ಪಂಚಮಸಾಲಿ ಪೀಠದಲ್ಲಿ ₹10 ಕೋಟಿ ಅಕ್ರಮ: ಉನ್ನತ ತನಿಖೆಯಾಗಲಿ

KannadaprabhaNewsNetwork |  
Published : Sep 18, 2026, 01:30 AM IST
17ಕೆಡಿವಿಜಿ1-ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಪಂಚಮಸಾಲಿ ಹಿರಿಯ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು. | Kannada Prabha

ಸಾರಾಂಶ

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ವಸತಿ ನಿಲಯ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ ₹10 ಕೋಟಿ ಅನುದಾನ ದುರುಪಯೋಗವಾಗಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ಕೈಗೊಳ್ಳುವಂತೆ ಲೆಕ್ಕ ಕೊಡಿ ಚಳವಳಿ ಹೋರಾಟ ಸಮಿತಿ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಒತ್ತಾಯಿಸಿದ್ದಾರೆ.

- ಎಚ್‌.ಎಸ್‌.ಶಿವಶಂಕರ ನೇತೃತ್ವದಲ್ಲಿ ಒತ್ತಾಯ । ಡಿಸಿಗೆ ಲೆಕ್ಕ ಕೊಡಿ ಚಳವಳಿ ಹೋರಾಟ ಸಮಿತಿ ಮನವಿ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ವಸತಿ ನಿಲಯ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ ₹10 ಕೋಟಿ ಅನುದಾನ ದುರುಪಯೋಗವಾಗಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ಕೈಗೊಳ್ಳುವಂತೆ ಲೆಕ್ಕ ಕೊಡಿ ಚಳವಳಿ ಹೋರಾಟ ಸಮಿತಿ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಒತ್ತಾಯಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಸಮಿತಿ ಹಾಗೂ ಸಮಾಜದ ಮುಖಂಡರು, ಸಮಾಜ ಬಾಂಧ‍ವರ ತೆರಳಿ ದೂರು ಮತ್ತು ಮನವಿ ಅರ್ಪಿಸಿ ಅವರು ಮಾತನಾಡಿದರು.

ಸ್ಥಳ ಪರಿಶೀಲಿಸದೇ ಅನುದಾನ ಬಿಡುಗಡೆ:

ಹರಿಹರ ಪಂಚಮಸಾಲಿ ಪೀಠದಲ್ಲಿ ವಿದ್ಯಾರ್ಥಿ ನಿಲಯ, ಸಮುದಾಯ ಭವನ ನಿರ್ಮಿಸಲೆಂದು ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಜನವರಿ-ಮಾರ್ಚ್‌ 2021ರ ಅವಧಿಯಲ್ಲಿ 44 ದಿನಗಳ ಅಂತರದಲ್ಲಿ 3 ಕಂತುಗಳಲ್ಲಿ ಪೂರ್ಣ ₹10 ಕೋಟಿ ಅನುದಾನ ಬಿಡುಗಡೆ ಮಾಡಿದೆ. ನಿಯಮಾನುಸಾರ ಕಟ್ಟಡದ ಪ್ರಗತಿಗೆ ಅನುಗುಣವಾಗಿ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗಬೇಕಿತ್ತು. ಆದರೆ, ಸ್ಥಳ ಪರಿಶೀಲಿಸದೇ, ಅನುದಾನ ಬಿಡುಗಡೆ ಮಾಡಲಾಗಿದ್ದು, ದುರುಪಯೋಗವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದರು.

ಟ್ರಸ್ಟಿಯೇ ಅಲ್ಲದ ವ್ಯಕ್ತಿ ಸಹಿ:

ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆ ಜಂಟಿ ತಪಾಸಣೆ ವರದಿ ಪ್ರಕಾರ ಪ್ರಸ್ತುತ ಸಮಾರು ₹5.95 ಕೋಟಿಯಷ್ಟು ಮಾತ್ರ ಕಾಮಗಾರಿಯಾಗಿದೆ. ಹೀಗಿದ್ದರೂ ಪೂರ್ಣ ಅನುದಾನ ಬಿಡುಗಡೆಯಾಗಿದ್ದು ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದೆ. ಅನುದಾನ ಬಿಡುಗಡೆಗೆ ಸಲ್ಲಿಸಲಾದ ಪ್ರಸ್ತಾವನೆಯಲ್ಲಿ ಟ್ರಸ್ಟಿಯೇ ಅಲ್ಲದ ವ್ಯಕ್ತಿ ಸಹಿ ಮಾಡಿ, ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಕಟ್ಟಡ ನಿರ್ಮಾಣಕ್ಕೆ ಲೈಸೆನ್ಸ್‌ ನೀಡಿಲ್ಲ:

ಶ್ರೀಮಠದ ಆವರಣದಲ್ಲಿ ಕಟ್ಟಡಗಳನ್ನು ನಿರ್ಮಿಸಲು ಯಾವುದೇ ಲೈಸೆನ್ಸ್ ನೀಡಿಲ್ಲ ಹಾಗೂ ಲಗತ್ತಿಸಲಾದ ಪರವಾನಿಗೆಯಲ್ಲಿ ಇರುವ ಸಹಿ ತಮ್ಮದಲ್ಲ ಎಂಬುದಾಗಿ ಸ್ವತಃ ಗ್ರಾಪಂ ಅಭಿವೃದ್ಧಿ ಅಧಿಕಾರಿಯೇ ದೃಢೀಕರಣ ಪತ್ರ ನೀಡಿದ್ದಾರೆ. ಪಿಡಿಒ ಹೀಗೆ ಸ್ಪಷ್ಟಪಡಿಸಿದ್ದರಿಂದ ಸುಳ್ಳು ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬುದು ಮೇಲ್ನೋಟಕ್ಕೂ ಸ್ಪಷ್ಟವಾಗುತ್ತದೆ ಎಂದು ದೂರಿದರು.

ಅಧಿಕಾರಿಗಳು- ಟ್ರಸ್ಟಿಗಳ ವಿರುದ್ಧ ತನಿಖೆ:

ಜಿಲ್ಲಾಧಿಕಾರಿ ತಕ್ಷಣ‍ವೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತಂದು, ಸರ್ಕಾರಿ ಅನುದಾನವನ್ನು ನಿಯಮಬಾಹಿರವಾಗಿ ಬಿಡುಗಡೆಯಾಗಲು ಕಾರಣರಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಶ್ರೀಮಠದ ಕೆಲವು ಟ್ರಸ್ಟಿಗಳ ವಿರುದ್ಧ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ, ದುರುಪಯೋಗವಾದ ಅಷ್ಟೂ ಹಣ ತಪ್ಪಿತಸ್ಥರಿಂದ ವಸೂಲು ಮಾಡಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಇಗೆ ದೂರು ನೀಡಿದ್ದೇವೆ. ಹಿಂದುಳಿದ ವರ್ಗಗಳ ಇಲಾಖೆಗೂ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೂ ಮನವಿ ಸಲ್ಲಿಸಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಲಿದ್ದೇವೆ. ಜಿಲ್ಲಾಡಳಿತ ಈ ಬಗ್ಗೆ ಉನ್ನತಮಟ್ಟದ ತನಿಖೆಗೆ ಕ್ರಮ ಕೈಗೊಳ್ಳಬೇಕು ಎಂದು ಎಚ್.ಎಸ್.ಶಿವಶಂಕರ ನೇತೃತ್ವದಲ್ಲಿ ಸಮಿತಿ ಮುಖಂಡರು, ಸಮಾಜದ ಮುಖಂಡರು, ಸಮಾಜ ಬಾಂಧವರು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಮನವಿ ಅರ್ಪಿಸಿದರು.

ಲೆಕ್ಕ ಕೊಡಿ ಚಳವಳಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಿ.ಪರಮೇಶ್ವರ ಗೌಡ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಕೆ.ಎನ್.ಹಾಲೇಶ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಸೋಮಣ್ಣ ಬೇವಿನಮರದ, ಸೋಮನಗೌಡ ಪಾಟೀಲ, ಎಚ್.ಎಸ್.ಯೋಗೇಶ, ಗಂಗಾಧರ ಶಾಬನೂರು, ಎಚ್.ಪಿ.ರಾಜಕುಮಾರ, ಕೊಟ್ಟೂರಿನ ಪಂಪಾಪತಿ ಅಂಗಡಿ, ಎನ್.ಬಸವರಾಜ, ಈಶ್ವರಪ್ಪ, ವಿನಾಯಕ ಕಡ್ಲಿ, ಕೆ.ಮಲ್ಲಿಕಾರ್ಜುನ, ಹನುಮಗೌಡ, ಶೇಖರಪ್ಪ ಇತರರು ಇದ್ದರು.

- - -

-17ಕೆಡಿವಿಜಿ1: ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಪಂಚಮಸಾಲಿ ಹಿರಿಯ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನುಗ್ಗೇಹಳ್ಳಿ ಸೊಸೈಟಿಗೆ ಅಧ್ಯಕ್ಷರಾಗಿ ಕಾರೇಕೆರೆ ಪ್ರಕಾಶ್‌ ಆಯ್ಕೆ
ಪ್ರವಾಸೋದ್ಯಮ ಅಭಿವೃದ್ಧಿಯಿಂದ ಜಿಲ್ಲೆಯ ಸೌಕರ್ಯ ಮೇಲ್ದರ್ಜೆಗೆ: ಸಾಗರ ಖಂಡ್ರೆ