯ ಮೂಲಕ ಶ್ರೀಮಠಕ್ಕೆ ಭಕ್ತರು ತಂದು ಮುಟ್ಟಿಸಿರುವ ಘಟನೆ ಶುಕ್ರವಾರ ನಡೆಯಿತು.
ಸಮೀಪದ ಹೂವಿನ ಶಿಗ್ಲಿಯಲ್ಲಿ ಸುಮಾರು 700 ಮನೆಗಳು ಇದ್ದು, ಪ್ರತಿಮನೆಯಿಂದ ನೂರಕ್ಕೂ ಹೆಚ್ಚು ರೊಟ್ಟಿ ತಮ್ಮೂರಿನ ಶ್ರೀಮಠದ ಜಾತ್ರೆಗೆ ಸ್ವಯಂ ಪ್ರೇರಿತರಾಗಿ ತಂದು ಮುಟ್ಟಿಸುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ ಗ್ರಾಮಸ್ಥರು ತಾವು ಮಾಡಿದ ರೊಟ್ಟಿಗಳನ್ನು ಬುಟ್ಟಿಯಲ್ಲಿ ಹೊತ್ತು ತಂದು ಚಕ್ಕಡಿಗಳಲ್ಲಿ ಹಾಕುತ್ತಿದ್ದ ದೃಶ್ಯ ಕಂಡು ಬಂದಿತು.ಗ್ರಾಮದ ವಿರಕ್ತ ಮಠದ ಪೀಠಾಧಿಪತಿ ಚನ್ನವೀರ ಮಹಾಸ್ವಾಮಿಗಳು ಚಕ್ಕಡಿಯಲ್ಲಿ ಮೆರವಣಿಗೆಯ ಮೂಲಕ ಗ್ರಾಮದಲ್ಲಿ ಸಂಚಾರ ಮಾಡಿ ಭಕ್ತರು ತಂದು ಹಾಕುತ್ತಿದ್ದ ರೊಟ್ಟಿಗಳನ್ನು ನಗುಮೊಗದಿಂದ ಸ್ವೀಕರಿಸುತ್ತಿದ್ದರು.
ಈ ವೇಳೆ ಮಾತನಾಡಿದ ಶ್ರೀಗಳು, ಕಳೆದ 46 ವರ್ಷಗಳಿಂದ ಹೂವಿನ ಶಿಗ್ಲಿಯಲ್ಲಿ ವಿರಕ್ತಮಠದ ಜಾತ್ರಾಮಹೋತ್ಸವವು ಜ.13, 14 ಮತ್ತು 15 ರಂದು ಅದ್ಧೂರಿಯಾಗಿ ನಡೆದುಕೊಂಡು ಬರುತ್ತಿದೆ. 14 ರಂದು ರಥೋತ್ಸವವು ಹಾಗೂ 15 ರಂದು ಕಡುಬಿನ ಕಾಳಗ ಜರುಗುತ್ತಿದೆ. ಈ ವರ್ಷ ಗ್ರಾಮದ ಜನರು ತಾವು ನಮ್ಮ ಶ್ರೀಮಠದ ಜಾತ್ರೆಗೆ ಸಾವಿರಾರು ರೊಟ್ಟಿ ನೀಡುವ ಮೂಲಕ ಜಾತ್ರೆಗೆ ವಿಶೇಷ ಮೆರಗು ನೀಡುವ ಕೆಲಸ ಮಾಡಿರುವುದು ಹೆಚ್ಚು ಸಂತೋಷ ತಂದಿದೆ ಎಂದು ಹೇಳಿದರು.ಗ್ರಾಮಸ್ಥರು ತಾವು ಮಾಡಿ ತಂದು ಕೊಟ್ಟ ರೊಟ್ಟಿ ನಮ್ಮೂರಿನ ಜಾತ್ರೆಗೆ ಬರುವ ಸಾವಿರಾರು ಭಕ್ತರ ಹಸಿವು ನೀಗಿ ಸಂತೃಪ್ತಿಯ ಭಾವನೆ ಅವರಲ್ಲಿ ಮೂಡಲಿ ಎಂದು ಆಶಿಸುತ್ತಿದ್ದರು.
ಶ್ರೀಮಠದ ಜಾತ್ರಾಮಹೋತ್ಸವವು ಅದ್ಧೂರಿಯಾಗಿ ಹಾಗೂ ಸಂಭ್ರಮದಿಂದ ಜರುಗಬೇಕು ಎನ್ನುವ ಆಸೆಯಿಂದ ಹಾಗೂ ಭಕ್ತಿಯಿಂದ ರೊಟ್ಟಿ ತಂದು ಶ್ರೀಮಠಕ್ಕೆ ಕೊಡುತ್ತಿದ್ದರು. ಮೆರವಣೆಗೆಯಲ್ಲಿ ಮಹಿಳೆಯರು ತಾವು ಮಾಡಿದ ರೊಟ್ಟಿ ಬುಟ್ಟಿಯಲ್ಲಿ ಹೊತ್ತು ತರುತ್ತಿದ್ದರೆ.ಡೊಳ್ಳು ಹಾಗೂ ಭಜನಾ ಮೇಳಗಳು ಮಹಿಳೆಯರ ರೊಟ್ಟಿಯ ಮೆರವಣಿಗೆಗೆ ಕಳೆ ನೀಡಿದ್ದವು. ರೊಟ್ಟಿಯನ್ನು ಸಂಗ್ರಹಿಸಿ 10 ಕ್ಕೂ ಹೆಚ್ಚು ಚಕ್ಕಡಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.ಈ ವೇಳೆ ಗ್ರಾಮದ ತುಂಬೆಲ್ಲ ಸಡಗರ ಸಂಭ್ರಮ ಮನೆ ಮಾಡಿದ್ದು ಕಂಡು ಬಂದಿತು.