- ಸುಗಮ ವಾಹನ ಸಂಚಾರಕ್ಕೆ ಕೆಳಸೇತುವೆ ನಿರ್ಮಾಣ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ - - -
ದಾವಣಗೆರೆಯ ಪ್ರಮುಖ ಪ್ರವೇಶ ದ್ವಾರ ಬಾಡಾ ಕ್ರಾಸ್ ಬಳಿ ವಾಹನ ಸಂಚಾರ ದಟ್ಟಣೆ ನಿವಾರಣೆ, ಸುಗಮ ಸಂಚಾರ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ₹15.90 ಕೋಟಿ ವೆಚ್ಚದಲ್ಲಿ ವಾಹನಗಳ ಕೆಳಸೇತುವೆ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಿದ್ದು, ಆದಷ್ಟು ಬೇಗನೆ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.
ನಗರದ ಬಾಡಾ ಕ್ರಾಸ್ ಬಳಿ ನೂತನ ಕೆಳ ಸೇವುತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ-48ರ ಚಿತ್ರದುರ್ಗ- ದಾವಣಗೆರೆ ಮಧ್ಯೆ ಆರು ಪಥಗಳ ಅಭಿವೃದ್ಧಿ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬಾಡಾ ಕ್ರಾಸ್ ಬಳಿ ಕಿ.ಮೀ.ಗಳ 255+770ರಲ್ಲಿ ವಾಹನ ಕೆಳಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.ಬಾಡಾ ಕ್ರಾಸ್ ಬಳಿ ಹೆಚ್ಚುತ್ತಿರುವ ವಾಹನ ಸಂಚಾರ ದಟ್ಟಣೆ, ಅಪಘಾತ ಸಂಭವ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಅನೇಕ ವರ್ಷದಿಂದ ನಿರಂತರ ಪ್ರಯತ್ನ ನಡೆಸಲಾಗಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಹಕಾರದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಎನ್ಎಚ್‌ಎಐ ಅಧಿಕಾರಿಗಳ ಜೊತೆಗೆ ಹಲವು ಸುತ್ತಿನ ಚರ್ಚೆ ನಡೆಸಲಾಗಿತ್ತು. ಬೆಂಗಳೂರು, ದಾವಣಗೆರೆ ಸಭೆಗಳಲ್ಲಿ ಸ್ಥಳೀಯರ ಬೇಡಿಕೆ ಪ್ರಸ್ತಾಪಿಸಿ, ಯೋಜನೆಯಲ್ಲಿ ಅಗತ್ಯ ಬದಲಾವಣೆ ತರಲು ಒತ್ತಾಯಿಸಲಾಗಿತ್ತು ಎಂದು ಹೇಳಿದರು.
ಬೆಂಗಳೂರು, ಹುಬ್ಬಳ್ಳಿ ಹಾಗೂ ದಾವಣಗೆರೆ ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲ ಆಗಲಿದೆ. ಕೆಳಸೇತುವೆ ಕಾಮಗಾರಿ ಒಪ್ಪಂದದ ಅವಧಿ 11 ತಿಂಗಳಾಗಿದೆ. ಅಷ್ಟರಲ್ಲೇ ಕಾಮಗಾರಿ ಪೂರ್ಣಗೊಳಿಸುವುದಾಗಿ ಎನ್ಎಚ್ಎಐ ಅಧಿಕಾರಿಗಳು ಹೇಳಿದ್ದಾರೆ. ಕಾಮಗಾರಿ ಅವಧಿಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗದಂತೆ ಪ್ರಾಧಿಕಾರ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಕುಂದುವಾಡ ಕೆರೆ ಸಮೀಪದ ಕೆಳ ಸೇತುವೆ ಸಂಪರ್ಕ ರಸ್ತೆಯ ವಿನ್ಯಾಸದ ಕುರಿತು ರೈತರು ಆಕ್ಷೇಪಡಿಸಿದ್ದರು. ಸ್ಥಳೀಯರಿಗೆ ಅನುಕೂಲ ಆಗುವಂತೆ ರಸ್ತೆ ಸಂಪರ್ಕ, ಜೋಡಣೆಯಲ್ಲಿ ಅಗತ್ಯ ಬದಲಾವಣೆಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದರು. ಅದರಂತೆ ಕಾಮಗಾರಿ ಸಾಗಿದೆ. ಎನ್ಎಚ್-48ರ 6 ಪಥದ ಅಭಿವೃದ್ಧಿ ಕಾಮಗಾರಿಯಲ್ಲಿ ವಿಳಂಬ ಆಗುತ್ತಿರುವ ಭಾಗಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಪ್ರಾಧಿಕಾರದ ಅಧಿಕಾರಿಗಳು, ಸ್ಥಳೀಯ ಮುಖಂಡರು, ನಿವಾಸಿಗಳು ಇದ್ದರು.
(ಕೋಟ್)
- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ.
-3ಕೆಡಿವಿಜಿ13: ದಾವಣಗೆರೆಯ ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಕೆಳಸೇತುವೆ ನಿರ್ಮಾಣಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭೂಮಿಪೂಜೆ ನೆರವೇರಿಸಿದರು.