ಬರಪೀಡಿತ ಜಿಲ್ಲೆಗಳ ಎರಡನೇ ಪಟ್ಟಿಯಲ್ಲಿಯೂ ಜಗಳೂರು ತಾಲೂಕನ್ನು ಸಂಪೂರ್ಣ ನಿರ್ಲಕ್ಷಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಗೇಟ್‌ಗೆ ಬೀಗ ಜಡಿದು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಸ್ಥಳದಲ್ಲೇ ತಂಗುವ ಮೂಲಕ ಅಡುಗೆ ತಯಾರಿಸಿದ ರೈತ ಮುಖಂಡರು ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಜಗಳೂರು

ಬರಪೀಡಿತ ಜಿಲ್ಲೆಗಳ ಎರಡನೇ ಪಟ್ಟಿಯಲ್ಲಿಯೂ ಜಗಳೂರು ತಾಲೂಕನ್ನು ಸಂಪೂರ್ಣ ನಿರ್ಲಕ್ಷಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಗೇಟ್‌ಗೆ ಬೀಗ ಜಡಿದು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಸ್ಥಳದಲ್ಲೇ ತಂಗುವ ಮೂಲಕ ಅಡುಗೆ ತಯಾರಿಸಿದ ರೈತ ಮುಖಂಡರು ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ತಾಲೂಕು ಅಧ್ಯಕ್ಷ ಚಿರಂಜೀವಿ ಮಾತನಾಡಿ, ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಜಗಳೂರು ತಾಲೂಕಿಗೆ ಅನ್ಯಾಯ ಮಾಡಿದೆ. ಈ ಧೋರಣೆ ಖಂಡಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತಾಲೂಕನ್ನು ಬರಪೀಡಿತ ಎಂದು ಘೋಷಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ. ರಾತ್ರಿ ಇಲ್ಲೇ ಮಲಗಿ ಹೋರಾಟ ಮುಂದುವರಿಸುತ್ತೇವೆ. ಸರ್ಕಾರ ಸ್ಪಂದಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು. ಯಾರ ಪ್ರಾಣ ಹೋದರೂ ಧರಣಿ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.

​ಉಪಗ್ರಹ ಸರ್ವೇಯಿಂದ ವಾಸ್ತವ ತಿಳಿಯದು:

ತಾಲೂಕು ಕಾರ್ಯದರ್ಶಿ ರಾಜು ಭೈರನಾಯಕನಹಳ್ಳಿ ಮಾತನಾಡಿ, ತಾಲೂಕಿನಲ್ಲಿ ತೀವ್ರ ಅಭಾವವಿದ್ದರೂ ಬರಪೀಡಿತ ಪಟ್ಟಿಯಿಂದ ಕೈ ಬಿಟ್ಟಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹಾಗೂ ತಹಸೀಲ್ದಾರ್ ಕೆ.ಗುರುಬಸವರಾಜ್ ನೇರ ಹೊಣೆ. ಜಗಳೂರು ತಾಲೂಕಿನಲ್ಲಿ ಮಳೆ ಬಾರದೇ ಕೆಲ ರೈತರು ಮೆಕ್ಕೆಜೋಳ ಬೆಳೆ ನಾಶ ಮಾಡಿದ್ದಾರೆ. ಅಳಿದುಳಿದ ಮೆಕ್ಕೇಜೋಳ, ರಾಗಿ ಬೆಳೆಗಳೂ ಬಿಸಿಲಿನ ಝಳಕ್ಕೆ ಒಣಗಿಹೋಗಿವೆ. ನದಿ ಮೂಲವಿರುವ ಹರಿಹರ ತಾಲೂಕನ್ನು ಎರಡನೇ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ ಯಾವುದೇ ನದಿ ಮೂಲವಿಲ್ಲದ ಜಗಳೂರನ್ನು ನಿರ್ಲಕ್ಷಿಸಲಾಗಿದೆ. ಕೇವಲ ಸ್ಯಾಟಲೈಟ್ ಸರ್ವೇಯಿಂದ ವಾಸ್ತವ ತಿಳಿಯುವುದಿಲ್ಲ. ಅಧಿಕಾರಿಗಳ ತಂಡ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ನೈಜ ಪರಿಸ್ಥಿತಿ ಅರಿಯಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ರೈತ ಮುಖಂಡರಾದ ಗೌಡಗೊಂಡನಹಳ್ಳಿ ಸತೀಶ್, ಗುರುಸಿದ್ದಪ್ಪ, ಸಹದೇವ ರೆಡ್ಡಿ, ಕಸವನಹಳ್ಳಿ ನಾಗರಾಜ್, ತುಪ್ಪದಹಳ್ಳಿ ಗಂಗಾಧರಪ್ಪ, ಮಡ್ರಳ್ಳಿ ತಿಪ್ಪಣ್ಣ, ಪರುಸಪ್ಪ, ನೂರಾರು ರೈತರು ಭಾಗವಹಿಸಿದ್ದು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

- - -

-17ಜೆ.ಜಿ.ಎಲ್.3: ಪ್ರತಿಭಟನಾನಿರತ ರೈತರು ಅಡುಗೆ ಮಾಡುತ್ತಿರುವುದು.

-17ಜೆ.ಜಿ.ಎಲ್.4‌: ಜಗಳೂರು ತಾಲೂಕಿನಲ್ಲಿ ಮೆದಗಿನಕೆರೆ ಗ್ರಾಮದ ವ್ಯಾಪ್ತಿಯಲ್ಲಿ ಮೆಕ್ಕೆಜೋಳ ಸಂಪೂರ್ಣ ಒಣಗಿರುವುದು.