ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಣೆವಿಘ್ನೇಶ್ ಎಂ. ಭೂತನಕಾಡು
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಾರ್ಡಿಯಾಕ್ ಯೂನಿಟ್ (ಹೃದ್ರೋಗ ಘಟಕ) ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು 10.89 ಕೋಟಿ ರು. ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಕೊಡಗಿನ ವೈದ್ಯಕೀಯ ಕ್ಷೇತ್ರ ಅಭಿವೃದ್ಧಿಯತ್ತ ಸಾಗಲು ಸಜ್ಜಾಗಿದೆ.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ಅವಿರತ ಪರಿಶ್ರಮದಿಂದ ಹೃದ್ರೋಗ ತಪಾಸಣಾ ಕೇಂದ್ರದ ಸೌಲಭ್ಯ ಜಿಲ್ಲೆಗೆ ಲಭ್ಯವಾಗುತ್ತಿದೆ. ಉದ್ದೇಶಿತ ಹೃದ್ರೋಗ ತಪಾಸಣಾ ಕೇಂದ್ರವು ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ) ಯೋಜನೆಯಡಿ ಕಾರ್ಯನಿರ್ವಹಿಸಲಿದ್ದು, ಈಗಾಗಲೇ ಉದ್ದೇಶಿತ ಹೃದ್ರೋಗ ತಪಾಸಣಾ ಕೇಂದ್ರ ಸ್ಥಾಪನೆಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸ್ಥಳ ಪರಿಶೀಲನಾ ಕಾರ್ಯ ನಡೆದಿದೆ.ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ಯುವ ಜನತೆ ಸೇರಿದಂತೆ ಹಲವರು ಜೀವ ಕಳೆದುಕೊಳ್ಳುತ್ತಿದ್ದಾರೆ. ಹೃದಯ ಸಂಬಂಧಿ ರೋಗಗಳ ಚಿಕಿತ್ಸೆಗಾಗಿ ಮೈಸೂರು, ಬೆಂಗಳೂರು, ಮಂಗಳೂರು ಹಾಗೂ ಇತರೆ ದೂರದ ಊರುಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗೆ ಚಿಕಿತ್ಸೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದ ಪರಿಣಾಮ ಜಿಲ್ಲೆಯವರು ಮಾರ್ಗದ ಮಧ್ಯೆ ಮೃತಪಟ್ಟಿರುವ ಸಾಕಷ್ಟು ಪ್ರಕರಣಗಳು ಈಗಾಗಲೇ ಸಂಭವಿಸಿದೆ.
ಘಟಕದಲ್ಲಿ ಹೃದಯಾಘಾತ, ತೀವ್ರ ಹೃದಯ ಬಡಿತದ ದೋಷಗಳು ಮತ್ತು ಹೃದಯ ಶಸ್ತ್ರಚಿಕಿತ್ಸೆಯ ನಂತರದ ಚೇತರಿಕೆಗಳಂತಹ ಸ್ಥಿತಿಗಳನ್ನು ನಿರ್ವಹಿಸುತ್ತದೆ. ಈ ಘಟಕಗಳು ಹೃದಯ ಬಡಿತ, ರಕ್ತದೊತ್ತಡ ಮತ್ತು ಆಮ್ಲಜನಕದ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ವಿಶೇಷ ಉಪಕರಣಗಳನ್ನು ಹೊಂದಿರುತ್ತವೆ. ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಕೂಡ ನಿರ್ಮಾಣವಾಗಲಿದೆ.
ಹೃದಯ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವ ರೋಗಿಗಳಿಗೆ ವಿಶೇಷ ತೀವ್ರ ನಿಗಾ ಒದಗಿಸುತ್ತದೆ, ಅವರಿಗೆ ಅಗತ್ಯವಾದ ಚಿಕಿತ್ಸೆ ಮತ್ತು ಮೇಲ್ವಿಚಾರಣೆಯನ್ನು ನೀಡಲಾಗುತ್ತದೆ. ಘಟಕ ಸ್ಥಾಪನೆಗೆ ಹಾಗೂ ಉಪಕರಣ ಖರೀದಿಸಲು ಈಗಾಗಲೇ ಸರ್ಕಾರ ಅನುದಾನ ನೀಡಿದ್ದು, ಆದಷ್ಟು ಬೇಗ ಈ ಆರೋಗ್ಯ ಸೇವೆ ಸಾರ್ವಜನಿಕರಿಗೆ ದೊರಕಲಿದ್ದು, ದೂರದ ಊರುಗಳಿಗೆ ತೆರಳುವ ಪರಿಸ್ಥಿತಿ ತಪ್ಪಲಿದೆ.-----------.
। ಡಾ. ಮಂತರ್ ಗೌಡ, ಶಾಸಕರು ಮಡಿಕೇರಿ ವಿಧಾನಸಭಾ ಕ್ಷೇತ್ರ
ಮಡಿಕೇರಿ ಶಾಸಕರ ಅವಿರತ ಪರಿಶ್ರಮದಿಂದ ಹೃದ್ರೋಗ ಘಟಕ ಸೌಲಭ್ಯ ಜಿಲ್ಲೆಗೆ ಲಭ್ಯವಾಗುತ್ತಿದೆ. ಉದ್ದೇಶಿತ ಹೃದ್ರೋಗ ಘಟಕವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲಿದ್ದು, ಈಗಾಗಲೇ ಉದ್ದೇಶಿತ ಹೃದ್ರೋಗ ತಪಾಸಣಾ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲನಾ ಕಾರ್ಯ ನಡೆದಿದೆ. ಮುಂದಿನ ದಿನಗಳಲ್ಲಿ ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.