ಕನ್ನಡಪ್ರಭ ವಾರ್ತೆ ಬೀದರ್ / ಹುಲಸೂರು
ಬೀದರ್ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಮುಂಗಾರು ಬಿತ್ತನೆಗೆ ರೈತ ಸಜ್ಜಾಗಿದ್ದಾನೆ. ಅದರಂತೆ ತಾಲೂಕು ಕೇಂದ್ರ ಹುಲಸೂರಿನ ಬಿತ್ತನೆ ಬೀಜ ವಿತರಣಾ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಪಡೆಯಲು ರೈತರು ಸರದಿ ಸಾಲಿನಲ್ಲಿ ನಿಲ್ಲಲಾಗದೇ ತಮ್ಮ ಪಾದರಕ್ಷೆಗಳನ್ನು ಸಾಲಿನಲ್ಲಿಟ್ಟು ಸರದಿ ಗಟ್ಟಿಯಾಗಿಸಿಕೊಂಡಿರುವ ಘಟನೆ ನಡೆದಿದೆ.ಹುಲಸೂರು ತಾಲೂಕಿನಾದ್ಯಂತ 26 ಬಿತ್ತನೆ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ತಾಲೂಕಿನ ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿ ಮೇ 31ರಿಂದಲೇ ಬೀಜ ವಿತರಣೆ ಆರಂಭಗೊಂಡಿದೆ ಆದರೆ ಹುಲಸೂರ, ಸೋಲದಾಬಕಾ, ಗಡಿಗೌಡಗಾಂವ್, ದೇವನಾಳ, ಹಾಲಹಳ್ಳಿ, ಕಾದರಾಬಾದ ವಾಡಿಯ ರೈತರಿಗೆ ಬಿತ್ತನೆ ಬೀಜ ವಿತರಣೆ ಶನಿವಾರ ಹುಲಸೂರು ಕೇಂದ್ರದಲ್ಲಿ ನಡೆಯುತ್ತಿರುವ ಕಾರಣ ಬೀಜ ಪಡೆಯಲು ನೂರಾರು ರೈತರು ಶುಕ್ರವಾರ ಮಧ್ಯ ರಾತ್ರಿಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದಾರೆ. ನಿಂತು ನಿಂತು ಸುಸ್ತಾಗಿ ಕೊನೆಗೆ ಪಾದರಕ್ಷೆಗಳನ್ನು ಸರದಿ ಸಾಲಿನಲ್ಲಿಡಲು ಮುಂದಾಗಿದ್ದಾರೆ.
ಹುಲಸೂರು ಸೇರಿದಂತೆ 4-5 ಗ್ರಾಮಗಳ ರೈತರಿಗೆ ಇದೇ ಕೇಂದ್ರದಿಂದ ಬಿತ್ತನೆ ಬೀಜ ವಿತರಣೆ ಮಾಡುತ್ತಿರುವುದರಿಂದ ವಿವಿಧ ಗ್ರಾಮಗಳ ರೈತರು ತಮ್ಮ ಸರತಿಗಾಗಿ ತಮ್ಮ ಪಾದರಕ್ಷೆಗಳನ್ನಿಟ್ಟು ಬೀಜ ಪಡೆಯುವ ಸ್ಥೀತಿ ಬಂದೊದಗಿದೆ. ರೈತರ ಜನ ಸಂಖ್ಯೆ ಆಧರಿಸಿ ಅಥವಾ ವ್ಯಾಪ್ತಿಯನ್ನು ಆಧರಿಸಿ ಕೇಂದ್ರಗಳನ್ನು ಹೆಚ್ಚುವರಿಯಾಗಿ ತೆರೆಯಬೇಕಿತ್ತು ಆದರೆ ಇಲ್ಲಿ ಹಾಗಾಗಿಲ್ಲ. ಸುತ್ತಮುತ್ತಲಿನ ಹಲವು ಹಳ್ಳಿಗಳನ್ನು ಜೋಡಿಸಿ ಬೀಜ ವಿತರಣೆ ಆರಂಭಿಸಿದರಿಂದ ರೈತರು ದೂರದ ಹಳ್ಳಿಗಳಿಂದ ಬಂದು ಇಡೀ ದಿನ ಬೀಜ ಪಡೆಯಲು ಕಾಯುವ ಸ್ಥಿತಿ ನಿರ್ಮಾಣವಾಗಿದೆ.ತಾಲೂಕು ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣಾ ಕೇಂದ್ರವನ್ನು ಮಾಡಲಾಗಿದೆ. ಇಲ್ಲಿ ಸಾವಿರಾರು ರೈತರು ಆಗಮಿಸಬೇಕಾದ ಅನಿವಾರ್ಯತೆ ಇದೆ. ಇದರ ಬದಲಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಆಧರಿಸಿ ಹಲವಾರು ಬೀಜ ವಿತರಣಾ ಕೇಂದ್ರಗಳನ್ನು ತೆರೆದಿದ್ದಲ್ಲಿ ತುಂಬಾ ಅನುಕೂಲಕರವಾಗುತ್ತಿತ್ತು.- ಸತೀಶ ಹಿರೇಮಠ, ಪ್ರಗತಿಪರ ರೈತ, ಗಡಿಗೌಡಗಾಂವ್, ಹುಲಸೂರು ತಾಲೂಕು
ಬೀಜ ವಿತರಣೆಗೆ ಚಾಲನೆ: ಹುಲಸೂರಿನಲ್ಲಿ ಶನಿವಾರದಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಿ ಬಾಲಕುಂದೆ ಅವರು ಬೀಜ ವಿತರಣೆಗೆ ಚಾಲನೆ ನೀಡಿದರು. ಬಿತ್ತನೆ ಬೀಜ ವಿತರಣೆ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಓಂಕಾರ ಪಟ್ನೆ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ವಿಶ್ವನಾಥ, ಬಾಬುರಾವ್ ಬಾಲಕುಂದೆ, ವಿನಾಯಕ ಪವಾರ, ಹಾಗೂ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಸಂಗಪ್ಪ ಬೇಲೂರ, ದತ್ತು ಕಾಕನಾಳೆ ಪಾಲ್ಗೊಂಡಿದ್ದರು.