ಕನ್ನಡಪ್ರಭ ವಾರ್ತೆ ಮಂಡ್ಯ
ಸೋಮವಾರ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ನಡೆದ ಸಾಮರಸ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಅಂಶಗಳನ್ನು ಅನುಮತಿ ಪತ್ರದಲ್ಲಿ ನಮೂದಿಸಿದಾಗ ಪೊಲೀಸ್ ಬಂದೋಬಸ್ತ್, ಸೀಸಿ ಟಿವಿ ಅಳವಡಿಕೆ ಬ್ಯಾರಿಕೇಡ್, ಚೆಸ್ಕಾಂ ಹಾಗೂ ಅಗ್ನಿ ಶಾಮಕ ಇಲಾಖೆಯಿಂದ ಅಗತ್ಯ ಸಿದ್ಧತೆಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಬಹುದು ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪಿಸುವವರು ತಾಲೂಕು ಕಚೇರಿಗಳಲ್ಲಿ ತೆರೆಯಲಾಗುವ ಏಕಗವಾಕ್ಷಿ ಕೇಂದ್ರದಲ್ಲಿ ಮನವಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯ. ಸ್ಥಳೀಯ ಮುಖಂಡರು ಒಂದೇ ಸ್ಥಳವನ್ನು ನಿಗದಿಪಡಿಸಿಕೊಂಡು ಗಣಪತಿ ವಿಸರ್ಜನೆ ಮಾಡಿದರೆ, ಜಿಲ್ಲಾಡಳಿತದಿಂದ ಬೇಕಿರುವ ಸಿದ್ಧತೆ ಹಾಗೂ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಸುಲಭವಾಗಲಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಸೆಪ್ಟೆಂಬರ್ ೫ ರಂದು ಈದ್ ಮಿಲಾದ್ ಹಬ್ಬ ಇರುವುದರಿಂದ ಆ ದಿನದಂದು ಗಣಪತಿ ವಿಸರ್ಜನೆ ಮಾಡುವುದು ಬೇಡ. ೯ ಹಾಗೂ ೧೧ನೇ ದಿನಕ್ಕೆ ವಿಸರ್ಜನೆ ಮಾಡುವುದು ಉತ್ತಮ. ಗಣಪತಿ ಹಬ್ಬದ ದಿನದಂದೇ ಗಣಪತಿಯನ್ನು ಪ್ರತಿಷ್ಠಾಪಿಸಿ. ಅದರ ಬದಲಾಗಿ ಬೇರೆ ದಿನ ಪ್ರತಿಷ್ಠಾಪಿಸುವುದು ಬೇಡ ಎಂದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಮಾತನಾಡಿ, ಪರಿಸರ ಮಾಲಿನ್ಯ ಉಂಟುಮಾಡದಂತೆ ಗಣಪತಿ ಹಬ್ಬ ಆಚರಿಸೋಣ. ಈ ಬಾರಿ ಪುಟ್ಟದಾದ ಜೇಡಿ ಮಣ್ಣು ಹಾಗೂ ನೈಸರ್ಗಿಕ ಬಣ್ಣ ಉಪಯೋಗಿಸಿ ತಯಾರಿಸಿದ ಗಣಪತಿಯನ್ನು ಪ್ರತಿಷ್ಠಾಪಿಸಿ ಪರಿಸರವನ್ನು ಉಳಿಸಬೇಕು ಎಂದರು.
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ತಾಲೂಕು ಮಟ್ಟದಲ್ಲಿ ಜೇಡಿ ಮಣ್ಣಿನಿಂದ ಗಣಪತಿ ತಯಾರಿ ಮಾಡಲು ಮಕ್ಕಳಿಗೆ ತರಬೇತಿ ನೀಡಲು ಯೋಜಿಸಲಾಗಿದೆ. ಮಕ್ಕಳು ಪ್ರತಿ ಬೀದಿಯಲ್ಲಿ ಗಣಪತಿ ಪ್ರತಿಷ್ಠಾಪಿಸುವುದು ಸಾಮಾನ್ಯ. ಮಕ್ಕಳು ತರಬೇತಿಯಲ್ಲಿ ಹಾಜರಾಗಿ ಅವರೇ ತಯಾರಿಸಿದ ಗಣಪತಿ ಪ್ರತಿಷ್ಠಾಪಿಸಲಿ. ಇದರರಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿದರು.
ಶಾಂತಿ ಸಭೆಯ ಬದಲಾಗಿ ಸಾಮರಸ್ಯ ಸಭೆ ಎಂದು ಕರೆಯೋಣ, ಈದ್‌ಮಿಲಾದ್ ಮೆರವಣಿಗೆಯಲ್ಲಿ ವಿಧಿಸಲಾಗುವ ಷರತ್ತುಗಳನ್ನು ಸರಳೀಕರಣ ಮಾಡಿಕೊಡಿ, ಗಣಪತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಜಾನಪದ ಶೈಲಿಯ ಡೊಳ್ಳು ಕುಣಿತ, ತಮಟೆ, ವೀರಗಾಸೆ ಮುಂತಾದ ಪ್ರದರ್ಶನಗಳಿಗೆ ಅವಕಾಶ ನೀಡಬೇಕು. ಸಭೆಯಲ್ಲಿ ಹಾಜರಾಗಿರುವ ಮುಖಂಡರು ಯಾವುದೇ ಹಬ್ಬಗಳಲ್ಲಿ ಯಾವುದೇ ತೊಂದರೆ ಮಾಡುವುದಿಲ್ಲ ಕಿಡಿಗೇಡಿಗಳು ಗಲಭೆಗಳು ಸೃಷ್ಠಿಸುತ್ತಾರೆ ಅವರ ಮೇಲೆ ನಿಗಾ ಇಡಿ. ಗಣಪತಿ ವಿಸರ್ಜನೆಗೆ ಪೊಲೀಸ್ ಇಲಾಖೆ ದಿನಾಂಕ ನಿಗದಿಪಡಿಸಬೇಕು,
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಈ.ತಿಮ್ಮಯ್ಯ, ಎಸ್.ಇ.ಗಂಗಾಧರ ಸ್ವಾಮಿ, ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.