ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ನಡೆದಿದ್ದ ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಸಂಬಂಧ ಕೆ.ಆರ್. ಪುರ ಕ್ಷೇತ್ರದ ಶಾಸಕರ ಆಪ್ತ ಎನ್ನಲಾದ ಹೆಣ್ಣೂರು ಜಗದೀಶ ಅಲಿಯಾಸ್ ಜಗ್ಗ ಸೇರಿದಂತೆ 17 ಮಂದಿ ಆರೋಪಿಗಳ ವಿರುದ್ಧ ಪೊಲೀಸರು ರೌಡಿ ಪಟ್ಟಿ ತೆರೆದಿದ್ದಾರೆ.ಹೆಣ್ಣೂರಿನ ಜಗ್ಗ, ಆತನ ಸಹಚರರಾದ ಬಿಳಿ ಶಿವಾಲಿ ಕೊತ್ತನೂರಿನ ಕೆ. ಕಿರಣ್, ರಾಮಮೂರ್ತಿ ನಗರದ ಮದನ್, ವಿಮಲ್ ರಾಜ್, ವಿಜಿನಾಪುರದ ಪ್ರದೀಪ್, ಶಿವ ಅಲಿಯಾಸ್ ಆಟೋ ಶಿವ, ಎ.ಪ್ರಸಾದ್, ಕೆ.ಆರ್. ಪುರದ ಪ್ಯಾಟ್ರಿಕ್, ಟಿ.ಸಿ. ಪಾಳ್ಯದ ಸಾಮ್ಯುಯಲ್, ಏರನಪಾಳ್ಯದ ಕೆ. ಮನೋಜ್, ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಪೆಮ್ಮದೊಡ್ಡಿ ಗ್ರಾಮದ ನರಸಿಂಹಮೂರ್ತಿ ಅಲಿಯಾಸ್ ಸಿಂಹ, ಚಿಕ್ಕದಾನಹಳ್ಳಿಯ ಕೆ. ಮುರುಗೇಶ್, ದಿನ್ನಹಳ್ಳಿಯ ಎಂ.ಅವಿನಾಶ್ ಅಲಿಯಾಸ್ ಅಭಿ, ಲಕ್ಕೂರು ಹೋಬಳಿಯ ವೀನಸಂದ್ರ ಗ್ರಾಮದ ಕೆ.ಕಿರಣ್ ಅಲಿಯಾಸ್ ಡೆಡ್ಲಿ ಕಿರಣ್, ಬಂಗಾರಪೇಟೆ ತಾಲೂಕಿನ ಮಾರಂಡಹಳ್ಳಿ ಗ್ರಾಮದ ಸುದರ್ಶನ್ ಅಲಿಯಾಸ್ ಚಿಕ್ಕು, ಬಾಣಸವಾಡಿಯ ನವೀನ್ ಕುಮಾರ್, ಕಮ್ಮನಹಳ್ಳಿಯ ಅರುಣ್ ಕುಮಾರ್ ಹೆಸರು ರೌಡಿ ಪಟ್ಟಿಗೆ ಸೇರಿದೆ.
ಈ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೂರ್ವ ವಿಭಾಗದ ಡಿಸಿಪಿ ಡಿ. ದೇವರಾಜ್ ಅವರು, ಪ್ರಕರಣದಲ್ಲಿ ಬಂಧಿತ ಎಲ್ಲ ಆರೋಪಿಗಳ ವಿರುದ್ಧ ರೌಡಿ ಪಟ್ಟಿ ತೆರೆದು ಕಣ್ಗಾವಲಿರಿಸಿದ್ದಾರೆ.ಜೂ.15 ರಂದು ಹಲಸೂರು ಕೆರೆ ಸಮೀಪ ತನ್ನ ಮನೆ ಮುಂದೆ ನಿಂತಿದ್ದ ರೌಡಿ ಬಿಕ್ಲು ಶಿವನ ಭೀಕರ ಹತ್ಯೆ ನಡೆದಿತ್ತು. ಭೂ ವಿವಾದದ ಹಿನ್ನೆಲೆಯಲ್ಲಿ ತನ್ನ ಸಹಚರರ ಮೂಲಕ ಬಿಕ್ಲು ಶಿವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಜಗ್ಗನ ಹತ್ಯೆ ಮಾಡಿಸಿದ್ದ ಆರೋಪ ಕೇಳಿ ಬಂದಿತ್ತು. ಈ ಕೃತ್ಯಕ್ಕೆಸಹಕರಿಸಿದ್ದ ಆರೋಪದ ಮೇರೆಗೆ ಶಾಸಕ ಬೈರತಿ ಬಸವರಾಜು ಅವರಿಗೆ ಪೂರ್ವ ವಿಭಾಗದ ಪೊಲೀಸರ ತನಿಖೆ ಬಿಸಿ ತಟ್ಟಿತ್ತು. ಈ ಕೃತ್ಯದಲ್ಲಿ 16 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ವಹಿಸಿತ್ತು.