ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಲೋಕಸಭಾ ಸದಸ್ಯ ಸಾಗರ ಖಂಡ್ರೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಲೋಕಸಭಾ ಸದಸ್ಯ ಸಾಗರ ಖಂಡ್ರೆ ತಿಳಿಸಿದರು.ಅವರು ನಗರದ ಕೋಟೆ ಆವರಣದಲ್ಲಿ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ‘ಸ್ವದೇಶಿ ದರ್ಶನ್ 2.0’ ಯೋಜನೆಯಡಿ ಕೈಗೊಳ್ಳಲಾಗಿರುವ 25 ಕೋಟಿ ರು. ವೆಚ್ಚದಲ್ಲಿ ಬೀದರ್ ಕೋಟೆ ಹಾಗೂ ಪಾಪನಾಶ ಕೆರೆ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಯೋಜನೆಯ ಭಾಗವಾಗಿ ಕೋಟೆಯಲ್ಲಿ ಹಿರಿಯ ನಾಗರಿಕರಿಗೆ ಇವಿ ಬಗಿ, ಹೆರಿಟೇಜ್ ವಾಕ್, ಪ್ರವಾಸಿ ಮಾಹಿತಿ ಕೇಂದ್ರ, ಆಕರ್ಷಕ ದೀಪಾಲಂಕಾರ, ಸೈಕಲ್ ಟ್ರ್ಯಾಕ್ ಹಾಗೂ ಫಾರೆಸ್ಟ್ ಟ್ರೇಲ್ ನಿರ್ಮಿಸಲಾಗುವುದು. ಅದೇ ರೀತಿ ಪಾಪನಾಶ ಕೆರೆ ಆವರಣದಲ್ಲಿ ಜಿಪ್‌ಲೈನ್, ರೋಪ್ ಕೋರ್ಸ್, ಬೋಟಿಂಗ್ ಜಟ್ಟಿ, ಬೃಹತ್ ಪ್ರವೇಶ ದ್ವಾರ ಹಾಗೂ ಮಕ್ಕಳ ಆಟದ ಮೈದಾನ ನಿರ್ಮಿಸಿ, ಡಿಜಿಟಲ್ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಲಾಗುವುದು ಎಂದು ವಿವರಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಬೀದರ್ ಕೋಟೆ ಹಾಗೂ ಪಾಪನಾಶ ದೇವಾಲಯಗಳು ಅಪಾರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿದ್ದು, ಈ ಪಾರಂಪರಿಕ ತಾಣಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವುದೇ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಐತಿಹಾಸಿಕ ಕೋಟೆ ಹಾಗೂ ಪಾಪನಾಶ ಕೆರೆ ಅಭಿವೃದ್ಧಿಯಿಂದ ಹೊರ ರಾಜ್ಯಗಳ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಸ್ಥಳೀಯ ಯುವಕರಿಗೆ ಪ್ರವಾಸಿ ಮಾರ್ಗದರ್ಶಿ (ಗೈಡ್) ತರಬೇತಿ ನೀಡಿ ಉದ್ಯೋಗ ಕಲ್ಪಿಸಲು ಅನುಕೂಲವಾಗಲಿದ್ದು, ಹೋಟೆಲ್, ಸಾರಿಗೆ ಹಾಗೂ ಸ್ಥಳೀಯ ವ್ಯಾಪಾರ ವಹಿವಾಟು ವೃದ್ಧಿಸಿ ಜಿಲ್ಲೆಯ ಆರ್ಥಿಕತೆಗೆ ದೊಡ್ಡ ಮಟ್ಟದ ಉತ್ತೇಜನ ಸಿಗಲಿದೆ ಎಂದರು.ಶಾಸಕ ರಹೀಮ್ ಖಾನ್ ಮಾತನಾಡಿ, ಬೀದರ್ ಕೋಟೆ ಹಾಗೂ ಚೌಖಂಡಿಯಂತಹ ಸ್ಮಾರಕಗಳಿಗೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಮರ್ಥ್ಯವಿದ್ದು, ಬಿಡುಗಡೆಯಾದ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದರು.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ ಮಾತನಾಡಿ, ‘ಪ್ರಸಾದ್-2’ ಯೋಜನೆಯಡಿ ಪಾಪನಾಶ ದೇವಾಲಯ ಅಭಿವೃದ್ಧಿಗೆ ಅನುದಾನ ಸಿಕ್ಕಿದ್ದು, ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲೂ ಇಕೋ ಟೂರಿಸಂಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಅಪ್ಪೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ. ಸಿಇಒ ಮಾಧವ್ ಗಿತ್ತೆ, ಸಹಾಯಕ ಆಯುಕ್ತ ಅಭಿನವ್ ಜೈನ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.