ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ₹1192.86 ಕೋಟಿ ವೆಚ್ಚದ ವಿವಿಧ ರೈಲ್ವೆ ಯೋಜನೆಗಳಿಗೆ ಸೋಮವಾರ ಚಾಲನೆ ಲಭಿಸಿತು. ಇದರಲ್ಲಿ ಕೆಲವೊಂದಿಷ್ಟನ್ನು ಲೋಕಾರ್ಪಣೆ ಮಾಡಿದ್ದರೆ, ಕೆಲ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ.ದೇಶದಲ್ಲಿ ರೈಲ್ವೆ ಇಲಾಖೆ ಕೈಕೊಂಡ ವಿವಿಧ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಚಾಲನೆ ನೀಡಿದ್ದು, ಅದರಲ್ಲಿ ಕರ್ನಾಟಕಕ್ಕೆ ಅಗ್ರ ಪಾಲು ಲಭಿಸಿದೆ.
34 ರೈಲ್ವೆ ನಿಲ್ದಾಣಗಳನ್ನು ಅಮೃತ್ ಯೋಜನೆಯಡಿ ಅಭಿವೃದ್ಧಿಗೆ ಚಾಲನೆ ನೀಡಿದ್ದರೆ, 22 ಕೆಳಸೇತುವೆ ಹಾಗೂ ಮೇಲ್ಸೇತುವೆಗಳನ್ನು ಲೋಕಾರ್ಪಣೆ ಮಾಡಲಾಗಿದೆ.ಹುಬ್ಬಳ್ಳಿ ವಿಭಾಗದ ಆಲಮಟ್ಟಿ, ಬಾದಾಮಿ, ಬಾಗಲಕೋಟೆ, ವಿಜಯಪುರ, ಮುನಿರಾಬಾದ್, ಸ್ಯಾನ್ವೋರ್ಡೆಮ್, ವಾಸ್ಕೋ ಡಿ ಗಾಮಾ ರೈಲ್ವೆ ನಿಲ್ದಾಣ ಸೇರಿದಂತೆ 7, ಬೆಂಗಳೂರು ವಿಭಾಗದ ತುಮಕೂರು, ವೈಟ್‌ಫೀಲ್ಡ್, ಬಂಗಾರಪೇಟೆ, ಚನ್ನಪಟ್ಟಣ, ಧರ್ಮಪುರಿ, ಹೊಸೂರ, ದೊಡ್ಡಬಳ್ಳಾಪುರ, ಹಿಂದೂಪುರ, ಕೆಂಗೇರಿ, ಕೃಷ್ಣರಾಜಪುರಂ, ಕುಪ್ಪಂ, ಮಲ್ಲೇಶ್ವರಂ, ಮಾಲೂರು, ಮಂಡ್ಯ, ರಾಮನಗರ ಸೇರಿದಂತೆ 15 ನಿಲ್ದಾಣ ಹಾಗೂ ಮೈಸೂರು ವಿಭಾಗದ ಸಾಗರ ಜಂಬಗಾರು, ಸಕಲೇಶಪುರ, ಶಿವಮೊಗ್ಗ ಟೌನ್, ಸುಬ್ರಹ್ಮಣ್ಯ ರೋಡ್, ತಾಳಗುಪ್ಪ, ತಿಪಟೂರು, ಬಂಟ್ವಾಳ, ಚಾಮರಾಜನಗರ, ಚಿಕ್ಕಮಗಳೂರ, ಹಾಸನ, ಚಿತ್ರದುರ್ಗ, ರಾಣಿಬೆನ್ನೂರ ಸೇರಿದಂತೆ 12 ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಡಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ಮೇಲ್ಸೇತುವೆ; ಕೆಳಸೇತುವೆವಲಯದ ವ್ಯಾಪ್ತಿಯಲ್ಲಿನ ₹112.27 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 15 ರೈಲ್ವೆ ಕೆಳಸೇತುವೆ, 7 ಮೇಲ್ಸೇತುವೆ ಸೇರಿದಂತೆ 22 ಸೇತುವೆಗಳನ್ನು ಲೋಕಾರ್ಪಣೆ ಮಾಡಲಾಗಿದೆ. ₹278.64 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ 7 ರೈಲ್ವೆ ಕೆಳಸೇತುವೆ, 1 ಮೇಲ್ಸೇತುವೆ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು.
ಏಕಕಾಲಕ್ಕೆ ಇಷ್ಟೆಲ್ಲ ಕಾಮಗಾರಿಗಳಿಗೆ ಶಂಕು ಸ್ಥಾಪನೆ, ಲೋಕಾರ್ಪಣೆ ಮಾಡಿದ್ದು ಇತಿಹಾಸ ಸರಿ ಎಂದು ಜೋಶಿ ಇದೇ ವೇಳೆ ಹೇಳಿದರು.ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ದೇಶಾದ್ಯಂತ ರೈಲ್ವೆ ನಿಲ್ದಾಣ, ಮಾರ್ಗಗಳ ಅಭಿವೃದ್ಧಿ ಕಾರ್ಯ ಸಾಗಿದೆ. ಅದರಂತೆ ಹುಬ್ಬಳ್ಳಿ ರೈಲು ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತೀಕರಿಸಲಾಗುವುದು ಎಂದು ಹೇಳಿದರು.
ಇತಿಹಾಸವೇ ಸರಿಭಾರತ, ಜಗತ್ತಿನ ಮೂರನೇ ಅತಿದೊಡ್ಡ ರೈಲು ಜಾಲ ಹೊಂದಿದ್ದು, ಈ ವರೆಗೆ ಸುಮಾರು 70000 ಸಾವಿರ ಕಿಮೀ ರೈಲು ಜಾಲ ಹೊಂದಿದ್ದೇವೆ. ರೈಲುಗಳ ಸಂಖ್ಯೆಯೂ ಹೆಚ್ಚಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು. ಇದೇ ವೇಳೆ 67 ವರ್ಷಗಳಲ್ಲಿ ರೈಲ್ವೆಯಲ್ಲಿ ಆಗದಷ್ಟು ಕೆಲಸಗಳು ಕಳೆದ 10 ವರ್ಷದ ಅವಧಿಯಲ್ಲೇ ಆಗಿವೆ. ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ ಎಂದು ಸಚಿವ ಜೋಶಿ ತಿಳಿಸಿದರು.
ಹತ್ತು ವರ್ಷದ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಮೂರ್ನಾಲ್ಕು ರೈಲ್ವೆ ಅಭಿವೃದ್ಧಿ ಕಾಮಗಾರಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಇಂದು ಮೋದಿ ಅವರ ಆಡಳಿತದಲ್ಲಿ ಒಂದೇ ಕಾಲಕ್ಕೆ 554 ರೈಲ್ವೆ ನಿಲ್ದಾಣ, 1500 ಕೆಳ ಸೇತುವೆ, ಮೇಲ್ಸೇತುವೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇವೆ ಎಂದು ಇದು ಮೋದಿ ಸರ್ಕಾರದ ಸಾಧನೆ. ಈ ಕಾರ್ಯಕ್ರಮವೊಂದು ಇತಿಹಾಸ ಸೃಷ್ಟಿಸಿದೆ ಎಂದರು.ದೇಶದಲ್ಲಿ 67 ವರ್ಷದಲ್ಲಿ ಅಂದರೆ 2014ರ ವರೆಗೆ ಕೇವಲ 21413 ಕಿಮೀ ರೈಲು ಮಾರ್ಗ ವಿದ್ಯುದ್ದೀಕರಣಗೊಂಡಿತ್ತು. ಆದರೆ, ಮೋದಿ ಆಡಳಿತದ ಹತ್ತೇ ವರ್ಷದಲ್ಲಿ ಬರೋಬ್ಬರಿ 39000 ಕಿಮೀ ರೈಲು ಮಾರ್ಗ ವಿದ್ಯುದ್ದೀಕರಣವಾಗಿದೆ. ಅಂದರೆ ಶೇ. 90ರಷ್ಟು ವಿದ್ಯುದ್ದಿಕರಣ ಪೂರ್ಣಗೊಳಿಸಿದ್ದೇವೆ ಎಂದರು.
ಅಂತಾರಾಷ್ಟ್ರೀಯ ಮಟ್ಟಕ್ಕೆಹುಬ್ಬಳ್ಳಿ ರೈಲ್ವೆ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಧುನೀಕರಣ ಮಾಡಲಾಗುವುದು. ವಿಮಾನ ನಿಲ್ದಾಣದಲ್ಲಿ ಯಾವ್ಯಾವ ಸೌಲಭ್ಯಗಳಿರುತ್ತವೆಯೋ ಆ ಸೌಲಭ್ಯಗಳನ್ನು ಕಲ್ಪಿಸುವುದೇ ನಮ್ಮ ಗುರಿ. ಮೋದಿ ಹೇಳಿದಂತೆ ನಾವು ಸಣ್ಣ ಕನಸು ಕಾಣುವುದೇ ಇಲ್ಲ. ಏನೇ ಇದ್ದರೂ ದೊಡ್ಡ ಕನಸನ್ನೇ ಕಾಣುತ್ತೇವೆ. ಅದನ್ನು ಸಾಕಾರಗೊಳಿಸಲು ಹಗಲಿರುಳು ದುಡಿಯುತ್ತೇವೆ ಎಂದರು.
ಅಣ್ಣಿಗೇರಿ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿ, ನಾನು ನನ್ನ ಮಠದ ಅಭಿವೃದ್ಧಿಗೆ ಎಂದು ಕೈ ಚಾಚಿಲ್ಲ. ಅಣ್ಣಿಗೇರಿ ಪಟ್ಟಣ ಅಭಿವೃದ್ಧಿಯಾದರೆ ನನ್ನ ಮಠ ಅಭಿವೃದ್ಧಿಯಾದಂತೆ. ಅದರಂತೆ ಈಗ ಕೆಲಸಗಳು ನಡೆಯುತ್ತಿವೆ ಎಂದರು.ಶಾಸಕ ಮಹೇಶ ಟೆಂಗಿನಕಾಯಿ, ಪುರಸಭೆ ಅಧ್ಯಕ್ಷೆ ಮೆಹಬೂಬಿ ನವಲಗುಂದ, ಉಪಾಧ್ಯಕ್ಷೆ ಜಯಲಕ್ಷ್ಮೀ ಜಕರಡ್ಡಿ, ನೈರುತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಸಂಜೀವ ಕಿಶೋರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.